ಬೆಂಗಳೂರು(ಮೇ.08): ಖಾಸಗಿ ಪ್ರಯೋಗಾಲಯ, ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಿದ ಎಡವಟ್ಟಿಯಿಂದಾಗಿ ಗರ್ಭಿಣಿ ಮತ್ತು ಇಬ್ಬರು ಪೊಲೀಸ್‌ ಪೇದೆಗೆ ಕೊರೋನಾ ಸೋಂಕು ಇದೆ ಎಂದು ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. 
ಗರ್ಭಿಣಿ, ಪೊಲೀಸ್‌ ಪೇದೆಗಳಿಗೆ 3ನೇ ಬಾರಿಗೆ ಪರೀಕ್ಷೆ ನಡೆಸಲಾಗಿದ್ದು, ಫಲಿತಾಂಶ ನೆಗೆಟಿವ್‌ ಎಂದು ಬಂದಿದೆ. ಇದರೊಂದಿಗೆ ಸೃಷ್ಟಿಯಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.

ಪೊಲೀಸರು ಬಚಾವ್‌:

ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದ ತೀವ್ರ ಆತಂಕಕ್ಕೀಡಾಗಿದ್ದ ಬೆಂಗಳೂರಿನ ಬೇಗೂರು ಪೊಲೀಸ್‌ ಠಾಣೆಯ ಒಂದೇ ಹೆಸರಿನ ಇಬ್ಬರೂ ಪೊಲೀಸ್‌ ಪೇದೆಗಳಿಗೆ ನಡೆಸಲಾದ ಮೂರನೇ ಪರೀಕ್ಷೆಯಲ್ಲಿ ಕೊರೋನಾ ಸೋಂಕಿಲ್ಲ ಎಂಬುದು ದೃಢಪಟ್ಟಿದೆ. ಆದರೆ, ಪಾಸಿಟಿವ್‌ ಬಂದಿದೆ ಎಂಬ ತಪ್ಪು ವರದಿಯಿಂದ ಓರ್ವ ಪೇದೆಯನ್ನು ಕೋವಿಡ್‌ ರೋಗಿಗಳ ವಾರ್ಡ್‌ನಲ್ಲಿ ಕ್ವಾರಂಟೈನ್‌ಗೆ ದೂಡಿದ ಪರಿಣಾಮ ಅವರಿಗೆ ಸೋಂಕು ತಗುಲಬಹುದಾದ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಅವರು ತಮ್ಮದಲ್ಲದ ತಪ್ಪಿಗೆ ಇನ್ನೂ 14 ದಿನ ಆತಂಕದಲ್ಲಿ ದಿನ ದೂಡಬೇಕಾಗಿದೆ. ಉಳಿದಂತೆ ಈ ಪೇದೆಗಳ ಸಂಪರ್ಕದಲ್ಲಿದ್ದ ಠಾಣೆಯ ಇತರೆ ಸಹೋದ್ಯೋಗಿಗಳು ಹಾಗೂ ಅವರ ಕುಟುಂಬ ನಿಟ್ಟುಸಿರು ಬಿಟ್ಟಿದ್ದಾರೆ.

ಲಾಕ್‌ಡೌನ್‌ ನಂತರ ಕೆಲಸಕ್ಕೆ ಹಾಜರ್‌: ಕಂಪನಿಯಲ್ಲಿ ಕೆಲಸದ ವೇಳೆ ಕಾರ್ಮಿಕ ಮಹಿಳೆ ಸಾವು

ಜಯನಗರದ ಜನರಲ್‌ ಆಸ್ಪತ್ರೆಯಲ್ಲಿ ಬೇಗೂರು ಠಾಣೆಯ ಎಲ್ಲ ಸಿಬ್ಬಂದಿಗೆ ಮೇ 1ರಂದು ಸಾಮೂಹಿಕ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಠಾಣೆಯಲ್ಲಿ ಒಂದೇ ಹೆಸರಿನ ಒಬ್ಬರು ಪೇದೆಗಳಿದ್ದಿದ್ದರಿಂದ ಅರ್ಜಿ ತುಂಬುವಾಗ ಒಂದೇ ಹೆಸರು ಮತ್ತು ವಿಳಾಸದ ಎರಡು ಅರ್ಜಿಗಳು ಸಲ್ಲಿಕೆಯಾಗಿತ್ತು. ಆದರೆ, ಮೇ 4ರಂದು ವರದಿ ಆಧಾರದ ಮೇಲೆ ಒಬ್ಬ ಪೇದೆಯನ್ನು ಕರೆದೊಯ್ದು ಕೊರೋನಾ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮೇ 5ರಂದು ಬಂದ ವರದಿಯಲ್ಲಿ ಅದೇ ಠಾಣೆಯ ಒಂದೇ ಹೆಸರಿನ ಮತ್ತೊಬ್ಬ ಪೇದೆಯ ವರದಿ ನೆಗೆಟಿವ್‌ ಬಂದಿತ್ತು. ಆಗ, ಇದರಲ್ಲಿ ಮೊದಲ ದಿನ ಬಂದ ವರದಿ ಯಾರದ್ದು, ಎರಡನೇ ದಿನ ಬಂದ ವರದಿ ಯಾರದ್ದು ಎಂಬ ಬಗ್ಗೆ ಗೊಂದಲ ಉಂಟಾಗಿತ್ತು.

ಬಳಿಕ ಇಬ್ಬರೂ ಪೇದೆಗಳಿಗೆ ಮತ್ತೊಮ್ಮೆ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರಿಗೂ ನೆಗೆಟಿವ್‌ ಬಂದಿತ್ತು. ಇದೀಗ ಮತ್ತೊಮ್ಮೆ ಮೂರನೇ ಬಾರಿಗೆ ನಡೆಸಿದ ಪರೀಕ್ಷೆಯ ವರದಿ ಗುರುವಾರ ಬಂದಿದ್ದು ಅದರಲ್ಲೂ ಇಬ್ಬರಿಗೂ ನೆಗೆಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬೇಗೂರು ವಾರ್ಡ್‌ ಕಂಟೈನ್ಮೆಂಟ್‌ ತೆರವು

ಪೊಲೀಸ್‌ ಪೇದೆಗೆ ಕೊರೋನಾ ಸೋಂಕು ಇಲ್ಲ ಎಂಬುದು ದೃಢಪಟ್ಟಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಾಥಮಿಕ ಸಂಪರ್ಕದ ಇಬ್ಬರು ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 22 ಮಂದಿ ಪೊಲೀಸರು, 13 ಮಂದಿ ಕುಟುಂಬಸ್ಥರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಈಗ ಅವರನ್ನು ಕ್ವಾರಂಟೈನ್‌ ಮುಕ್ತಗೊಳಿಸಲಾಗಿದ್ದು, ಬೇಗೂರು ವಾರ್ಡ್‌ನ್ನು ಕಂಟೈನ್ಮೆಂಟ್‌ ಪಟ್ಟಿಯಿಂದ ಕೈಬಿಡಲಾಗಿದೆ.

ಗರ್ಭಿಣಿ ನಿರಾಳ

ಮೂರನೇ ಪರೀಕ್ಷೆಯಲ್ಲಿ ಗರ್ಭಿಣಿಗೆ ಸೋಂಕಿಲ್ಲ ಎಂಬುದು ದೃಢಪಟ್ಟು ಖಾಸಗಿ ಲ್ಯಾಬ್‌ನ ಎಡವಟ್ಟು ಸಾಬೀತಾಗಿದೆ. ಕಳೆದ ಮಂಗಳವಾರ ಖಾಸಗಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಪಾಸಣೆಗೆ ಬಂದ ಗರ್ಭಿಣಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂಬ ವರದಿ ನೀಡಲಾಗಿತ್ತು. ಇದರಿಂದ ಮೇ 8ರಂದು ಹೆರಿಗೆಗೆ ದಿನಾಂಕ ನೀಡಲಾಗಿದ್ದ ತುಂಬು ಗರ್ಭಿಣಿಯನ್ನು ಕೋವಿಡ್‌ ರೋಗಿಗಳ ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಬಳಿಕ ನಡೆಸಿದ ಎರಡನೇ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದಿದ್ದರಿಂದ ಅವರನ್ನು ಅಲ್ಲಿಂದ ಹೊರಗೆ ತಂದು ಪ್ರತ್ಯೇಕವಾಗಿ ನಿಗಾ ವಹಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಗರ್ಭಿಣಿಗೆ ಮೂರನೇ ಪರೀಕ್ಷೆ ನಡೆಸಲಾಗಿತ್ತು. ಗುರುವಾರ ಸಂಜೆ ಆ ವರದಿಯೂ ನೆಗೆಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇಂತಹ ತಪ್ಪು ಆಗಬಾರದಿತ್ತು. ಆಗಿ ಹೋಗಿದೆ. ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಗರ್ಭಿಣಿ ಪರೀಕ್ಷಾ ವರದಿಯಲ್ಲಿ ಖಾಸಗಿ ಪ್ರಯೋಗಾಲಯದಿಂದ, ಪೇದೆಗಳ ವರದಿ ವಿಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪ್ಪುಗಳಾಗಿದೆ. ಅವರ ವಿರುದ್ಧ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಸುರೇಶ್‌ಕುಮಾರ್‌ ಅವರು ಹೇಳಿದ್ದಾರೆ.