ಪುತ್ತೂರಿಂದ ಬೆಳ್ಳಾರೆಗೆ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ; ನಿನ್ನೆ ಏನೆಲ್ಲಾ ನಡೀತು ಗೊತ್ತಾ!
- ಪುತ್ತೂರಿನಿಂದ ಬೆಳ್ಳಾರೆಗೆ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ
- ಆಸ್ಪತ್ರೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
- ಜನಪ್ರತಿನಿಧಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ
- ಪುತ್ತೂರು ಬಂದ್
ಪುತ್ತೂರು (ಜು.28) :ಅಪರಿಚಿತ ದುಷ್ಕರ್ಮಿಗಳ ತಲವಾರು ದಾಳಿಗೆ ಬಲಿಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಮೃತದೇಹದ ಅಂತಿಮ ಯಾತ್ರೆ ಬುಧವಾರ ಪುತ್ತೂರಿನಿಂದ ಹುಟ್ಟೂರು ನೆಟ್ಟಾರಿಗೆ ಸಾಗಿತು. ಮಂಗಳವಾರ ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಮುಂಜಾನೆ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಮಾರು 10 ಗಂಟೆಯ ವೇಳೆಗೆ ಸರ್ಕಾರಿ ಆಸ್ಪತ್ರೆಯ ಮುಂಭಾಗದಿಂದ ನಗರದ ಮುಖ್ಯರಸ್ತೆಯಲ್ಲಿ ದರ್ಬೆಯ ತನಕ ಮೃತದೇಹವನ್ನು ಪುಷ್ಪಾಲಂಕೃತ ಆ್ಯಂಬುಲೆನ್ಸ್‌ನಲ್ಲಿಟ್ಟು ಜನರು ಪಾದಯಾತ್ರೆ ಮೆರವಣಿಗೆ ನಡೆಸಿದರು. ದರ್ಬೆಯಿಂದ ವಾಹನಗಳೊಂದಿಗೆ ಶವಯಾತ್ರೆ ಮುಂದುವರಿಯಿತು. ಹಿಂಭಾಗದಿಂದ ಇನ್ನೆರಡು ಆ್ಯಂಬುಲೆನ್ಸ್‌ಗಳು ಹಿಂಬಾಲಿಸಿದವು.
ಕೈಕೊಟ್ಟಆ್ಯಂಬುಲೆನ್ಸ್: ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅರ್ಧದಲ್ಲಿ ಹಾಳಾದ ಕಾರಣ ದರ್ಬೆಯಲ್ಲಿ ಮೃತದೇಹವನ್ನು ಇನ್ನೊಂದು ಆ್ಯಂಬುಲೆನ್ಸ್‌ಗೆ ಶಿಫ್‌್ಟಮಾಡಿ ಕೊಂಡೊಯ್ಯಲಾಯಿತು. ಅಂತಿಮ ಯಾತ್ರೆ ದರ್ಬೆ, ಸವಣೂರು, ನಿಂತಿಕಲ್ ಮಾರ್ಗವಾಗಿ ಬೆಳ್ಳಾರೆಗೆ ಸಾಗಿತು. ದಾರಿಯಲ್ಲಿ ಅಲ್ಲಲ್ಲಿ ಜನರು ಪಾರ್ಥಿವ ಶರೀರ ದರ್ಶನ ಮಾಡಿ ಪುಷ್ಪ ಹಾರ ಸಮರ್ಪಣೆ ಮಾಡಿದರು.
ಕಾಲ್ನಡಿಗೆಯಲ್ಲೇ ಸಾಗಿದರು: ಪುತ್ತೂರಿನ ದರ್ಬೆಯ ತನಕ ಮೃತದೇಹದ ಜೊತೆಗೆ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಪ್ರವೀಣ್ ಅವರ ಅಭಿಮಾನಿಗಳು ಕಾಲ್ನಡಿಗೆ ಜಾಥಾ ನಡೆಸಿದರು. ಜಾಥಾದಲ್ಲಿ ಪ್ರವೀಣ್ ನೆಟ್ಟಾರು ‘ಅಮರ್‌ರಹೇ’ ಎಂಬ ಘೋಷಣೆ ಕೂಗುತ್ತಾ ಸಾಗಿದರು.
ಕುಟುಂಬಸ್ಥರು, ಸ್ಥಳೀಯರ ಆಕ್ರೋಶ: ಪ್ರವೀಣ್ ಮಂಗಳವಾರ ರಾತ್ರಿ ಮೃತಪಟ್ಟಿದ್ದರೂ ಅಂತಿಮ ಯಾತ್ರೆ ಆರಂಭದ ವರೆಗೂ ಶಾಸಕರು, ಸಚಿವರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ಎಂದು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರು ಹಾಗೂ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರವೀಣ್ ಅವರ ಕುಟುಂಬಕ್ಕೆ ಇನ್ನು ಯಾರಿದ್ದಾರೆ. ಹಿಂದುತ್ವಕ್ಕಾಗಿ ಪ್ರಾಣ ಅರ್ಪಿಸಿದ ಪ್ರವೀಣ್ ಅವರನ್ನು ನೋಡಲು ಇಲ್ಲಿಯ ತನಕ ಯಾರೂ ಬಂದಿಲ್ಲ. ನಮ್ಮ ಎಂಎಲ್‌ಎ ಎಲ್ಲಿ? ಇದು ಯಾವ ಹಿಂದುತ್ವ? ಹಿಂದುತ್ವಕ್ಕಾಗಿ ಸತ್ತರೆ ಇಲ್ಲಿ ಕೇಳುವವರು ಯಾರೂ ಇಲ್ಲ’ ಎಂದು ಅವರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಕೆಲ ಸ್ಥಳೀಯ ಮುಖಂಡರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿ ‘ಶಾಸಕರು ಫ್ಲೈಟ್‌ನಲ್ಲಿ ಬರುತ್ತಿದ್ದಾರೆ. ಅವರು ಪ್ರವೀಣ್ ಅವರ ಮನೆಗೆ ಭೇಟಿ ನೀಡಲಿದ್ದಾರೆ’ ಎಂದು ತಿಳಿಸಿದರು. ಇದರಿಂದಲೂ ಸಮಾಧಾನಿತರಾಗದೆ ‘ಫ್ಲೈಟ್‌ನಲ್ಲಿ ಬರುವುದು ಯಾಕೆ ಮದುವೆಗಾ? ಮೀಡಿಯಾದವರು ಬೆಂಗಳೂರಿನಿಂದ ಬೆಳಗ್ಗೆಯೇ ಇಲ್ಲಿಗೆ ಮುಟ್ಟಿದ್ದಾರೆ. ನಮ್ಮ ಶಾಸಕರಿಗೆ ಬರಲು ಫ್ಲೈಟ್ ಬೇಕಾ?’ ಎನ್ನುತ್ತಾ ಆಕ್ರೋಶ ವ್ಯಕ್ತ ಪಡಿಸಿದರು.
ಧ್ವಜಗಳ ತೆರವು: ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಮೃತದೇಹ ಸಾಗಿಸುತ್ತಿದ್ದ ರಸ್ತೆಯ ಬದಿಯಲ್ಲಿದ್ದ ಎಸ್‌ಡಿಪಿಐ, ಪಿಎಫ್‌ಐ ಮತ್ತು ಸಿಎಫ್‌ಐನ ಧ್ವಜಗಳನ್ನು ತೆರವುಗೊಳಿಸಿದರು.
ಪುತ್ತೂರು ಬಂದ್: ಹಿಂದೂ ಸಂಘಟನೆಗಳು ಕರೆ ನೀಡಿದ ಹಿನ್ನಲೆಯಲ್ಲಿ ಬುಧವಾರ ಪುತ್ತೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಮೆಡಿಕಲ್, ಹಾಲಿನ ಡೈರಿ, ಪೇಪರ್ ಸ್ಟಾಲ್ ಹೊರತುಪಡಿಸಿ ಇತರ ಎಲ್ಲಾ ಅಂಗಡಿ, ಹೊಟೇಲ್, ಜವುಳಿ ಮಳಿಗೆ, ಇನ್ನಿತರ ಅಂಗಡಿಗಳು ಬಂದ್ ಆಗಿದ್ದವು. ಕೆಸ್ಸಾರ್ಟಿಸಿ ಸಂಸ್ಥೆಯಿಂದ ಓಡಾಟ ನಡೆಸುತ್ತಿದ್ದ ಎಲ್ಲಾ ಸ್ಥಳೀಯ ಬಸ್‌ಗಳೂ ನಿಲುಗಡೆಯಾಗಿದ್ದವು.
ಪುತ್ತೂರು-ಮಂಗಳೂರು, ಪುತ್ತೂರು-ಸುಳ್ಯ ಹಾಗೂ ಇತರ ಜಿಲ್ಲೆಗಳಿಗೆ ತೆರಳುವ ಬಸ್ಸುಗಳು ಓಡಾಟ ನಡೆಸುತ್ತಿದ್ದವು. ಅಪರಾಹ್ನದ ಬಳಿಕ ಪ್ರಯಾಣಿಕರ ಸಂಖ್ಯೆ ವಿರಳವಾದ ಕಾರಣ ಬಹುತೇಕ ಮಂಗಳೂರು ಮತ್ತು ಸುಳ್ಯ ಓಡಾಟದ ಬಸ್‌ಗಳನ್ನು ಕಡಿಮೆಗೊಳಿಸಲಾಗಿತ್ತು. ಯಾವುದೇ ಖಾಸಗಿ ಬಸ್‌ಗಳೂ ಪುತ್ತೂರು ಬಸ್ ನಿಲ್ದಾಣದಿಂದ ಓಡಾಟ ನಡೆಸಿರಲಿಲ್ಲ.
ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುವ ಖಾಸಗಿ ಬಸ್‌ಗಳು ಕಬಕದ ತನಕ ಆಗಮಿಸಿ ಬಳಿಕ ಹಿಂದಿರುತ್ತಿದ್ದವು. ಕೆಲವೊಂದು ಆಟೋರಿಕ್ಷಾಗಳು ಹಾಗೂ ದ್ವಿಚಕ್ರ ವಾಹನಗಳು ಓಡಾಟ ನಡೆಸುತ್ತಿದ್ದವು. ಶವಯಾತ್ರೆ ನಡೆದ ಬಳಿಕ ನಗರದಲ್ಲಿ ಜನರ ಓಡಾಟ ತೀರಾ ವಿರಳವಾಗಿತ್ತು.
ಬಸ್‌ಗೆ ಕಲ್ಲು ತೂರಾಟ:
ಪುತ್ತೂರು-ಮಂಗಳೂರು ಓಡಾಟ ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ನಗರದ ಬೊಳುವಾರು ಎಂಬಲ್ಲಿ ದುಷ್ಕರ್ಮಿಗಳು ಬುಧವಾರ ಬೆಳಗ್ಗೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಬಸ್ಸಿನ ಕಿಟಿಕಿಯ ಗಾಜಿಗೆ ಹಾನಿಯಾಗಿದೆ.
ಕೊಲೆ ಪ್ರಕರಣ ದಾಖಲು :
ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2022ರಂತೆ 302 ಜೊತೆಗೆ 34 ಐಪಿಸಿ ಅನ್ವಯ ಕೊಲೆ ಪ್ರಕರಣ ಕೇಸು ದಾಖಲಾಗಿದೆ.
ಕೆಯ್ಯೂರು ಮಾಡಾವು ಸಂತೋಷ್ ನಗರ ನಿವಾಸಿ ಮಧು ಕುಮಾರ್ ರಾಯನ್ ನೀಡಿದ ದೂರಿನಂತೆ ಮೋಟಾರು ಸೈಕಲಿನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ.
ಬಿಗಿ ಬಂದೋಬಸ್ತ್ ;144 ಸೆಕ್ಷನ್ ಜಾರಿ :
ಪ್ರವೀಣ್ ನೆಟ್ಟಾರ್ ಹತ್ಯೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರಿನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನಗರದ ಎಲ್ಲಾ ಆಯಕಟ್ಟಿನ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್‌್ತ ಮಾಡಲಾಗಿದೆ. ಅಪರಿಚಿತ ವಾಹನಗಳ ಬಿಗು ತಪಾಸಣೆ ನಡೆಸಲಾಗುತ್ತಿದೆ. ಬುಧವಾರ ಬೆಳಗ್ಗೆ ಸೆ. 144ರನ್ವಯ ಜನರು ಗುಂಪುಗೂಡದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ :
ಪ್ರವೀಣ್ ನೆಟ್ಟಾರ್ ಹತ್ಯೆಯಿಂದಾಗಿ ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಕೆಲವೊಂದು ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಅಂಬಿಕಾ ವಿದ್ಯಾಸಂಸ್ಥೆಗಳಿಗೆ ರಜೆ ಸಾರಲಾಗಿತ್ತು. ಉಳಿದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ವಿರಳ ಸಂಖ್ಯೆಯಲ್ಲಿ ಆಗಮಿಸಿದ್ದರು. ಇತರ ಶಾಲೆ ಕಾಲೇಜುಗಳು ನಡೆದಿದ್ದರು. ವಾಹನಗಳ ವ್ಯವಸ್ಥೆಗಳಿಲ್ಲದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಸಮಾವೇಶ ರದ್ದು: ಸಿಎಂ ಬೊಮ್ಮಾಯಿ
ಮಂಗಳವಾರ ತಡರಾತ್ರಿ ಪ್ರತಿಭಟನೆ :
ಪ್ರವೀಣ್ ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಪ್ರಗತಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರವೀಣ್ ಕುಟುಂಬಸ್ಥರು, ಅಭಿಮಾನಿಗಳು ನ್ಯಾಯಕ್ಕೆ ಆಗ್ರಹಿಸಿ ತಡರಾತ್ರಿಯ ತನಕ ಪ್ರತಿಭಟನೆ ನಡೆಸಿದರು. ರಾತ್ರಿ ಸುಮಾರು 9.30ರ ವೇಳೆಗೆ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಪ್ರವೀಣ್ ಅವರನ್ನು ತರಲಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.
ವಿವರ ತಿಳಿಯುತ್ತಿದ್ದಂತೆ ನೂರಾರು ಮಂದಿ ಆಸ್ಪತ್ರೆಯ ಮುಂದೆ ಜಮಾವಣೆಗೊಂಡಿದ್ದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ರು. 1 ಕೋಟಿ ಪರಿಹಾರ ನೀಡಬೇಕು ಹಾಗೂ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇನ್ನು ಯಾಕೋ ಗಲಭೆ ಎಬ್ಬಿಸಿಲ್ಲ ಬಿಜೆಪಿಯವ್ರು, ಪ್ರವೀಣ್ ಹತ್ಯೆ ಪ್ರಕರಣ ಕುರಿತು ಜಾರಕಿಹೊಳಿ ವ್ಯಂಗ್ಯ!
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ಅವರು ಪ್ರತಿಭಟನಾ ನಿರತರ ಜೊತೆಗೆ ಮಾತುಕತೆ ನಡೆಸಿದರು. ಆದರೆ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು. ಇಲ್ಲದಿದ್ದಲ್ಲಿ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.
ತಡರಾತ್ರಿ 1.30ರ ವೇಳೆಗೆ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪುತ್ತೂರಿಗೆ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಬಿಜೆಪಿ ಯುವ ಮೋರ್ಚಾದ ಸಹಜ್ ರೈ ಬಳೆಜ್ಜ, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ ಸೇರಿದಂತೆ ಹಲವು ಮುಖಂಡರು ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗಳ ಭರವಸೆಯ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.
ಪ್ರವೀಣ್ ಹಂತಕರನ್ನು ಗುಂಡಿಟ್ಟು ಕೊಲ್ಲಿ, ಆಂದೋಲ ಸ್ವಾಮೀಜಿ ಅಗ್ರಹ!
ಜಿಲ್ಲಾ ಪೊಲೀಸ್ ಅಧೀಕ್ಷರ ಹೃಷಿಕೇಶ್ ಸೋನಾವಣೆ, ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಮತ್ತಿತರರು ಇದ್ದರು.
ರಾಷ್ಟೀಯ ತನಿಖಾ ಸಂಸ್ಥೆಯಿಂದ ತನಿಖೆಯಾಗಲಿ:
ಪ್ರವೀಣ್ ನೆಟ್ಟಾರು ಹಿಂದೂ ಸಮಾಜ ನಿರ್ಮಾಣಕ್ಕಾಗಿ ಅವಿರತ ಶ್ರಮಪಡುತ್ತಿದ್ದರು. ಅವರ ಬೆಳವಣಿಗೆ ಸಹಿಸದೆ ಹತ್ಯೆ ಮಾಡಲಾಗಿದೆ. ಅವರ ಹತ್ಯೆಯು ಖಂಡನೀಯವಾಗಿದೆ. ಈ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ರಾಷ್ಟ್ರೀಯ ತನಿಖಾ ದಳದ ಮೂಲಕ ಪ್ರಕರಣದ ತನಿಖೆ ನಡೆಸಬೇಕು.
-ಅರುಣ್ ಕುಮಾರ್ ಪುತ್ತಿಲ, ಹಿಂದೂ ಮುಖಂಡ.
ಪ್ರವೀಣ್ ನೆಟ್ಟಾರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಇವರ ಹತ್ಯೆಯನ್ನು ನಡೆಸಿದ ಮತಾಂಧ ಶಕ್ತಿಗಳನ್ನು ಮಟ್ಟಹಾಕಬೇಕು. ರಾಷ್ಟ್ರೀಯ ತನಿಖಾ ದಳದ ಮೂಲಕ ಪ್ರಕರಣದ ತನಿಖೆ ನಡೆಸಬೇಕು. ಹರ್ಷ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಸಮರ್ಪಕ ತನಿಖೆಯನ್ನು ಕೈಗೊಳ್ಳದ ಕಾರಣ ಈ ಘಟನೆ ಮರುಕಳಿಸಿದೆ.
-ಹರೀಶ್ ಪೂಂಜಾ, ಬೆಳ್ತಂಗಡಿ ಶಾಸಕ.