ಬೆಂಗಳೂರು [ಜ.30]:  ಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಮಹಿಳೆ ಹಾಗೂ ಮಗು ಇಬ್ಬರ ಜೀವವನ್ನೂ ರಕ್ಷಿಸಲು ವಿಕ್ರಂ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ  ಮಾಹಿತಿ ನೀಡಿರುವ ವಿಕ್ರಂ ಆಸ್ಪತ್ರೆಯ ಹಿರಿಯ ಕ್ಯಾನ್ಸರ್‌ ತಜ್ಞೆ ಡಾ. ನೀತಿ ರೈಝಡಾ, ರೋಗಿಯು ಇಂಟ್ರಾ ಕ್ರಾನಿಯಲ್‌ ರೊಸೈಡೋಫ್‌ರ್‍ಮನ್‌ ಎಂಬ ಕ್ಯಾನ್ಸರ್‌ ಕಾಯಿಲೆಯೊಂದಿಗೆ ತೀವ್ರ ತಲೆ ನೋವು ಹಾಗೂ ಮೂಗು ಕಟ್ಟಿಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲಾಗಿತ್ತು. ಸಾಮಾನ್ಯವಾಗಿ ಈ ಆರ್‌ಡಿಡಿ ಚಿಕಿತ್ಸೆ ಪಡೆದ ನಂತರ ಮಕ್ಕಳ ಆಸೆಯನ್ನೇ ತೊರೆಯಬೇಕಿದ್ದರೂ, ಮಹಿಳೆ ಮೂರು ತಿಂಗಳಲ್ಲಿ ಗರ್ಭವತಿಯಾದರು.

ಬೆಂಗಳೂರಲ್ಲಿ 5.9 ಕೆಜಿ ತೂಕದ ಮಗು ಜನನ...

ಗಂಭೀರ ಕಾಯಿಲೆ ಹೊಂದಿದ್ದೂ ಕಿಮೋಥೆರಪಿ ಚಿಕಿತ್ಸೆ ಜೊತೆ ಜೊತೆಗೆ ಸ್ವಾಭಾವಿಕವಾಗಿ ಮಹಿಳೆ ಗರ್ಭಧಾರಣೆ ಹೊಂದಿದ್ದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಬಳಿಕ ಮಗುವಿನ ಆರೋಗ್ಯ ತಪಾಸಣೆ ನಡೆಸಿದರೆ ಕೊಲೊಸ್ಟೊಮಿ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಬಳಿಕ ಮಗುವಿಗೂ ಸೂಕ್ತ ಚಿಕಿತ್ಸೆ ನೀಡಿದ್ದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ಈ ವೇಳೆ ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೋಮಶೇಖರ್‌ ಮಿತ್ತಲ್‌, ವೈದ್ಯರಾದ ಶಶಿಕಲಾ ಕ್ಷೀರಸಾಗರ್‌, ಮೋಹನ್‌, ಡಿ.ಮಹೇಂದ್ರಕರ್‌ ಹಾಜರಿದ್ದರು.