ರಾಮನಗರ: 2 ವರ್ಷಗಳ ಬಳಿಕ ದೇವರಹೊಸಹಳ್ಳಿ ಬ್ರಹ್ಮರಥೋತ್ಸವಕ್ಕೆ ಭರದ ಸಿದ್ಧತೆ
* ದೇವರ ಹೊಸಹಳ್ಳಿ ಜಾತ್ರೆ
* ಜೋಡಿ ಹಕ್ಕಿಗಳೇ ಮೆರಗು
* ಎರಡು ವರ್ಷಗಳ ತರುವಾಯ ನಡೆಯಲಿರುವ ಐತಿಹಾಸಿಕ ಧಾರ್ಮಿಕ ಜಾತ್ರೆ
ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ಗದಗ(ಜು.10): ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಸಂಜೀವರಾಯಸ್ವಾಮಿ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ನಾಳೆ ಜರುಗಲಿದೆ.
ವಿಶ್ವಮಾರಿ ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ದೇವರ ಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು. ಆದರೆ, ಈ ವರ್ಷ ಎಲ್ಲಾ ರೀತಿಯಿಂದಲೂ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಬ್ರಹ್ಮರಥೋತ್ಸವದ ವಿಜೃಂಭಣೆಯ ಆಚರಣೆಗೆ ದೇವಸ್ಥಾನ ಆಡಳಿತ ಮಂಡಳಿ ಸಕಲ- ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿದೆ.
ಪುರುಷರಿಗೇ ಪ್ರತ್ಯೇಕ ವೈದ್ಯಕೀಯ ಸೇವೆ: ಮಲ್ಲೇಶ್ವರಂ, ರಾಮನಗರದಲ್ಲಿ ಪ್ರಾಯೋಗಿಕ ಚಾಲನೆ
ಜು. 11ರಂದು ಬೆಳಗ್ಗೆ 10 ರಿಂದ ರಾತ್ರಿ 1 ರವರೆಗೆ ವಿವಿಧ ಪೂಜಾ ಕೈಕಾರ್ಯಗಳು
ಸಂಜೀವರಾಯಸ್ವಾಮಿ ವಿಶ್ವಕಲಾ ವೈಭವ ಸುವರ್ಣ ಮಂಟಪದಲ್ಲಿ ಸಂಜೀವರಾಯಸ್ವಾಮಿ ಅವರಿಗೆ ತೋಮಾಲ ಸೇವೆ, ವೈಕುಂಠ ಸೇವಾದರ್ಶನ, ಮಹಾ ಮಂಗಳಾರತಿ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷದೀಪೋತ್ಸವ, ಪುಷ್ಪಾಲಂಕಾರ, ಮನೋಹರ ಚಂದ್ರಮಂಡಲ ಪಲ್ಲಕ್ಕಿ ಉತ್ಸವ ನಡೆಯಲಿದೆ. ಜು. 11ರ ಸೋಮವಾರ ರಾತ್ರಿ 9 ರಿಂದ 10 ಗಂಟೆಗೆ ತೆಪ್ಪೋತ್ಸವ ಮತ್ತು ವೈವಿಧ್ಯಮಯ ಬಾಣಬಿರುಸಿನ ಚಮತ್ಕಾರದ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ನೂತನ ವಿವಾಹ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ದೇವರ ಹೊಸಹಳ್ಳಿ ಸಂಜೀವರಾಯಸ್ವಾಮಿ ದೇವರ ಉತ್ಸವ ಮತ್ತು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯುವುದು ಇಲ್ಲಿನ ವಿಶೇಷ ಹಾಗೂ ವಾಡಿಕೆಯಾಗಿದೆ.
ಪ್ರಸಕ್ತ ವರ್ಷದ ಮದುವೆ
ಸುಗ್ಗಿಯಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳನ್ನು ಅಷಾಢ ಮಾಸ ಅಲ್ಪಕಾಲ ಬೇರ್ಪಡಿಸುತ್ತದೆ. ಅಂದರೆ, ನವವಧು ಅಷಾಢ ಮಾಸದಲ್ಲಿ ತನ್ನ ಇನಿಯನ ಮನೆ ತೊರೆದು ತವರು ಮನೆ ಸೇರಿರುತ್ತಾಳೆ. ಈ ಒಂದು ತಿಂಗಳು ನವಜೋಡಿಗಳು ಪರಸ್ಪರ ಭೇಟಿಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಸಂಜೀವರಾಯಸ್ವಾಮಿ ಜಾತ್ರೆಯು ನವದಂಪತಿ ಪಾಲಿಗೆ "ಸಂಜೀವಿನಿ"ಯೇ ಸರಿ. ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಮಾತ್ರವಲ್ಲ, ನೆರೆ-ಹೊರೆಯ ಜಿಲ್ಲೆಗಳಿಂದಲೂ ಹೊಸ ಜೋಡಿಗಳು ವಲಸೆ ಹಕ್ಕಿಗಳ ರೀತಿಯಲ್ಲಿ ಜಾತ್ರೆಗೆ ಲಗ್ಗೆ ಇಡಲಿವೆ.
ರಾಮನಗರ: ಕೃಷಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಂಸದ ಡಿ.ಕೆ.ಸುರೇಶ್..!
ಜಾತ್ರೆಗೆ ಬರುವ ನೆಪದಲ್ಲಿ ಪರಸ್ಪರ ಜೋಡಿಗಳು ಕಣ್ತುಂಬಿಕೊಂಡು ಜನಜಾತ್ರೆಯ ಮಧ್ಯೆ ಪರಸ್ಪರ ಕೈ-ಕೈ ಹಿಡಿದುಕೊಂಡು ಓಡಾಡುವುದನ್ನು ನೋಡುವುದೇ ಒಂದು ಚಂದ, ಇದೇ ಜಾತ್ರೆಯ ಅಂದ ಎಂದು ಹಿರಿಯ ಜೋಡಿಗಳು ಕೂಡ ತಮ್ಮ ಗತ ವೈಭವವನ್ನು ನೆನೆದು ಪುಳಕಗೊಳ್ಳಲು ಸಂಜೀವರಾಯಸ್ವಾಮಿ ಜಾತ್ರೆಯು ಕಾರಣೀಭೂತವಾಗಿದೆ.
ಘಟಾನುಘಟಿಗಳು ರಾಜಕಾರಣಿಗಳು ಭಾಗಿಯಾಗುವ ನಿರೀಕ್ಷೆ
ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ತಾಲ್ಲೂಕಿನಲ್ಲಿ ಈಗಾಗಲೇ ರಂಗ ತಾಲೀಮು ಪ್ರಾರಂಭವಾಗಿದ್ದು, ಅದರ ಪ್ರಭಾವ ದೇವರ ಹೊಸಹಳ್ಳಿ ಜಾತ್ರೆಗೂ ವಿಸ್ತರಣೆಯಾಗಿದೆ. ಇದರ ಮುನ್ಸೂಚನೆ ಎಂಬಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ದೇವರಹೊಸಹಳ್ಳಿ ಗ್ರಾಮದ ಪ್ರಮುಖರು ಕ್ಷೇತ್ರದ ಶಾಸಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಪ್ರಸನ್ನ ಪಿ.ಗೌಡ ಸೇರಿದಂತೆ, ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವೃಂದದವರನ್ನು ಭೇಟಿ ಮಾಡಿ, ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಿದ್ದಾರೆ. ಜನ ಜಂಗುಳೊ ಸೇರುವ ಈ ಜಾತ್ರೆಗೆ ರಾಜಕಾರಣಿಗಳು ತಪ್ಪಿಸಿಕೊಳ್ಳುವುದಿಲ್ಲ ಎಂಬುದು ಜನಜನಿತವಾಗಿದೆ.
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ದೇವರ ಹೊಸಹಳ್ಳಿ ಜಾತ್ರೆಯು ನವ ದಂಪತಿಗಳ ಪಾಲಿಗೆ ವಿಶೇಷವಾದ ಚೊಚ್ಚಲ ಹಬ್ಬ. ಅಷಾಢ ಮಾಸದಲ್ಲಿ ವಿರಹದಲ್ಲಿರುವ ಜೋಡಿಹಕ್ಕಿಗಳು ವಿರಾಮದಿಂದ ವಿಹರಿಸಲು ಇದೊಂದು ವೇದಿಕೆಯೇ ಸರಿ.