ಪೂರ್ವ ಮುಂಗಾರು ಹಾವಳಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 59 ಲಕ್ಷ ರುಪಾಯಿ ನಷ್ಟ
ಪೂರ್ವ ಮುಂಗಾರು ಮಳೆ ಕಾಫಿ ನಾಡಿನ ರೈತರಿಗೆ ಬಲವಾದ ಪೆಟ್ಟು ನೀಡಿದ್ದು, ಸುಮಾರು 59 ಲಕ್ಷ ರುಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.28): ಕಳೆದ ವರ್ಷ ಸುರಿದ ಮುಂಗಾರು ಮಳೆಗೆ ತತ್ತರಿಸಿದ ಕಾಫಿನಾಡಿನಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆಯಿಂದ ಈವರೆಗೆ ಸುಮಾರು 59 ಲಕ್ಷ ರುಪಾಯಿಗಳಷ್ಟು ಬೆಳೆ, ಮನೆ ಹಾನಿ ಸಂಭವಿಸಿದೆ.
ಕಳೆದ ವರ್ಷ ಮಹಾಮಳೆ ಸಂದರ್ಭದಲ್ಲಿ 12 ಮಂದಿ ಮೃತಪಟ್ಟಿದ್ದರು. ಇವರಲ್ಲಿ 9 ಮಂದಿ ಮೂಡಿಗೆರೆ ತಾಲೂಕಿನವರು. ಈ ವರ್ಷದಲ್ಲಿ ಈಗಾಗಲೇ 3 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರೆಲ್ಲರೂ ಮೂಡಿಗೆರೆ ತಾಲೂಕಿನವರು.
ಮಲೆನಾಡಿನ ಹಲವೆಡೆ ಪ್ರತಿದಿನ ಗುಡುಗು ಸಹಿತ ಮಳೆಯಾಗುತ್ತಿದೆ. ಕೆಲವೆಡೆ ಗುಡ್ಡ ಕುಸಿತ ಆಗಿದ್ದರಿಂದ ಮೂಡಿಗೆರೆ ತಾಲೂಕಿನ ಜನರು ಆತಂಕಕ್ಕೆ ಈಡಾಗಿದ್ದಾರೆ. ಆದರೆ, ಪೂರ್ವ ಮುಂಗಾರಿನಲ್ಲಿ ಈ ತಾಲೂಕಿನಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂಬುದು ಸಮಧಾನಕರ ವಿಷಯ. ಬಲವಾಗಿ ಬೀಸಿದ ಗಾಳಿಗೆ ಬಯಲುಸೀಮೆಯ ತರೀಕೆರೆ ತಾಲೂಕಿನಲ್ಲಿ ಬೆಳೆಹಾನಿಯಾಗಿದ್ದರೆ, ಕೊಪ್ಪ ತಾಲೂಕಿನಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ.
ಮನೆ ಹಾನಿ:
ಬಲವಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಜಿಲ್ಲೆಯಲ್ಲಿ ಈವರೆಗೆ 122 ಮನೆಗಳಿಗೆ ಹಾನಿ ಸಂಭವಿಸಿದೆ. ಇದರಲ್ಲಿ ಒಂದು ಪಕ್ಕಾ ಮನೆಗೆ ಹೆಚ್ಚಿನ ಹಾನಿ ಸಂಭವಿಸಿದ್ದರೆ, ಭಾಗಶಃ 29 ಪಕ್ಕಾ ಮನೆಗಳಿಗೆ, 92 ಕಚ್ಛಾ ಮನೆಗಳಿಗೆ ಹಾನಿಯಾಗಿದೆ. ಇದರಿಂದಾಗಿ 20 ಲಕ್ಷ ನಷ್ಟವಾಗಿದೆ.
ಬೆಳೆಹಾನಿ:
ಜಿಲ್ಲೆಯಲ್ಲಿ ಈವರೆಗೆ ಬಂದಿರುವ ಮಳೆಯಿಂದ ಕೃಷಿ ಬೆಳೆಗಳಿಗೆ ಹಾನಿಯಾಗಿಲ್ಲ. ಆದರೆ, ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ನಷ್ಟಸಂಭವಿಸಿದೆ. ಪ್ರಮುಖವಾಗಿ ತರೀಕೆರೆ ತಾಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಈವರೆಗೆ ತೋಟಗಾರಿಕೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕಾರ 166 ಎಕರೆ 32 ಗುಂಟೆಯಲ್ಲಿ ಬೆಳೆಹಾನಿಯಾಗಿದೆ. 136 ಎಕರೆ, 21 ಗಂಟೆ ವಾರ್ಷಿಕ ಬೆಳೆಗಳಿಗೆ ಹಾನಿ ಸಂಭವಿಸಿದೆ. ಸುಮಾರು .40 ಲಕ್ಷಗಳಷ್ಟುಬೆಳೆ ಹಾನಿ ಸಂಭವಿಸಿದೆ.
ಮೂವರ ಬಲಿ:
ಮಳೆ, ಗಾಳಿ ಮಾತ್ರವಲ್ಲ ಈ ಬಾರಿ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟ ಜೋರಾಗಿದೆ. ಕಳೆದ ಏಪ್ರಿಲ್ ಮಾಹೆಯಲ್ಲಿ ಮೂಡಿಗೆರೆ ತಾಲೂಕಿನಲ್ಲಿ ತಮಿಳುನಾಡು ಮೂಲದ ಮೂವರು ಮಹಿಳೆಯರು ಸಿಡಿಲು ಬಡಿದು ಮೃತಪಟ್ಟರು. ಈಗಾಗಲೇ ಮೃತ ಕುಟುಂಬಗಳಿಗೆ ಜಿಲ್ಲಾಡಳಿತ ತಲಾ .5 ಲಕ್ಷದಂತೆ 15 ಲಕ್ಷ ಪರಿಹಾರಧನವನ್ನು ಬಿಡುಗಡೆ ಮಾಡಿದೆ.
ಪೂರ್ವಭಾವಿ ಸಭೆ
ಚಿಕ್ಕಮಗಳೂರು: ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಹಾಗೂ ಮಳೆಗಾಲದ ಹಿನ್ನೆಲೆ ಉದ್ಭವಿಸಬಹುದಾದ ವಿಪತ್ತು ಮತ್ತು ಹಾನಿಗಳ ಬಗ್ಗೆ ಸಮಗ್ರ ಸಮೀಕ್ಷೆ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮೇ 28ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.