ಮುಂಡರಗಿ[ಡಿ.25]: ಕೇಂದ್ರ ಸರ್ಕಾರ 370 ಕಾಯ್ಕೆ ಜಾರಿಗೆ ತಂದಾಗ ಇದು ಲೋಕಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ, ಪೌರತ್ವ ಕಾಯ್ದೆ ಇದೂ ಸಹ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಎಂದು ಹೇಳುವ ಕೇಂದ್ರ ಸರ್ಕಾರ, ಚುನಾವಣೆ ಪೂರ್ವದಲ್ಲಿಯೇ ರೈತರೆಲ್ಲರಿಗೂ ಭರವಸೆ ನೀಡಿದ ಡಾ. ಸ್ವಾಮಿನಾಥನ್‌ ವರದಿ ಜಾರಿಗೆ ಮಾತ್ರ ಇದುವರೆಗೂ ಆಗಲಿಲ್ಲ. ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಒಂದು ಭರವಸೆ ನೀಡಿದ್ದರು. ಅದು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಣಾಳಿಕೆ ಕೂಡಾ ಆಗಿತ್ತು. ಈ ದೇಶದ ರೈತರಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎನ್ನುವ ಉದ್ದೇಶದಿಂದ ಡಾ. ಸ್ವಾಮಿನಾಥನ್‌ ವರದಿ ಆಧರಿಸಿ ಸಿ2+50 ಇದರ ಮಾನದಂಡದ ಮೇಲೆ ರೈತರಿಗೆ ಯೋಗ್ಯವಾದ ಬೆಲೆ ದೊರೆಯುತ್ತದೆ. ಈ ಕುರಿತು ಈಗಾಗಲೇ ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗಿದೆಯಾದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಕಳೆದ ಲೋಕಸಭ ಚುನಾವಣೆಯಲ್ಲಿ ಈ ವಿಷಯವನ್ನಿಟ್ಟುಕೊಂಡೇ ರೈತರ ಮನಸ್ಸುಗೆದ್ದು ಮತ ಪಡೆಯಲು ಕಾರಣವಾಯಿತು. ಇದೀಗ ಈ ರೀತಿ ವಿಳಂಬನೀತಿ ಅನುಸರಿಸುತ್ತಿರುವುದು ಸಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ರೈತರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಭೀಮಾ ಯೋಜನೆ ರೈತರಿಗೆ ಆಶಾ ಕಿರಣ ಎಂದು ಬಿಂಬಿಸಲಾಗುತ್ತಿದೆ. ಇದನ್ನು ಜಾರಿಗೆ ತಂದಿರುವುದು ಬಂಡವಾಳ ಶಾಹಿ ವಿಮಾ ಕಂಪನಿಯ ಮಾಲೀಕರ ಪರವಾಗಿಯೇ ವಿನಃ ರೈತರ ಪರವಾಗಿ ಅಲ್ಲ. ಇದು ವಿಮಾ ಕಂಪನಿಯವರನ್ನು ಇನ್ನಷ್ಟು ದೊಡ್ಡವರನ್ನಾಗಿ ಮಾಡಲು ಅನುಕೂಲವಾಗಿದೆ. ರಾಜ್ಯದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಪ್ರವಾಹ ಬಂದ ಸಂದರ್ಭದಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ 3400 ಗ್ರಾಮಗಳು ಜಲಾವೃತಗೊಂಡಿದ್ದ ಸಂದರ್ಭದಲ್ಲಿ ಅನೇಕ ಮನೆಗಳು ಪೂರ್ಣ ಪ್ರಮಾಣದಲ್ಲಿ, ಭಾಗಶಃ ಸಾವಿರಾರು ಮನೆಗಳು ನಷ್ಟವಾಗಿದ್ದವು.

ಜ. 8ರಂದು ಗ್ರಾಮ ಭಾರತ್‌ ಬಂದ್‌:

ಇದೀಗ ಭಾರತೀಯ ರೈತ ಸಂಘಟನೆಗಳೆಲ್ಲವೂ ಸೇರಿ ಒಂದು ಗಟ್ಟಿಯಾದ ತೀರ್ಮಾನ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರವನ್ನು ಗಮನಸೆಳೆಯುವುದಕ್ಕಾಗಿಯೇ 2020ರ ಜನವರಿ 8 ರಂದು ದೇಶದ ಎಲ್ಲ ರೈತರೂ ಗ್ರಾಮ ಭಾರತ ಬಂದ್‌ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಆ ದಿನ ಇಡೀ ಭಾರತ ದೇಶದ ಗ್ರಾಮೀಣ ಜನತೆ ಯಾವುದೇ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವಂತಿಲ್ಲ, ಯಾವುದೇ ವ್ಯಾಪಾರ ವಹಿವಾಟುಗಳನ್ನು ನಡೆಸುವಂತಿಲ್ಲ. ಅಂದು ಎಲ್ಲರೂ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಇರಬೇಕು. ಒಂದು ದಿನದ ವಹಿವಾಟಿನ ಮೇಲಾಗುವ ಪರಿಣಾಮವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದು ಈ ಗ್ರಾಮ ಭಾರತ್‌ ಬಂದ್‌ನ ಉದ್ದೇಶವಾಗಿದೆ.

ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗಿದ್ದು, ಕೇಂದ್ರದಲ್ಲಿ ರೈತರಿಗೆ ಭರವಸೆ ನೀಡಿದಂತೆ ವಿಧಾನಸ​ಭಾ ಚುನಾವಣೆ ಪೂರ್ವದಲ್ಲಿ ರಾಜ್ಯದಲ್ಲಿಯೂ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ  50 ಸಾವಿರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಎಚ್‌.ಡಿ. ಕುಮಾರಸ್ವಾಮಿ ತಮ್ಮ ಸರ್ಕಾರ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಭರವಸೆ ನೀಡಿದ್ದರು. ಬಿ.ಎಸ್‌. ಯಡಿಯೂಪ್ಪ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ 1 ಲಕ್ಷ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಪ್ರಾರಂಭದಲ್ಲಿ 3 ದಿನ ಮುಖ್ಯಮಂತ್ರಿಯಾದಾಗಲೇ ಸಾಲಮನ್ನಾ ಘೋಷಣೆ ಮಾಡಿದರು. ನಂತರ ಸರ್ಕಾರ ಬಿದ್ದು ಹೋಯಿತು. ನಂತರ ಎಚ್‌.ಡಿ. ಕುಮಾರಸ್ವಾಮಿ ಯಾವ ಸಾಲಮನ್ನಾ ಮಾಡಿದರೋ ಗೊತ್ತಾಗಲಿಲ್ಲ. ಇದೀಗ ಮತ್ತೊಮ್ಮೆ ತಮ್ಮದೇ ಸರ್ಕಾರ ಮಾಡಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೊಟ್ಟಮಾತಿನಂತೆ ರೈತರ 1 ಲಕ್ಷ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಸುತ್ತೇವೆ. ಒಂದು ವೇಳೆ ಮಾಡದಿದ್ದಲ್ಲಿ ಮಾರ್ಚ ತಿಂಗಳ ಮೊದಲನೇ ವಾರದಲ್ಲಿ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಶಿವಾನಂದ ಇಟಗಿ, ರಾಮಣ್ಣ ಇಲ್ಲೂರ, ಚಂದ್ರಕಾಂತ ಉಳ್ಳಾಗಡ್ಡಿ, ಹನಮಂತಪ್ಪ ಕುರಿ ಸೇರಿದಂತೆ ಅನೇಕರು ಇದ್ದರು.