ಬೇಲೂರು(ಮೇ.01):  ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮದುವೆ ಮಾಡಿಸಲು ಬಂದಿದ್ದ ಪುರೋಹಿತರೊಬ್ಬರು ತಲೆಗೆ ಹಾಕಿದ್ದ ಹೆಲ್ಮೆಟ್‌ಅನ್ನು ಸಹ ತೆಗೆಯದೆ ಗಂಡು ಹೆಣ್ಣು ಹಾಗೂ ಸಂಬಂಧಿಕರ ಜೊತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆ ಮಾಡಿಸಿದ ಘಟನೆ ತಾಲೂಕಿನ ದಬ್ಬೆ ಗ್ರಾಮದಲ್ಲಿ ಈಚೆಗೆ ನಡೆದಿದೆ.

ಕೊರೋನಾ ವೈರಸ್‌ ಹರಡದಿರಲು ಸಾಮಾಜಿಕ ಅಂತರದ ಜೊತೆಗೆ ಜೊತೆಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಆದೇಶವಿದ್ದರೂ ಕೆಲವರು ತಲೆ ಕೆಡಿಸಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಖಕ್ಕೆ ಮಾಸ್ಕ್‌ ಧರಿಸದೇ ಉಡಾಫೆ ವರ್ತನೆ ತೋರುತ್ತಾರೆ. ಅದರಲ್ಲೂ ಜನ ಸೇರುವ ಜಾಗದಲ್ಲಿ ಕೂಡ ಕೆಲವರು ಮಾಸ್ಕ್‌ ಧರಿಸಲು ಹಿಂದೆ ಮುಂದೆ ನೋಡುತ್ತಾರೆ.

ಕಲಬುರಗಿ: ಕೊರೋನಾ ಸೋಂಕಿನಿಂದ ವೈದ್ಯೆ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಆದರೆ, ಇದಕ್ಕೆ ಅಪವಾದ ಎಂಬಂತೆ ಮದುವೆ ಮಾಡಿಸುವ ಪುರೋಹಿತರೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಬಂದು ತಲೆಯ ಮೇಲಿದ್ದ ಹೆಲ್ಮೆಟ್‌ ಅನ್ನು ತೆಗೆಯದೆ ಮಾಸ್ಕ್‌ ಬಿಚ್ಚದೆ ಸಾಮಾಜಿಕ ಅಂತರ ಕಾಯ್ದುಕೊಂಡು ಶುಭ ಕಾರ್ಯವನ್ನು ನಡೆಸಿಕೊಟ್ಟು ಮಹಾಮಾರಿ ಕೊರೋನಾ ಸೋಂಕಿನ ಬಗ್ಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ದಬ್ಬೆ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ಕೆಲವೇ ಜನರ ನಡುವೆ ಮದುವೆ ಕಾರ್ಯಕ್ರಮ ತಡೆಯಲಾಗಿತ್ತು. ಮದುವೆ ಕಾರ್ಯಕ್ರಮಕ್ಕೆ ಸ್ಕೂಟರ್‌ನಲ್ಲಿ ಬಂದ ಪುರೋಹಿತರು ತಮ್ಮ ಹೆಲ್ಮೆಟ್‌ಅನ್ನು ತೆಗೆಯದೆ ಚಪ್ಪರದಲ್ಲಿ ಬಂದು ಕುಳಿತು ಶುಭ ಕಾರ್ಯಕ್ಕೆ ಬೇಕಾದ ಸರಂಜಾಮುಗಳನ್ನು ಹೊಂದಿಸ ತೊಡಗಿದರು. ಇದನ್ನು ಕಂಡ ಹೆಣ್ಣಿನ ಪೋಷಕರು ಇದೇನು ಜೋಯಿಸರೇ.! ತಲೆಗೆ ಹೆಲ್ಮೆಟ್ಟು ಹಾಕಿಕೊಂಡು ಕುಳಿತಿದ್ದೀರಾ?, ಹೆಲ್ಮೆಟ್‌ ತೆಗೆದು ಶುಭ ಕಾರ್ಯ ಮಾಡಬಹುದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಪುರೋಹಿತರು ಮಹಾಮಾರಿ ಕೊರೋನಾ ಸೋಂಕಿನ ಬಗ್ಗೆ ಕಾಳಜಿ ವಹಿಸಿ ಎಂದು ಸರ್ಕಾರ ಹೇಳುತ್ತಲೇ ಇದೆ. ಆದರೆ, ಈಗಲೂ ಸಾಕಷ್ಟುಜನರು ಗಮನ ಹರಿಸುತ್ತಿಲ್ಲ. ಒಮ್ಮೆ ಈ ರೋಗ ಬಂದರೆ ಸಾವೇ ಗತಿ!, ಮೊದಲೇ ಈ ಮದುವೆ ಸಮಾರಂಭದಲ್ಲಿ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುವುದು ಗೊತ್ತಾಗುವುದಿಲ್ಲ. ನಾನಂತೂ ನನ್ನ ಸುರಕ್ಷತೆಗೆ ಆದ್ಯತೆ ಕೊಡುತ್ತೇನೆ ಎಂದ ಅವರು, ಪೋಷಕರು ಕೂಡ ಧಾರೆ ಎರೆಯುವ ಮತ್ತು ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ನಿಲ್ಲಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿ ಮದುವೆ ಮಾಡಿಸಿದ ಘಟನೆ ನಡೆದಿದೆ.