ಶ್ರೀರಂಗಪಟ್ಟಣ(ಆ.27):  ವೈದ್ಯರ ನಿರ್ಲಕ್ಷ್ಯ, ಕೋವಿಡ್‌- 19 ಫಲಿತಾಂಶ ವಿಳಂಬದಿಂದಾಗಿ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಪಟ್ಟಣದ ತಾಲೂಕು ಆಸ್ಪತ್ರೆಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿದ ಮೃತರ ಸಂಬಂಧಿಕರು ಆರೋಗ್ಯ ತಪಾಸಣೆಗೆ ಆಗಮಿಸಿದ ವೇಳೆ ಮಹಿಳೆಯಿಂದ ಸಂಗ್ರಹಿಸಿದ ಗಂಟಲು ದ್ರವದ ಫಲಿತಾಂಶ ಬರುವುದು ವಿಳಂಬವಾಗಿದೆ. ಕೋವಿಡ್‌ ಸೋಂಕಿನಿಂದ ನರಳುತ್ತಿದ್ದ ಗರ್ಭಿಣಿ ಮೃತಪಟ್ಟಿದ್ದು, ಜಿಲ್ಲಾಸ್ಪತ್ರೆ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ...

ಮೈಸೂರು ತಾಲೂಕು ಕೆ.ಆರ್‌.ಮಿಲ್ ಗ್ರಾಮದ ಕಿರಣ್‌ ಕುಮಾರ್‌ ಪತ್ನಿ ವೀಣಾ (27) ಮೃತಪಟ್ಟಿದ್ದಾರೆ. ಆಕೆಯ ತವರು ಗ್ರಾಮದ ಶ್ರೀರಂಗಪಟ್ಟಣ ತಾಲೂಕಿನ ಚಿಹ್ನೇಹಳ್ಳಿ ಗ್ರಾಮದ ಪೋಷಕರು ಮತ್ತು ಗ್ರಾಮಸ್ಥರು ಡಿಎಚ್‌ಒ ಮಂಚೇಗೌಡ ಹಾಗೂ ತಾಲೂಕು ವೈದ್ಯಾಧಿಕಾರಿ ವೆಂಕಟೇಶ್‌ರನ್ನು ತರಾಟೆಗೆ ತೆಗೆದುಕೊಂಡು ಸಾವಿಗೆ ನ್ಯಾಯ ಒದಗಿಸಬೇಕು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮೃತ ವೀಣಾ ಚಿನ್ನೇನಹಳ್ಳಿ ಗ್ರಾಮಕ್ಕೆ ಆ.20 ರಂದು ಆಗಮಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಮಂಡ್ಯದ ಕ್ಯಾಂತುಂಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಆ.21 ರಂದು ಆಕೆಗೆ ಕೋವಿಡ್‌ ಪರೀಕ್ಷೆಗೆ ಒಳಗಾಗಿ 22 ರಂದು ಪಾಸಿಟಿವ್‌ ಬಂದಿದೆ. ಆದರೆ, ಈ ಬಗ್ಗೆ ಸೂಕ್ತ ಮಾಹಿತಿ ಸಿಗದ ಕಾರಣ ಚಿಕಿತ್ಸೆ ಪಡೆದ ಆಕೆ ಚೇತರಿಕೆ ಕಾಣದ ಹಿನ್ನಲೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿಕೊಳ್ಳಿ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ಪತಿ ಕಿರಣ್‌ ತಾಲೂಕು ವೈದ್ಯಾಧಿಕಾರಿಗಳ ವಿರುದ್ಧ ದೂರಿದರು.

ಬುಧವಾರ ಅಬ್ಬರಿಸಿ ಬೊಬ್ಬರಿದ ಕೊರೋನಾ: ರಾಜ್ಯದಲ್ಲಿ 3 ಲಕ್ಷ ದಾಟಿದ ಸೋಂಕಿತರ ಸಂಖ್ಯೆ...

ಮೈಸೂರಿನ ಖಾಸಗಿ ಆಸ್ಪತ್ರೆಗೆ ತೋರಿಸಿದಾಗ ಕೆಲ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ ವೈದ್ಯರು ಅಲ್ಲಿಂದ ಕಳುಹಿಸಿದ್ದಾರೆ. ಕೋವಿಡ್‌ ಸೋಂಕು ದೃಢಪಟ್ಟಬಗ್ಗೆ ಸರಿಯಾದ ಮಾಹಿತಿ ಅಲ್ಲೂ ತಿಳಿಯದೆ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಆ.25 ರ ಮಂಗಳವಾರ ರಾತ್ರಿ ಗರ್ಭಿಣಿಯ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಮತ್ತು ಉಸಿರಾಟದ ಕೊರತೆ ಕಂಡುಬಂದಿದೆ.

ತಕ್ಷಣ ಕುಟುಂಬಸ್ಥರು ಆಕೆಯನ್ನು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಶೀಘ್ರ ಕರೆದುಕೊಂಡು ಬರುವ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಪತ್ನಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸರಿಯಾದ ಮಾಹಿತಿಯನ್ನು ಜಿಲ್ಲಾಡಳಿತ ಒದಗಿಸದ ಕಾರಣ ಈ ಅವಘಡ ಎದುರಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎದುರು ಆಕ್ರೋಶ ವ್ಯಕ್ತಪಡಿಸಿ, ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂಬಂಧ ಡಿಎಚ್‌ಒ ಡಾ.ಮಂಚೇಗೌಡ ಪ್ರತಿಕ್ರಿಯಿಸಿ, ಮೃತ ಗರ್ಭಿಣಿ ವೀಣಾ ಆ.20 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆ.21 ರಂದು ವೈದ್ಯರ ಸಲಹೆಯಂತೆ ಕೋವಿಡ್‌-19 ಪರೀಕ್ಷೆಗೆ ಒಳಗಾಗಿದ್ದಾರೆ. ಆ.22 ರಂದು ಈಕೆಯ ವರದಿ ಬಂದಿದೆ. ಆದರೆ, ಈಕೆ ತನ್ನ ಎಲ್ಲ ದಾಖಲೆಗಳಿಗೂ ಸಂಪೂರ್ಣವಾಗಿ ತನ್ನ ಗಂಡನ ನಿವಾಸದ ಮೈಸೂರಿನ ವಿಳಾಸ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಮಾಹಿತಿಗಳು ಜಿಲ್ಲೆಯಿಂದ ಮೈಸೂರಿನ ವಿಳಾಸಕ್ಕೆ ರವಾನೆಯಾಗಿದೆ. ಆದರೆ, ಈಕೆಗೆ ಕೋವಿಡ್‌ ಮಾಹಿತಿ ತಲುಪಲು ಯಾವ ಕಾರಣಕ್ಕೆ ತಡವಾಯಿತು ಎಂಬುದನ್ನು ಇಲಾಖೆಯಿಂದ ಪರಿಶೀಲಿಸಬೇಕಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಧಾನಪಡಿಸಿ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟಿದ್ದಾರೆ.