ಶಿವಮೊಗ್ಗ(ಸೆ.24): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿನ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಆದ್ಯತೆ ನೀಡಲಾಗುವುದು ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರುವ ನಿರೀಕ್ಷೆಯಿದೆ. ಒಂದು ಪಕ್ಷ ತೀರ್ಪು ಅವರ ಪರ ಬಾರದಿದ್ದರೆ ಅವರ ಜೊತೆ ಕುಳಿತು ಉಪ ಚುನಾವಣೆ ಪಕ್ಷದ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು. ಅವರಿಗೆ ನಾವು ಬಹಳ ಪ್ರಾಮುಖ್ಯತೆ ಕೊಡಬೇಕಾಗುತ್ತದೆ ಎಂದಿದ್ದಾರೆ. ಕಳೆದ ಸಂಸತ್‌ ಚುನಾವಣೆಯಲ್ಲಿ 25 ಸ್ಥಾನ ಹಾಗೂ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಗೆದ್ದಿದ್ದೇವೆ. ಮುಳುಗುತ್ತಿರುವ ಹಡಗಾಗಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಮಗೆ ಪ್ರತಿಸ್ಪರ್ಧಿಯಲ್ಲ. ಅವರು ಒಂದು ಸ್ಥಾನವನ್ನು ಕೂಡ ಗೆಲುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

27ಕ್ಕೆ ಅಲ್ಲ, ಅ. 1ಕ್ಕೆ ಮೇಯರ್ ಚುನಾವಣೆ..!

ಮಾಜಿ ಸಿಎಂ ಸಿದ್ಧರಾಮಯ್ಯಅವರನ್ನು ಮತದಾರರು ಸುಮಾರು 35 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಅದೇ ರೀತಿ ಕುಟುಂಬ ರಾಜಕಾರಣದ ಪಕ್ಷ ಎಂದು ಜೆಡಿಎಸ್‌ನ್ನು ಆ ಪಕ್ಷದವರೆ ನೇರ ಆಪಾದನೆ ಮಾಡಿ ಜೆಡಿಎಸ್‌ನ್ನು ತಿರಸ್ಕರಿಸುತ್ತಿದ್ದಾರೆ. ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಪುತ್ರನನ್ನೇ ಸೋಲಿಸಿ ಮತದಾರರು ಜೆಡಿಎಸ್‌ ಪಕ್ಷವನ್ನು ಕೂಡ ದೂರವಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ನನ್ನ ಸರ್ಕಾರ ಕೆಟ್ಟಸರ್ಕಾರವಾಗಿತ್ತು. ಇದಕ್ಕೆ ಕಾಂಗ್ರೆಸ್‌ನವರೇ ಕಾರಣ ಎಂದು ಕುಮಾರಸ್ವಾಮಿ ಅವರೆ ಹೇಳುತ್ತಿದ್ದಾರೆ. ಹೀಗಾಗಿ, ಬಲವಾದ ಸಂಘಟನೆ ಹೊಂದಿರುವ ಬಿಜೆಪಿ ಉಪಚುನಾವಣೆಯಲ್ಲಿ ಎಲ್ಲ 15 ಸ್ಥಾನದಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಸ್ಪೀಕರ್‌ ಆಗಿ ನಡೆದುಕೊಳ್ಳದೇ, ಕಾಂಗ್ರೆಸ್‌ ಏಜೆಂಟ್‌ ರೀತಿ ಮತ್ತು ಸಿದ್ಧರಾಮಯ್ಯ ಅವರ ಕೈಗೊಂಬೆಯಾಗಿ ವರ್ತಿಸಿದ್ದಾರೆ. ಅವರು ಸ್ಪೀಕರ್‌ ಆಗಿದ್ದಾಗ ಕೈಗೊಂಡ ನಿರ್ಧಾರವೇ ಸಂವಿಧಾನಕ್ಕೆ ವಿರುದ್ಧವಾದುದಾಗಿದ್ದು ಎಂದು ಟೀಕಿಸಿದ್ದಾರೆ.

ದೋಸ್ತಿಗಳ ಮಧ್ಯೆ ಹದ್ದು-ಗಿಣಿ ಗುದ್ದಾಟ: ಸಿದ್ದು ಕೊಟ್ಟ ಏಟಿಗೆ ಕುಮಾರಣ್ಣ ಒದ್ದಾಟ!

ಶಾಸಕ ಜಿ.ಟಿ. ದೇವೆಗೌಡರು ವಿಶ್ವಾಸ ಹಾಗೂ ಸ್ನೇಹದಿಂದ ನಮ್ಮ ಜೊತೆ ಗುರುತಿಸಿಕೊಂಡಿದ್ದಾರೆಯೇ ವಿನಃ ರಾಜಕಾರಣದ ದೃಷ್ಟಿಯಿಂದಲ್ಲ. ಅವರು ನಮ್ಮ ಜೊತೆ ಮಾತನಾಡಿದ್ದಾರೆಂದ ತಕ್ಷಣ ಬಿಜೆಪಿಗೆ ಬಂದ ಹಾಗಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಣೇಬೆನ್ನೂರಿನಿಂದ ಕಾಂತೇಶ್‌ ಸ್ಪರ್ಧೆ ಇಲ್ಲ:

ತಮ್ಮ ಪುತ್ರ ಕೆ. ಇ. ಕಾಂತೇಶ್‌ ರಾಣೇಬೆನ್ನೂರಿನಿಂದ ಸ್ಪರ್ಧಿಸುತ್ತಾರೆ ಎಂಬ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಯಾರೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಮಾತ್ರಕ್ಕೆ ಇದೆಲ್ಲ ಸಾಧ್ಯವೇ. ಅಂತಹ ಪ್ರಸ್ತಾಪವೇ ಇಲ್ಲ. ಇದು ಕೆಲವು ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೇಳಿದ್ದು. ಇದಕ್ಕೆ ಪ್ರತಿಕ್ರಿಯೆ ನೀಡಲಾಗದು ಎಂದರು.