ಬೆಂಗಳೂರು(ಮಾ.11): ‘ಮಹಾ ಶಿವರಾತ್ರಿ’ ಹಬ್ಬಕ್ಕಾಗಿ ನಗರದ ಶಿವನ ದೇವಾಲಯಗಳು ಭಕ್ತರನ್ನು ಬರಮಾಡಿಕೊಳ್ಳಲು ಸಜ್ಜಾಗಿವೆ. ಉಪವಾಸ, ಜಾಗರಣೆ ಮಾಡಿ ಶಿವನ ಸ್ಮರಿಸಲು ಉತ್ಸುಕರಾಗಿದ್ದು, ಎಲ್ಲೆಡೆ ಭಕ್ತರು ಹಬ್ಬಕ್ಕೆ ಭರ್ಜರಿ ತಯಾರಿಸಿ ನಡೆಸಿದ್ದಾರೆ. ಈ ವರ್ಷ ಕೋವಿಡ್‌ ಇರುವುದರಿಂದ ಕೆಲ ದೇವಾಲಯಗಳಲ್ಲಿ ಸರಳವಾದ ಪೂಜೆಗೆ ಆದ್ಯತೆ ನೀಡಲಾಗಿದೆ.

ಇಂದು ಗುರುವಾರ ಶಿವರಾತ್ರಿ ಹಬ್ಬ. ಹೀಗಾಗಿ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡುವುದರಿಂದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ದೇವಾಲಯಗಳು ತಳಿರು, ತೋರಣಗಳು, ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ದೇಗುಲಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ನಿರಂತರ ಅಭಿಷೇಕ ನಡೆಯಲಿವೆ. ಅಂದು ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ನಾ​ನಾ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಹಾಮಂಗಳಾರತಿ, ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ಜರುಗಲಿವೆ. ನಾನಾ ಸಂಘ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿವೆ.

ಕಾಡು ಮಲ್ಲೇಶ್ವರ ದೇಗುಲದಲ್ಲಿ ವಿಜೃಂಭಣೆಯ ಶಿವರಾತ್ರಿ ಸಿದ್ಧತೆ

ಎಲ್ಲೆಲ್ಲಿ ಏನೇನು?

ಬಸವನಗುಡಿ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಗು​ರು​ವಾರ ಬೆಳಗ್ಗೆ 6ರಿಂದ ಮರುದಿನ ಮುಂಜಾ​ನೆ​ಯ​ವ​ರೆಗೆ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನ​ಡೆ​ಯ​ಲಿ​ದೆ. ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರೊಂದಿಗೆ ಭಜನೆ, ಸತ್ಸಂಗ ನ​ಡೆ​ಯ​ಲಿದೆ. ಶೃಂಗೇರಿ ಶಾರದಾ ಪೀಠಂ ಶಂಕರಪುರಂನ ಶ್ರೀ ​ಶೃಂಗೇರಿ ಶಾರದಾ ಪೀಠದಲ್ಲಿ ಗು​ರು​ವಾರ ವಿ​ಶೇಷ ಪೂಜೆ, ವೇ​ದಾ​ಶೀರ್ವಾದ ಇ​ತ್ಯಾ​ದಿ​ಗಳು ನ​ಡೆ​ಯ​ಲಿವೆ.
ಹೆಬ್ಬಾಳದ ಚೋ​ಳ​ ನಾ​ಯ​ಕ​ನ​ಹ​ಳ್ಳಿ​ಯ ಆನಂದಗಿರಿ ಬೆಟ್ಟದಲ್ಲಿ ಶಿವರಾತ್ರಿ ಅಂಗ​ವಾಗಿ ನಾನಾ ಧಾ​ರ್ಮಿಕ ಕಾ​ರ್ಯ​ಕ್ರ​ಮ​ಗಳು ನ​ಡೆ​ಯ​ಲಿವೆ. ಸ್ವಾ​ಮಿಗೆ ಪಂಚಾಮೃ​ತಾ​ಭಿ​ಷೇ​ಕ, ಕ್ಷೀರಾಭಿಷೇಕ, ರುದ್ರಾಭಿಷೇಕ ಮತ್ತು ವಿಶೇಷ ಅಲಂಕಾರಗಳು ನೆರವೇರಲಿವೆ.

ಕೋಟೆ ಜಲಕಂಠೇಶ್ವರ ದೇವಸ್ಥಾನದಲ್ಲಿ ಮಾ.11ರಂದು ಬೆಳಗ್ಗೆ 6.30ರಿಂದ ಮರುದಿನ ರಾತ್ರಿ 9ರವರೆಗೆ ಶಿವರಾತ್ರಿ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಸಂಜೆ 4ಕ್ಕೆ ಮಹಾ ಪ್ರದೋಷ, ನಂದೀಶ್ವರ ಸ್ವಾಮಿಗೆ ಅಭಿಷೇಕ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.

ಬಿನ್ನಿಮಿಲ್‌ ರಸ್ತೆಯ ಮಾರ್ಕಂಡೇಶ್ವರಸ್ವಾಮಿ ದೇವಸ್ಥಾನದ ಪ್ರಾರ್ಥನ ಮಂದಿರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಬೆಳಗ್ಗೆ 6ಕ್ಕೆ ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ 7ರಿಂದ ಶಿವಸಹಸ್ರನಾಮ ಪಠಣೆ, ನಾನಾ ಯಾಮದ ಪೂಜೆ, ಅಭಿಷೇಕಗಳು ಸಂಪನ್ನಗೊಳ್ಳಲಿವೆ. ಜತೆಗೆ ಪದ್ಮಶಾಲಿ ಕುಲಬಾಂಧವರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಗಳು, ಸಾಮೂಹಿಕ ಕುಲದೇವರ ಪೂಜೆ ಏರ್ಪಡಿಸಲಾಗಿದೆ.