ಬೆಂಗಳೂರು(ಜು.25): ಮಹಿಳೆಯೊಬ್ಬರಿಗೆ ಉಸಿರಾಟದ ಸಮಸ್ಯೆಯಾಯಿತು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದಾಗ ಕರೋನಾ ಸೋಂಕು ದೃಢಪಟ್ಟಿತು. ಈ ಸುದ್ದಿ ಕೇಳಿ ಆಕೆಯ ಪತಿಗೆ ಹೃದಸ್ತಂಭನವಾಗಿ ಅಸುನೀಗಿದರು. ಪತಿ ಅಂತ್ಯಕ್ರಿಯೆ ನಂತರ ಹಿರಿಯ ಪುತ್ರನಿಗೂ ಹೃದಸ್ತಂಭನವಾಗಿ ಸಾವನ್ನಪ್ಪಿದರು. ಈ ನಡುವೆ ಮಹಿಳೆ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಮೃತಪಟ್ಟರು.

- ಹೀಗೆ ಈ ಮೊದಲೇ ಗಂಡ ಹಾಗೂ ಮಗನನ್ನು ಕಳೆದುಕೊಂಡು ಈಗ ಸೋಂಕಿಗೆ ಬಲಿಯಾದ ವಿಜಿನಾಪುರದ ಮಹಿಳೆಯ ದೇಹ ನೀಡಲು, ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸಾ ವೆಚ್ಚ 9 ಲಕ್ಷ ರು. ಪಾವತಿಸುವಂತೆ ಕುಟುಂಬ ವರ್ಗಕ್ಕೆ ಷರತ್ತು ವಿಧಿಸಿದ ಘಟನೆ ನಗರದಲ್ಲಿ ನಡೆದಿದೆ.

ಧಾರವಾಡ: ಸತ್ತ ವ್ಯಕ್ತಿ ನೀರು ಕುಡಿದನೆಂದು ಆಸ್ಪತ್ರೆಗೆ ಓಡೋಡಿ ಬಂದ ಜನರು..!

ಕುಟುಂಬಸ್ಥರು ಹಣ ಪಾವತಿಸದ ಪರಿಣಾಮ ಸುಮಾರು ನಾಲ್ಕು ತಾಸು ಮೃತ ದೇಹ ನೀಡಲು ಮುಂದಾಗಿಲ್ಲ. ‘ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ನೀಡಿದ್ದೇವೆ. 9 ಲಕ್ಷ ರು. ಶುಲ್ಕವಾಗಿದೆ. ಹಣ ನೀಡಿ ಮೃತದೇಹ ಪಡೆಯಿರಿ’ ಎಂದು ಆಸ್ಪತ್ರೆಯವರು ಕಟ್ಟನಿಟ್ಟಿನ ಸೂಚನೆ ನೀಡಿದ್ದರು ಎಂದು ಮೃತರ ಸಂಬಂಧಿಕರು ಮಾಧ್ಯಮಗಳ ಮುಂದೆ ಬಂದು ಆರೋಪ ಮಾಡಿದರು.

ಈ ಸುದ್ದಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆಯೇ ಬಿಬಿಎಂಪಿ ಅಧಿಕಾರಿಗಳು ಮಧ್ಯ ಪ್ರವೇಶಿಸಿದರು. ಬಳಿಕ ಹಣ ಪಡೆಯದೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿಸಿದರು ಎಂದು ಅವರು ದೂರಿದ್ದಾರೆ. ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಪಡೆಯಲು ಸಾಕಷ್ಟುಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

ನಡೆದಿದ್ದು ಏನು?:

ಕೆ.ಆರ್‌.ಪುರದ ಬಳಿಯ ವಿಜಿನಾಪುರದಲ್ಲಿ ನೆಲೆಸಿರುವ ಕುಟುಂಬದಲ್ಲಿ ಮಹಿಳೆಯೊಬ್ಬರಿಗೆ ಜುಲೈ 13ರಂದು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣ ಆಕೆಯನ್ನು ಐಟಿಪಿಎಲ್‌ ಬಳಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಈ ಘಟನೆಯನ್ನು ನೋಡಿದ ಆಕೆಯ ಪತಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯ ಬಳಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿ ಮನೆಗೆ ಹಿಂದಿರುಗಿದ ಎರಡು ದಿನ ಕಳೆದಿತ್ತು. ಘಟನೆಯಿಂದ ನೊಂದು ಹಿರಿಯ ಪುತ್ರನಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ಆದರೆ, ಹತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪತಿ ಜುಲೈ 24 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು.

ಆರೋಗ್ಯಾಧಿಕಾರಿ ಕುಟುಂಬ ಮೂವರು ಸೋಂಕಿಗೆ ಬಲಿ

ಮೃತ ದೇಹವನ್ನು ನೀಡಲು ಆಸ್ಪತ್ರೆಯ ಆಡಳಿತ ಮಂಡಳಿ, ‘ಮೃತರ ಚಿಕಿತ್ಸೆಗಾಗಿ 9 ಲಕ್ಷ ರು. ವೆಚ್ಚವಾಗಿದೆ. ಸಂಪೂರ್ಣ ಹಣ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ’ ಎಂದು ಸೂಚನೆ ನೀಡಿದ್ದರು. ‘ಹಣ ಇಲ್ಲ’ ಎಂದಾಗ ಮೃತ ದೇವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಕಟ್ಟನಿಟ್ಟಿನ ಸೂಚನೆ ನೀಡಿದ್ದರು.

ಘಟನೆಯಿಂದ ಮನ ನೊಂದಿದ್ದ ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆಸ್ಪತ್ರೆಯ ಷರತ್ತು ವಿಧಿಸಿರುವ ಸಂಬಂಧ ಎಲ್ಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿದ ಬಿಬಿಎಂಪಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸೂಚನೆ ನೀಡಿತು. ನಂತರ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು ಎಂದು ಮೃತರ ಸಂಬಂಧಿ ಸುಲ್ತಾನ್‌ ಮಿರ್ಜಾ ‘ಕನ್ನಡ ಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.