ಹಾಸನ (ಫೆ.02):  ಹಾಸನ ವಿಧಾನಸಭಾ ವ್ಯಾಪ್ತಿಯ ಐದು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಆಕಸ್ಮಿಕ ಶಾಸಕ ಎಂದವರಿಗೆ ಜನರು ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ತಿರುಗೇಟು ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ವ್ಯಾಪ್ತಿಯ 5 ಗ್ರಾಪಂನಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು, ಸುಮಾರು 30-40 ವರ್ಷಗಳಿಂದ ಬಿಜೆಪಿಗೆ ಸಿಗದ ಅ​ಧಿಕಾರ ಈಗ ಪಡೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಲಗಾಮೆ ಹೋಬಳಿ ಬೂತ್‌ನಲ್ಲಿ ಒಂದು ಸುತ್ತು ಜೆಡಿಎಸ್‌ ಮುಂದೆ ಇತ್ತು. ನಂತರದಲ್ಲಿ ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರಿಂದ ಐದು ಪಂಚಾಯ್ತಿಯಲ್ಲಿ ಪ್ರತಿಸ್ಪರ್ಧಿ ಇಲ್ಲದೆ ಅಧಿಕಾರ ಸಿಕ್ಕಿದಂತಾಗಿದ್ದು, ಸಾಲಗಾಮೆ ಹೋಬಳಿಯ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'? ..

ಒಂದು ಪಂಚಾಯ್ತಿಯಲ್ಲು ಪ್ರತಿಸ್ಪರ್ಧಿಯೇ ಇಲ್ಲ:  ಒಂದು ಪಂಚಾಯ್ತಿಯಲ್ಲು ಪ್ರತಿಸ್ಪ​ರ್ಧಿಯೇ ಇರುವುದಿಲ್ಲ. ಜೆಡಿಎಸ್‌ನ ಒಬ್ಬರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ. ಹಾಸನ ಜಿಲ್ಲೆಯ ಮುಖ್ಯ ಸ್ಥಳದಲ್ಲಿ ಬಿಜೆಪಿ ಶಾಸಕ ಇದ್ದೇನೆ ಎಂದು ವಿರೋಧ ಪಕ್ಷದ ನಾಯಕರು ನನ್ನನ್ನು ಪ್ರೀತಂಗೌಡ ಆಕಸ್ಮಿಕ ಶಾಸಕ, ಕೂಸು ಎಂದು ಜರಿದಿದ್ದರು. ಜೆಡಿಎಸ್‌ ಭದ್ರಕೋಟೆ ಎಂದು ಬೇಲಿ ಹಾಕಿದ್ದರು. ಅದು ಈಗ ಕಳಚಿ ಬಿದ್ದಿದೆ. ಇದಕ್ಕೆ ತಕ್ಕ ಉತ್ತರವನ್ನು ಸಾಲಗಾಮೆ ಹೊಬಳಿಯ ಜನತೆ ಕೊಟ್ಟಿದ್ದಾರೆ ಎಂದು ಟಾಂಗ್‌ ನೀಡಿದರು.

ಜನರ ಅಪೇಕ್ಷೆಯಂತೆ ಅಭಿವೃದ್ಧಿ ಮಾಡಿ:  ಜೆಡಿಎಸ್‌ ಪಕ್ಷದವರು ಸರ್ವಾಧಿಕಾರಿ ಧೋರಣೆ ಮಾಡಿದ್ದರು. ನಾವು ಅವರ ರೀತಿ ಮಾಡಿದರೆ ಮುಂದೆ ನಮಗೂ ಅದೇ ಪರಿಸ್ಥಿತಿ ಬರುತ್ತದೆ. ಜನರ ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಅಪೇಕ್ಷೆ ಇಟ್ಟು ಆಯ್ಕೆ ಮಾಡಿರುವ ಹಾಸನ ಜಿಲ್ಲೆಯ ಸಂಸದರು ಇನ್ನೂ ಹೆಚ್ಚಿನ ಕೆಲಸ ಮಾಡಬೇಕು. ಲೋಕಸಭೆಯಲ್ಲಿ ಮಾತನಾಡಿ ಇನ್ನೂ ಹೆಚ್ಚು ಹಣ ತರಬೇಕಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಮುಂದಿನ ಬಜೆಟ್‌ನಲ್ಲಾದರೂ ಹಾಸನಕ್ಕೆ ಹೆಚ್ಚು ಅನುದಾನ ತರಬೇಕು. ದೇವೇಗೌಡರ ಮಾರ್ಗದರ್ಶನದಲ್ಲಿ ಇಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಧಾನಮಂತ್ರಿ ಗಮನಕ್ಕೆ ತರಲಿ ಎಂದು ಸಂಸದರಿಗೆ ಸಲಹೆ ಕೊಟ್ಟರು.

ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ಸಾಲಗಾಮೆ ಹೋಬಳಿಯ ಸುತ್ತ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಪಡೆದು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡವರು ಉಪಸ್ಥಿತರಿದ್ದರು.