ಕೊರೋನಾ ಕಾಟ: ಪ್ರಾಣಿಗಳೂ ಹುಷಾರು ತಪ್ಪಿದ್ರೂ ಕ್ವಾರಂಟೈನ್‌ಗೆ..!
ಶಿವಮೊಗ್ಗ(ಏ.15): ಕೊರೋನಾ ವೈರಸ್ ತನ್ನ ಆರ್ಭಟವನ್ನು ಕೇವಲ ಮನುಷ್ಯರ ಮೇಲೆ ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಸಹ ಬೀರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ ಪ್ರಾಣಿಗಳಿಗೆ ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಾಣಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಗರದಿಂದ 10 ಕಿ.ಮೀ. ದೂರದಲ್ಲಿರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಾಣಿಗಳ ವೀಕ್ಷಣೆ ನಿಷೇಧಿಸಲಾಗಿದೆ. ಅಲ್ಲದೆ ಇಲ್ಲಿನ ಸಿಬ್ಬಂದಿಗೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಶಿವಮೊಗ್ಗದ ಮೆಗ್ಗಾನ್‌ನಲ್ಲಿ 50 ವೆಂಟಿಲೇಟರ್ ಸೌಲಭ್ಯ: ಸಂಸದ B Y ರಾಘವೇಂದ್ರ
ಪ್ರಸ್ತುತ ಸಿಂಹಧಾಮದಲ್ಲಿ ಪಕ್ಷಿಗಳು, 7 ಹುಲಿಗಳು, 4 ಸಿಂಹಗಳು, 28 ವಿವಿಧ ಬಗೆಯ ವನ್ಯಜೀವಿಗಳು ಸೇರಿ ಒಟ್ಟು 295 ಪ್ರಾಣಿಗಳಿವೆ. ಸಿಂಹ, ಹುಲಿ, ಜಿಂಕೆ, ಕಡವೆ, ಕೃಷ್ಣಮೃಗ ಹೊರತುಪಡಿಸಿ ಉಳಿದ ಎಲ್ಲ ಪ್ರಾಣಿ, ಪಕ್ಷಿಗಳನ್ನು ಸುರಕ್ಷತಾ ಆವರಣ ಒಳಗೆ ಇಡಲಾಗಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ.
ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತದೆ. ಅವರು ಬಟ್ಟೆ ಬದಲಿಸಲು ಪ್ರತ್ಯೇಕ ರೂಂ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳ ಹತ್ತಿರ ಹೋಗುವುದಕ್ಕೂ ಮೊದಲು ಆ್ಯಂಟಿ ವೈರಸ್ ಕೆಮಿಕಲ್ ಹಾಕಿರುವ ನೀರಿನಲ್ಲಿ ಅವರು ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ಪ್ರಾಣಿಗಳ ಹತ್ತಿರ ಹೋಗಬೇಕು. ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಛತೆ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಹಾಕಿಕೊಳ್ಳುವುದನ್ನು ಇಲ್ಲೂ ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಇಲ್ಲಿನ ಎಲ್ಲಾ ಆವರಣಗಳನ್ನು ಮೊದಲಿಗಿಂತಲೂ ಹೆಚ್ಚಿನ ಗಮನ ವಹಿಸಿ ಸ್ವಚ್ಛವಾಗಿ ಇಡಲಾಗುತ್ತಿದೆ.
ಆಹಾರ, ಔಷಧ ಕೊರತೆ ಸದ್ಯಕ್ಕಿಲ್ಲ:
ಸದ್ಯಕ್ಕೆ ಇಲ್ಲಿನ ಪ್ರಾಣಿಗಳಿಗೆ ಅವಶ್ಯಕತೆ ಇರುವ ಔಷಧಿ, ಆಹಾರಗಳನ್ನು ಸಂಗ್ರಹಿಸಲಾಗಿದೆ. ಸಸ್ಯಾಹಾರಿ ಪ್ರಾಣಿಗಳಿಗೆ ಬೇಕಾದ ಹಿಂಡಿ, ಬೂಸಾ ಹಾಗೂ ಪಕ್ಷಿಗಳಿಗೆ ಕಾಳುಕಡಿ ಸಂಗ್ರಹಿಸಿಡಲಾಗಿದೆ. ಮಾಂಸಾಹಾರ ಪ್ರಾಣಿಗಳಿಗೆ ಆಹಾರ ಒದಗಿಸಲು ಒಂದು ವರ್ಷದ ಟೆಂಡರ್ ನೀಡಲಾಗಿರುವುದರಿಂದ ಅವುಗಳ ಆಹಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಹೊರಗಿನಿಂದ ಆಹಾರ(ಮಾಂಸ) ತರುವ ವಾಹನಗಳ ಚಾಲಕರನ್ನು ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತದೆ. ಪ್ರಾಣಿಗಳಿಗೆ ನೀಡುವ ಆಹಾರನ್ನು ಬಿಸಿನೀರಿನಲ್ಲಿ ಸ್ವಚ್ಛ ಮಾಡಲಾಗುತ್ತದೆ. ಡಾಕ್ಟರ್ ಪರಿಶೀಲಿಸಿದ ನಂತರವೇ ಪ್ರಾಣಿಗಳಿಗೆ ನೀಡಲಾಗುತ್ತದೆ.
ಧಾಮದ ಒಳಗೆ 20 ಸಾವಿರ ಲೀಟರ್‌ನ ಓವರ್‌ಹೆಡ್ ಟ್ಯಾಂಕ್ ಇದೆ. 20ಕ್ಕೂ ಹೆಚ್ಚು ಜಲಮೂಲಗಳು ಇವೆ. ಟ್ಯಾಂಕ್ ಮೂಲಕ ಪ್ರಾಣಿ, ಪಕ್ಷಿಗಳು ನೆಲೆಸಿದ ಆವರಣದ ಒಳಗಿನ ತೊಟ್ಟಿಗಳಿಗೆ ಸ್ವಚ್ಛವಾದ ನೀರು ಹರಿಸಲಾಗುತ್ತಿದೆ. ಈ ಮೂಲಕ ಪ್ರಾಣಿಗಳ ಸುರಕ್ಷತೆ, ಸ್ವಚ್ಛತೆ ಹಾಗೂ ಆರೋಗ್ಯದ ಕುರಿತು ಗಮನ ಹರಿಸಲಾಗುತ್ತಿದೆ.
ಕೊರೋನಾ ವೈರಸ್ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡುತ್ತಿರುವ ಮಾದರಿಯಲ್ಲಿಯೇ ಪ್ರಾಣಿಗಳನ್ನು ಸಹ ಕ್ವಾರಂಟೈನ್ ಮಾಡಲಾಗುತ್ತದೆ. ಅದಕ್ಕಾಗಿಯೇ ಸಿಂಹಧಾಮದಲ್ಲಿಯೂ ಸಹ ಕ್ವಾರನ್‌ಟೈನ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಯಾವುದಾದರೂ ಪ್ರಾಣಿಗಳು ಆಹಾರ- ನೀರು ಸೇವಿಸದೆ, ಹುಷಾರಿಲ್ಲ ಎಂಬ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತಹ ಪ್ರಾಣಿಗಳಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ ಯಾವುದೆ ಪ್ರಾಣಿಗಳಿಗೂ ಆ ರೀತಿಯ ಲಕ್ಷಣಗಳಿ ಕಂಡು ಬಂದಿಲ್ಲ ಎಲ್ಲಾ ಪ್ರಾಣಿಗಳೂ ಆರೋಗ್ಯವಾಗಿವೆ ಎಂದು ಸಿಂಹಧಾಮ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್ ಚಂದ್ ಹೇಳಿದ್ದಾರೆ.