Asianet Suvarna News Asianet Suvarna News

Hampi Utsav 2023: ವಿಜಯನಗರದ ಗತ ವೈಭವದ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಉತ್ಸವದ ಲೋಗೋ ಬಿಡುಗಡೆಗೊಳಿಸುವ ಮೂಲಕ ವಿಜಯನಗರದ ಗತವೈಭವ ಮರುಕಳಿಸುವ ಉತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ.

Preparations are underway for Hampi Utsav, the past glory of Vijayanagara rav
Author
First Published Jan 21, 2023, 7:30 AM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಜ.21) : ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಉತ್ಸವದ ಲೋಗೋ ಬಿಡುಗಡೆಗೊಳಿಸುವ ಮೂಲಕ ವಿಜಯನಗರದ ಗತವೈಭವ ಮರುಕಳಿಸುವ ಉತ್ಸವದ ಮೆರಗನ್ನು ಹೆಚ್ಚಿಸಿದ್ದಾರೆ.

ಜ. 27,28 ಮತ್ತು 29ರಂದು ಮೂರು ದಿನಗಳವರೆಗೆ ಹಂಪಿ ಉತ್ಸವ(Hampi Utsav) ನಡೆಸಲು ಸರ್ಕಾರ ಉದ್ದೇಶಿಸಿದೆ. ಹಾಗಾಗಿ ನೂತನ ವಿಜಯನಗರ ಜಿಲ್ಲಾಡಳಿತ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉತ್ಸವದ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ

ನಾಲ್ಕು ವೇದಿಕೆ ನಿರ್ಮಾಣ:

ಈ ಬಾರಿಯ ಹಂಪಿ ಉತ್ಸವದಲ್ಲಿ ನಾಲ್ಕು ವೇದಿಕೆ ನಿರ್ಮಾಣ ಆಗಲಿದೆ. ಮುಖ್ಯವೇದಿಕೆ ಗಾಯತ್ರಿಪೀಠದ ಬಳಿಯ ಮೈದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ಮೂರನೇ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಇನ್ನೂ ಶ್ರೀವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ನಾಲ್ಕನೇ ವೇದಿಕೆ ನಿರ್ಮಾಣ ಆಗಲಿದೆ. ಈ ಉತ್ಸವದಲ್ಲಿ ಹೆಸರಾಂತ ಕಲಾವಿದರೂ ಭಾಗವಹಿಸಲಿದ್ದಾರೆ. ಜತೆಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಲಾವಿದರಿಗೂ ಆದ್ಯತೆ ನೀಡಿ, ಹಂಪಿ ಉತ್ಸವದ ಅಸ್ಮಿತೆ ಕಾಪಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ವಾಸ್ತುಶಿಲ್ಪ ವೈಭವಕ್ಕೆ ವಿದ್ಯುದೀಪಾಲಂಕಾರ:

ಹಂಪಿ ಉತ್ಸವದಲ್ಲಿ ವಾಸ್ತುಶಿಲ್ಪದ ವೈಭವ ಅನಾವರಣಗೊಳ್ಳಲಿದೆ. ಲಕ್ಷಾಂತರ ಜನರು ಉತ್ಸವಕ್ಕೆ ಹರಿದು ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಸ್ಮಾರಕಗಳಿಗೆ ವಿದ್ಯುದೀಪಾಲಂಕಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಹಂಪಿಯಲ್ಲಿ ಸಿದ್ಧತಾ ಕಾಮಗಾರಿ ಭರದಿಂದ ಸಾಗಿದ್ದು, ಆಯಾ ಮೇಲುಸ್ತುವಾರಿ ಸಮಿತಿಗಳ ಸದಸ್ಯರು ತಮಗೆ ವಹಿಸಿದ ಕಾರ್ಯ ಮಾಡುತ್ತಿದ್ದಾರೆ.

ಹಂಪಿ ಉತ್ಸವ ಮೂರು ದಿನಗಳವರೆಗೆ ನಡೆಸುವ ಮೂಲಕ ಹಂಪಿಗೆ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ವಿಜಯನಗರ ನೆಲದ ವಾಸ್ತುಶಿಲ್ಪ ಪ್ರಪಂಚವನ್ನು ಇಡೀ ವಿಶ್ವಕ್ಕೆ ಉಣಬಡಿಸುವ ಕಾರ್ಯವನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಲಿದೆ.

ಉತ್ಸವದ ರೂವಾರಿ ಎಂ.ಪಿ. ಪ್ರಕಾಶ:

ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ(MP Prakash) ಅವರು ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಮತ್ತು ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಸಮಾನ ಅವಕಾಶ ದೊರೆಯಬೇಕೆಂಬ ಕಾಳಜಿ ಹೊಂದಿದ್ದರು. ಜತೆಗೆ ನಾಡಿನ ಸಂಸ್ಕೃತಿ ಉತ್ಸವದಲ್ಲಿ ಅನಾವರಣಗೊಳ್ಳಬೇಕೆಂಬ ಬಯಕೆ ಹೊಂದಿದ್ದರು. ಉತ್ಸವದಲ್ಲಿ ನಾಡಿನ ಕಲಾವಿದರಿಗೂ ಅವಕಾಶ ದೊರೆಯಲಿದೆ. ಹಾಗಾಗಿ ಈ ಉತ್ಸವಕ್ಕಾಗಿ ರಾಜ್ಯಮಟ್ಟದ ಹಾಗೂ ಸ್ಥಳೀಯ ಕಲಾವಿದರು ಎದುರು ನೋಡುತ್ತಿದ್ದಾರೆ.

ಹಂಪಿ ಉತ್ಸವ ಬರೀ ಉತ್ಸವ ಆಗಿರದೇ ಇಡೀ ದಕ್ಷಿಣ ಭಾರತಕ್ಕೆ ರಾಜಧಾನಿಯಾಗಿದ್ದ ವಿಜಯನಗರದ ನೆಲದ ಗತ ವೈಭವ ಮರುಕಳಿಸುವ ಕಾರ್ಯವೂ ಆಗಲಿದೆ. ಈ ಉತ್ಸವಕ್ಕೆ ಮೂರು ದಿನಗಳವರೆಗೆ ಲಕ್ಷಾಂತರ ಜನರು ಹರಿದು ಬರಲಿದ್ದಾರೆ.

ವಿಜಯನಗರದ ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ,ಕಲೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯವನ್ನು ಈ ಉತ್ಸವ ಮಾಡಲಿದೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಈಗಾಗಲೇ 1986ರಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಹಾಗಾಗಿ ಈ ಉತ್ಸವವು ಜನೋತ್ಸವದೊಂದಿಗೆ ವಿಜಯನಗರದ ಕಲಾ ಪ್ರಪಂಚವನ್ನೂ ಉಣಬಡಿಸಲಿದೆ.

ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಚಾಲನೆ ನೀಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಅವರು ಉತ್ಸವದಲ್ಲಿ ಭಾಗಿಯಾಗಲು ದಿನಾಂಕ ನೀಡಿದ್ದಾರೆ. ಜತೆಗೆ ಅವರೇ ಉತ್ಸವದ ಲೋಗೋ ಕೂಡ ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಉತ್ಸವಕ್ಕೆ ಭರದ ಸಿದ್ಧತೆ ನಡೆಸಿದೆ.

ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದ್ದು, ಈಗ ಉತ್ಸವದ ಕುರಿತೇ ಜಿಲ್ಲೆಯಲ್ಲಿ ಚರ್ಚೆ ನಡೆದಿದೆ.

Hampi Utsav: ಜನವರಿ 27 ರಂದು ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ: ಸಚಿವೆ ಶಶಿಕಲಾ ಜೊಲ್ಲೆ

ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಉತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು.

ಶಶಿಕಲಾ ಜೊಲ್ಲೆ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು.

ಹಂಪಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಲ್ಕು ವೇದಿಕೆಗಳಲ್ಲಿ ಉತ್ಸವ ನಡೆಸಲಾಗುವುದು. ಜ.27,28 ಮತ್ತು 29ರಂದು ಉತ್ಸವ ನಡೆಯಲಿದೆ. ವಿಜಯನಗರದ ಗತ ವೈಭವ ಮರುಕಳಿಸುವ ಕಾರ್ಯ ಮಾಡಲಾಗುವುದು.

ಆನಂದ ಸಿಂಗ್‌, ಪ್ರವಾಸೋದ್ಯಮ ಸಚಿವರು

Follow Us:
Download App:
  • android
  • ios