Asianet Suvarna News Asianet Suvarna News

ಉತ್ತರ ಕರ್ನಾಟಕ ಕೈಗಾರಿಕೆ ಬೆಳವಣಿಗೆಗೆ ಆದ್ಯತೆ: ಸಚಿವ ಶೆಟ್ಟರ್‌

ಮಾದರಿ ಕೈಗಾರಿಕಾ ನೀತಿ ಜಾರಿಗೆ ತರಲು ಸಿದ್ಧತೆ ನಡೆದಿದೆ ಎಂದ ಸಚಿವ ಜಗದೀಶ್‌ ಶೆಟ್ಟರ್‌| ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ| ವಾಣಿಜ್ಯೋದ್ಯಮಿಗಳ ಸಭೆಯಲ್ಲಿ ಭರವಸೆ ನೀಡಿದ ಭರವಸೆ| ಉದ್ಯಮಬಾಗ ಕೈಗಾರಿಕಾ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ಧಪಡಿಸಿದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು| 

Prefer For Industrial Growth in North Karnataka: Minister Jagadish Shettar
Author
Bengaluru, First Published Oct 2, 2019, 10:33 AM IST

ಬೆಳಗಾವಿ:(ಅ.2): ಮಾದರಿ ಕೈಗಾರಿಕಾ ನೀತಿ ಜಾರಿಗೆ ತರಲು ಸಿದ್ಧತೆ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ ನೀಡಿದರು.

ನಗರದ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ ಬಳಿಕ ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಾಣಿಜ್ಯೋದ್ಯಮಿಗಳ ಸಭೆ ನಡೆಸಿ ಅವರು ಮಾತನಾಡಿದರು. 

ಸುಧಾರಣಾ ಕಾಮಗಾರಿ ಕೈಗೆತ್ತಿಕೊಳ್ಳಿ

ಉದ್ಯಮಬಾಗ ಅತ್ಯಂತ ಹಳೆಯ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿನ ಪರಿಸ್ಥಿತಿ ಅವಲೋಕಿಸಿದಾಗ ತಕ್ಷಣವೇ ರಸ್ತೆ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯ ಒದಗಿಸುವ ತುರ್ತು ಅಗತ್ಯವಿರುವುದು ಕಂಡುಬಂದಿದೆ. ಕೈಗಾರಿಕೋದ್ಯಮಿಗಳು ಕೂಡ ಸ್ಥಳೀಯ ತೆರಿಗೆ ನೀಡುವುದರಿಂದ ಮಹಾನಗರ ಪಾಲಿಕೆ ವತಿಯಿಂದ ಸುಧಾರಣಾ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಈಗಾಗಲೇ 6 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಆರಂಭಿಸಲಾಗುವುದು. ಆದಷ್ಟು ಬೇಗ ಏಕಗವಾಕ್ಷಿ ಪದ್ಧತಿಯಡಿ ಕೈಗಾರಿಕೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೂ ತಿಳಿಸಲಾಗಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕಿರುವ ಪ್ರಸ್ತಾವಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅದಕ್ಕೆ ಅನುಮೋದನೆ ಪಡೆಯಲು ಸಹಕರಿಸಲಾಗುವುದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವಕ್ಕೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಶೆಟ್ಟರ್‌ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. 
ರೈಲ್ವೆ ಸಚಿವ ಸುರೇಶ್‌ ಅಂಗಡಿ ಮಾತನಾಡಿ, ದೇಶದ ಶೇ.75 ರಷ್ಟು ತೆರಿಗೆ ಸಣ್ಣ ಉದ್ದಿಮೆದಾರರಿಂದ ಬರುತ್ತಿದ್ದು, ಆ ಕ್ಷೇತ್ರದ ಪ್ರಗತಿಗೆ ನೆರವು ನೀಡಲು ಸರ್ಕಾರ ಸಿದ್ಧವಿದೆ. ಉದ್ಯಮಬಾಗ ಕೈಗಾರಿಕಾ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವರದಿ ಸಿದ್ಧಪಡಿಸಿದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಅಭಯ್‌ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಅತೀ ಹೆಚ್ಚು ರಪ್ತು ಮಾಡುವಂತಹ ಕೈಗಾರಿಕಾ ಕೇಂದ್ರ ಬೆಳಗಾವಿ. ಆದ್ದರಿಂದ ಇಲ್ಲಿನ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕೋದ್ಯಮಿಗಳು, ಸರ್ಕಾರವು ಬೆಳಗಾವಿಯ ಕೈಗಾರಿಕಾ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ಸಮಗ್ರ ಬೆಳವಣಿಗೆಗೆ ಮುಂದಾಗಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಹೆಚ್ಚಿನ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಕೈಗಾರಿಕಾ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸುವುದರ ಜತೆಗೆ ಇತರೇ ಬೇಡಿಕೆ ಈಡೇರಿಸುವಂತೆ ಬಿಸಿಸಿಐ ವತಿಯಿಂದ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಮನವಿಪತ್ರ ನೀಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್‌, ಜಿಲ್ಲಾ ಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್‌ ಉಪಸ್ಥಿತರಿದ್ದರು.

ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀಧರ್‌ ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿರುವ ರಸ್ತೆ, ವಿದ್ಯುಚ್ಛಕ್ತಿ, ನೀರು ಪೂರೈಕೆ ಮತ್ತಿತರ ಸಮಸ್ಯೆಗಳ ಕುರಿತು ಪಿಪಿಟಿ ಮೂಲಕ ಸಚಿವರಿಗೆ ಮಾಹಿತಿ ನೀಡಲಾಯಿತು. ಇದಕ್ಕೂ ಮುಂಚೆ ಸಚಿವ ಜಗದೀಶ್‌ ಶೆಟ್ಟರ್‌ ಅವರು, ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸಿ, ಅಲ್ಲಿನ ಸಮಸ್ಯೆ ಪರಿಶೀಲಿಸಿದರು.
 

Follow Us:
Download App:
  • android
  • ios