ಹುಬ್ಬಳ್ಳಿ(ಮಾ.06): ಸಂವಿಧಾನದ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್‌. ರಾವ್‌ ರಚಿಸಿದ್ದಾರೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಈ ಮೂಲಕ ಸಂವಿಧಾನ ಹಾಗೂ ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಿಸುವ ಅಜೆಂಡಾ ಹೊಂದಿದ್ದಾರೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾಯಿಸುವುದೇ ಆರ್‌ಎಸ್‌ಎಸ್‌ ಅಜೆಂಡಾ ಆಗಿದೆ. ಅದನ್ನು ಬಿಜೆಪಿ ಮೂಲಕ ಕಾರ್ಯಗತ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ಸಂಸದರು, ಶಾಸಕರು ನೀಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಬಜೆಟ್‌ ಅಧಿವೇಶನದಲ್ಲಿ ಭಾರತದ ಸಂವಿಧಾನದ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್‌. ರಾವ್‌ ರಚಿಸಿದ್ದಾರೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಈ ಮೂಲಕ ಸಂವಿಧಾನ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ಗೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತಿಹಾಸ ತಿಳಿದುಕೊಳ್ಳದ ಕಾಗೇರಿ ಅವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಇದು ಅವರ ಸ್ಥಾನಕ್ಕೆ ತಕ್ಕುದಲ್ಲ. ಸಂವಿಧಾನದಿಂದಲೇ ಸ್ಪೀಕರ್‌ ಆಗಿದ್ದೇನೆ ಎಂಬುದನ್ನು ಕಾಗೇರಿ ಮರೆತಿದ್ದು ತಕ್ಷಣ ಅವರು ದೇಶದ ಕ್ಷಮೆಯಾಚಿಸಬೇಕು ಹಾಗೂ ಅವರಿಗೆ ಭಾಷಣ ಬರೆದು ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ ಜಕ್ಕಪ್ಪನವರ, ಈ ಹಿಂದೆ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದಿದ್ದರು. ಬಳಿಕ ದೆಹಲಿಯಲ್ಲಿ ಸಂವಿಧಾನ ಪ್ರತಿ ಸುಡಲಾಗಿತ್ತು. ಶಿಕ್ಷಣ ಇಲಾಖೆ ಪ್ರಜಾರಾಜೋತ್ಸವದ ಅಂಗವಾಗಿ ಹೊರತಂದ ಕೈಪಿಡಿಯಲ್ಲೂ ಅಂಬೇಡ್ಕರ್‌ಗೆ ಅವಮಾನ ಮಾಡಲಾಗಿತ್ತು. ಇದೀಗ ಸ್ಪೀಕರ್‌ ಕಾಗೇರಿ ಸಂವಿಧಾನದ ಮೂಲ ಕರಡನ್ನು ಬಿ.ಎನ್‌. ರಾವ್‌ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವೂ ಆರ್‌ಎಸ್‌ಎಸ್‌ ತಂತ್ರಗಾರಿಕೆ ಅಷ್ಟೇ ಎಂದರು.

ಕುಡಚಿ ಶಾಸಕ ಪಿ. ರಾಜೀವ್‌ ಸಂವಿಧಾನದ ಮೇಲೆ ಸದನದಲ್ಲಿ ಉತ್ತಮವಾಗಿ ಭಾಷಣ ಮಾಡಿದ್ದು, ಸಂವಿಧಾನ ಹಾಗೂ ಅಂಬೇಡ್ಕರ್‌ ಅವರು ಚಿತ್ರಣವನ್ನು ಎಳೆಎಳೆಯಾಗಿ ಹೇಳಿದ್ದಾರೆ. ಅವರ ಭಾಷಣದಲ್ಲಿ ಸಂವಿಧಾನ ಅಪಚಾರ ಮಾಡಿಲ್ಲ. ಹೀಗಾಗಿ ಸಮುದಾಯ ಜನರು ಅವರ ವಿರುದ್ಧ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದಲಿತ ವಿರೋಧಿ ಬಜೆಟ್‌ ಮಂಡಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಎಸ್ಸಿ-ಎಸ್ಟಿಗೆ ಬಜೆಟ್‌ನಲ್ಲಿ 30 ಸಾವಿರ ಕೋಟಿ ನೀಡಿತ್ತು. ಆದರೆ, ಇದೀಗ ಬಿಎಸ್‌ವೈ 26 ಸಾವಿರ ಕೋಟಿ ಮಾತ್ರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಸಹಯೋಗದಲ್ಲಿ ಜಾಗೃತಿ

ಸುಪ್ರೀಂ ಕೋಟ್‌ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಹೇಳಿರುವುದು ಆಘಾತ ಮೂಡಿಸಿದೆ. ತಕ್ಷಣ ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಪಡಿ ತಂದು ಮೀಸಲಾತಿ ಮೂಲಭೂಥ ಹಕ್ಕು ಎಂದು ಬದಲಾಯಿಸಬೇಕು ಎಂದಿರುವ ಜಕ್ಕಪ್ಪನವರ, ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೀಸಲಾತಿ ರಕ್ಷಿಸಿ ಎಂಬ ಜಾಗೃತಿ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುವುದು. ಕೆಪಿಸಿಸಿ ಸಹಯೋಗದಲ್ಲಿ ಸಂವಿಧಾನ ರಕ್ಷಿಸಿ, ಭಾರತ ಉಳಿಸಿ, ಮೀಸಲಾತಿ ರಕ್ಷಿಸಿ ಎಂದು ಪ್ರತಿಭಟನೆ ನಡೆಸುವ ಮೂಲಕ ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಶಂಕರ ಅಜಮನಿ, ಆನಂದ ಮುಶಣ್ಣವರ ಇದ್ದರು.

ಮಹದಾಯಿ ಯೋಜನೆಗೆ ಬಜೆಟ್‌ನಲ್ಲಿ 2000 ಕೋಟಿ ನೀಡುವಂತೆ ನೀರಾವರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದರು. ಮುಖ್ಯಮಂತ್ರಿ ಕೇವಲ 500 ಕೋಟಿ ನೀಡುವ ಮೂಲಕ ಸಚಿವರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಹೇಳಿದ್ದಾರೆ.