‘ಚರಂಡಿ ನೀರು ಹೇಮಾವತಿಗೆ ಸೇರುವುದನ್ನು ತಡೆಯಿರಿ’
ನಗರದ ರಾಜಕಾಲುವೆ ನೀರಿಗೆ ಮಳೆನೀರು ಸೇರಿಕೊಂಡು ಕೋಡಿಸರ್ಕಲ್ ಬಳಿ ಮ್ಯಾನ್ ಹೋಲ್ ತೆರೆದು ಚರಂಡಿಯ ನೀರು ಹೇಮಾವತಿ ನಾಲೆಗೆ ಸೇರುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಿಯೋಗ ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ತಿಪಟೂರು : ನಗರದ ರಾಜಕಾಲುವೆ ನೀರಿಗೆ ಮಳೆನೀರು ಸೇರಿಕೊಂಡು ಕೋಡಿಸರ್ಕಲ್ ಬಳಿ ಮ್ಯಾನ್ ಹೋಲ್ ತೆರೆದು ಚರಂಡಿಯ ನೀರು ಹೇಮಾವತಿ ನಾಲೆಗೆ ಸೇರುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಿಯೋಗ ನಗರಸಭೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎಸ್.ಎನ್. ಸ್ವಾಮಿ ಮತ್ತು ಬಿ.ಲೋಕೇಶ್ ಮಾತನಾಡಿ, ಕಲುಷಿತ ನೀರು ಹೇಮಾವತಿ ನಾಲೆಯ ಮೂಲಕ ಈಚನೂರು ಕೆರೆ ಸೇರುತ್ತಿದ್ದು, ಇದರಿಂದ ನಗರಕ್ಕೆ ಕಲುಷಿತ ನೀರು ಸರಬರಾಜಾಗುವ ಅಪಾಯವಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮತ್ತೊಂದೆಡೆ ಯುಜಿಡಿಯ ಸಂಸ್ಕರಣಗೊಂಡ ನೀರು ಹೂವಿನ ಕಟ್ಟೆತುಂಬುತ್ತಿದ್ದು ಅದರಿಂದ ಕೃಷಿ ಕೆಲಸಗಳಿಗೆ ನೀರು ಉಪಯೋಗವಾಗುತ್ತಿದೆ. ಆದರೆ ಅಲ್ಲಿ ವಾಸನೆ ಬರುತ್ತಿದ್ದು, ನೀರು ಸಂಪೂರ್ಣವಾಗಿ ಶುದ್ಧೀಕರಣವಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಅಂತರ್ಜಲಕ್ಕೇ ಕಲುಷಿತ ನೀರು ಸೇರಿಕೊಂಡು ರೋಗಗಳ ವಿತರಣಾ ಕೇಂದ್ರಗಳಾಗುತ್ತವೆ. ಆದ್ದರಿಂದ ಕೋಡಿಸರ್ಕಲ್ ಬಳಿ ಮ್ಯಾನ್ ಹೋಲ್‌ನಿಂದ ಹರಿಯುವ ಚರಂಡಿ ನೀರನ್ನು ನಿಲ್ಲಿಸಬೇಕು ಮತ್ತು ಯುಜಿಡಿ ನೀರನ್ನು ಟೆರ್ಶಿಯರಿ ಶುದ್ಧೀಕರಣ ಮಾಡಬೇಕು. ಜೊತೆಗೆ ಕೃಷಿಯ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತಿದೆಯೇ ಎಂದು ಅಧ್ಯಯನ ಮಾಡಬೇಕೆಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ್ ಬದರಗಡೆ ಮಾತನಾಡಿ, ಮ್ಯಾನ್‌ಹೋಲ್‌ನಿಂದ ಹರಿಯುವ ಕಲುಷಿತ ನೀರನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಕೃಷಿಯ ಮೇಲೆ ಯುಜಿಡಿಯ ಸಂಸ್ಕಾರಗೊಂಡ ನೀರಿನ ಪರಿಣಾಮವನ್ನು ಸಂಬಂಧಪಟ್ಟಇಲಾಖೆ ತಿಳಿಸಲಾಗುವುದು. ಕೆಂಚರಾಯನಗರದ ಬಳಿ ಇರುವ ಘನತ್ಯಾಜ್ಯ ಘಟಕದ ದುಷ್ಪರಿಣಾಮಗಳು ಮತ್ತು ನಾಯಿಗಳ ಕಾಟವನ್ನು ಗಮನಕ್ಕೆ ತಂದಾಗ ಅದರ ಸುತ್ತ ಕಾಂಪೌಂಡ್ ಕಟ್ಟಲು ಮತ್ತು ಹಳೆ ತ್ಯಾಜ್ಯವನ್ನು ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗುವುದು. ನಾಯಿ ಕಾಟವನ್ನು ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಂಗಧಾಮಯ್ಯ, ಗೋಪಿನಾಥ್ ಬೊಮ್ಮನಹಳ್ಳಿ ಮತ್ತಿತರರಿದ್ದರು.