ಕಾರವಾರ[ಡಿ.19]:  ಮಾರುಕಟ್ಟೆಯಲ್ಲಿ ಈರುಳ್ಳಿ ದರ 200ರಿಂದ 300 ರು. ಎಷ್ಟೇ ಆಗಲಿ, ಇವರು ತಲೆಕೆಡಿಸಿಕೊಳ್ಳುವುದೇ ಇಲ್ಲ. ಏಕೆಂದರೆ ಮನೆ ಮನೆಯಲ್ಲೂ ತಲೆಯ ಮೇಲೆಯೇ ಈರುಳ್ಳಿ ತೊನೆದಾಡುತ್ತಿರುತ್ತವೆ. ವರ್ಷವಿಡಿ ಸಾಲು ವಷ್ಟು ಈರುಳ್ಳಿ ಖರೀದಿಸಿಟ್ಟವರು ಈಗ ದರ ಎಷ್ಟೇ ಆಗಲಿ ಬಾಯಲ್ಲಿ ಈರುಳ್ಳಿ ಪಕೋಡಾ ನಲಿಯುತ್ತಲೆ ಇರುತ್ತದೆ.

ಕುಮಟಾದ ಸಿಹಿ ಈರುಳ್ಳಿ ಗೊಂಚಲುಗಳು ಇನ್ನೂ ಸಾಕಷ್ಟು ಮನೆಗಳಲ್ಲಿವೆ. ದೇಶಾದ್ಯಂತ ಈರುಳ್ಳಿ ಕಣ್ಣೀರು ತರಿಸಿದ್ದರೆ, ಉತ್ತರ ಕನ್ನಡದಲ್ಲಿ ಕೆಲವೆಡೆ ಕಳೆದ ಬೇಸಿಗೆಯಲ್ಲಿ ಖರೀದಿಸಿ ತೂಗುಹಾಕಿಟ್ಟಿದ್ದರಿಂದ ಈರುಳ್ಳಿ ರೇಟು ಒಂದು ಸಮಸ್ಯೆಯೇ ಆಗಿಲ್ಲ. ಮನೆ ಮನೆಗಳಲ್ಲೂ ಈರುಳ್ಳಿ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ. ಅಲ್ಲಲ್ಲಿ ಈರುಳ್ಳಿಗಾಗಿ ಹೊಡೆ ದಾಟವೂ ನಡೆದಿದೆ. ಸಾಮಾಜಿಕ ಜಾಲತಾಣ ದಲ್ಲೂ ಅದೇ ಪೋಸ್ಟ್‌ಗಳು, ಟಿಕ್‌ಟಾಕ್, ಜೋಕ್‌ಗಳು, ಮಾಧ್ಯಮಗಳಲ್ಲೂ ಅದೇ ಸುದ್ದಿ, ಆದರೆ ಉತ್ತರ  ಕನ್ನಡದಲ್ಲಿ ವರ್ಷವಿಡಿ ಬಳಕೆಗಾಗಿ ಈರುಳ್ಳಿ ಸಂಗ್ರಹಿಸಿಟ್ಟವರಿಗೆ ರೇಟು ಎಷ್ಟಾದರೂ ಸಮಸ್ಯೆ ಯಾಗದು. 

ಆಹಾರಕ್ರಮದಲ್ಲೂ ಬದಲಾವಣೆ ಯಾಗದು. ಭರ್ಜರಿ ಮಾರಾಟ: ಕುಮಟಾ ಸಮೀಪದ ಹಂದಿಗೋಣ, ಅಳ್ವೆಕೋಡಿ, ವನ್ನಳ್ಳಿಗಳಲ್ಲಿ ಪ್ರತಿವರ್ಷ ಹಂಗಾಮಿನಲ್ಲಿ ಅಂದರೆ ಏಪ್ರಿಲ್, ಮೇ ಈ ಎರಡು ತಿಂಗಳಲ್ಲಿ ಬೆಳೆ ಬರುತ್ತದೆ. ಕುಮಟಾ ಹೊನ್ನಾವರ ಹೆದ್ದಾರಿಯ ಹಂದಿಗೋಣ, ಅಳ್ವೆಕೋಡಿಯಲ್ಲೇ ಈ  ಈರುಳ್ಳಿ ಭರ್ಜರಿ ಮಾರಾಟವಾಗುತ್ತದೆ. ಕುಮಟಾ, ಹೊನ್ನಾವರ ತಾಲೂಕಿನ ಬಹುತೇಕ ಜನತೆ ವರ್ಷವಿಡಿ ಸಾಲುವಷ್ಟು ಉಳ್ಳಾಗಡ್ಡೆ ಖರೀದಿಸುತ್ತಾರೆ. ಗೊಂಚಲು ಗೊಂಚಲಾಗಿರುವ ಈರುಳ್ಳಿಯನ್ನು ಕೊಂಡೊಯ್ದು 5-  6 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ತೂಗು ಹಾಕಿದರೆ ದೈನಂದಿನ ಬಳಕೆಗೆ ಸಾಲುವಷ್ಟೇ ಗೊಂಚಲಿನಿಂದ ತೆಗೆದುಕೊಂಡರಾಯ್ತು. ಬರೋಬ್ಬರಿ ಒಂದು ವರ್ಷ ಈರುಳ್ಳಿ ಕೆಡದೆ ಇರುತ್ತದೆ. ವರ್ಷವಿಡಿ ಸಾಲುವಷ್ಟು ಈರುಳ್ಳಿ ಖರೀದಿಸಿಡುವುದು ಅದೆಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.

 ದೊಡ್ಡ ಆಸ್ತಿ: ಕೇವಲ ಕುಮಟಾ, ಹೊನ್ನಾವರ  ತಾಲೂಕಿನ ಜನತೆಯಷ್ಟೇ ಅಲ್ಲ, ಜಿಲ್ಲೆಯ ಬೇರೆ ಬೇರೆ ತಾಲೂಕಿನ ಜನತೆಯೂ ಇಲ್ಲಿಗೆ ಬಂದು ನೀರುಳ್ಳಿ ಖರೀದಿಸುತ್ತಾರೆ. ಮಂಗಳೂರು, ಗೋವಾ, ಮುಂಬೈಗೂ ಇಲ್ಲಿನ ಈರುಳ್ಳಿ ಪ್ರಯಾಣಿಸುತ್ತದೆ. ಆದರೆ ಎಲ್ಲರೂ ಇಡೀ ವರ್ಷಕ್ಕೆ ಸಾಲುವಷ್ಟು ಖರೀದಿ ಸುವುದಿಲ್ಲ. ವರ್ಷವಿಡಿ ಸಾಲುವಷ್ಟು ಖರೀದಿ ಸುವವರೂ ಸಾಕಷ್ಟು ಜನರಿದ್ದಾರೆ. ಅಂಥವರಿಗೆ ಅಡುಗೆ ಮನೆಯಲ್ಲಿ ನೇತುಹಾಕಿದ ಈರುಳ್ಳಿ ಗೊಂಚಲುಗಳು ದೊಡ್ಡ ಆಸ್ತಿಯಾಗಿ ಪರಿಣಮಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಿಂಡಿ ದರದಲ್ಲೂ ಭಾರಿ ಏರಿಕೆ: ಕಾರವಾರದ ಭಾನುವಾರ ಸಂತೆಯಲ್ಲಿ ಈರುಳ್ಳಿ ಪ್ರತಿ ಕಿಗ್ರಾಂಗೆ 120  ದರದಲ್ಲಿ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದೆ 160 ರಿಂದ 180 ರ ತನಕ ರೇಟು ಏರಿತ್ತು. ಈಗ ಸ್ವಲ್ಪ ಇಳಿಮುಖವಾಗಿದೆ. ಆದರೆ 20 ರಿಂದ 30 ಕ್ಕೆ ಬರಲು ಇನ್ನೂ 15 - 20 ದಿನಗಳಾದರೂ ಬೇಕು ಎಂದು ಮಾರಾಟಗಾರರು ಅಭಿಪ್ರಾಯ ಪಡುತ್ತಾರೆ. ದರ ಏರಿದ್ದರಿಂದ ಹೋಟೆಲ್ ಮನೆ ಗಳಲ್ಲೂ ಬದಲಾವಣೆಯಾಗಿದೆ. ಈರುಳ್ಳಿ ಬಳಸಿದ ತಿಂಡಿಗಳ ದರದಲ್ಲಿ ಭಾರಿ ಏರಿಕೆಯಾಗಿದೆ.