ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಜನೋತ್ಸವ ಸಮಾವೇಶ ರದ್ದು: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಗುರುವಾರ ‘ಜನೋತ್ಸವ’ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದೀಗ ಆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಜು.28): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಗುರುವಾರ ‘ಜನೋತ್ಸವ’ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದೀಗ ಆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೌದು! ಬಿಜೆಪಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಾಗಿದ್ದ ಬಿಜೆಪಿಯ ಜನೋತ್ಸವ ಹಾಗೂ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರದ್ದು ಪಡಿಸಿದ್ದಾರೆ. ಈ ಬಗ್ಗೆ ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಇನ್ನು ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ಹೊರವಲಯದ ರಘುನಾಥಪುರದಲ್ಲಿ ಈ ಸಮಾವೇಶ ನಡೆಯಬೇಕಿದ್ದು, ಸುಮಾರು ಎರಡು ಲಕ್ಷ ಜನರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. ಈ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿವಿಧ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದರು.
ಕ್ಷೇತ್ರ ತ್ಯಾಗ ಮಾಡಿ ರಾಜಕೀಯ ಭಾರ ಇಳಿಸಿಕೊಂಡ ಬಿಎಸ್‌ವೈಗೆ ಮತ್ತಷ್ಟು ರಿಲೀಫ್ ಕೊಟ್ಟ ಕೋರ್ಟ್
ಇದು ಜನರ ಉತ್ಸವ, ವ್ಯಕ್ತಿ ಉತ್ಸವವಲ್ಲ: ಬುಧವಾರ ಜನೋತ್ಸವ ಸಮಾವೇಶದ ಅಂತಿಮ ಹಂತದ ಪೂರ್ವ ಸಿದ್ಧತೆಯನ್ನು ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಹಲವು ಮುಖಂಡರು ಪರಿಶೀಲಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಸಚಿವ ಸುಧಾಕರ್, ಬಿಜೆಪಿ ಕಾರ್ಯಕರ್ತರು, ಸರ್ಕಾರದ ಸೌಲಭ್ಯ ಪಡೆದ ಫಲಾನುಭವಿಗಳು ಹಾಗೂ ಜನಸಾಮಾನ್ಯರ ಒತ್ತಾಸೆ ಮೇರೆಗೆ ಹಳೇ ಮೈಸೂರು ಭಾಗದ ದೊಡ್ಡಬಳ್ಳಾಪುರದ ಹೊರಭಾಗದಲ್ಲಿ ಈ ಸಮಾವೇಶ ಯೋಜಿಸಲಾಗಿದೆ. ಜನೋತ್ಸವ ಎಂದರೆ ಜನರ ಉತ್ಸವ. ಇದು ಯಾವ ವ್ಯಕ್ತಿಯ ಉತ್ಸವವಲ್ಲ. ವ್ಯಕ್ತಿಯ ವೈಭವೀಕರಿಸುವ ಉತ್ಸವವೂ ಅಲ್ಲ. ಜನಪರ ಕೆಲಸ ಮಾಡುತ್ತಿರುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಜನರ ಮಧ್ಯೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಇದು ಜನತಾ ಹಬ್ಬ’ ಎಂದು ಬಣ್ಣಿಸಿದರು.
1 ವರ್ಷದ ರಿಪೋರ್ಟ್ ಕಾರ್ಡ್: ‘ಕೆಲವರು ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಶಕ್ತಿ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವರಿಗೆ ಉತ್ತರ ಕೊಡುವ ಸಮಾವೇಶ ಇದಾಗಲಿದೆ. ಕಾಮನ್ ಮ್ಯಾನ್ ಚೀಫ್ ಮಿನಿಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಸವರಾಜ ಬೊಮ್ಮಾಯಿ ಅವರು ತಕ್ಷ ಬದ್ಧವಾದ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜನಪರ ಕಾಳಜಿ ಮತ್ತು ಬದ್ಧತೆ ಇರಿಸಿಕೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ. ಹೀಗಾಗಿ ಈ ಸಮಾವೇಶದಲ್ಲಿ ಜನರಿಗೆ ನಮ್ಮ ಸರ್ಕಾರದ ಒಂದು ವರ್ಷದ ರಿಪೋರ್ಟ್ ಕಾರ್ಡ್ ನೀಡಲಿದ್ದೇವೆ. ಚುನಾವಣಾ ಪ್ರಣಾಳಿಕೆ ಬಗ್ಗೆ ನಾವು ತೆಗೆದುಕೊಂಡ ನಿರ್ಧಾರಗಳನ್ನು ಹೇಳಲಿದ್ದೇವೆ’ ಎಂದು ಸುಧಾಕರ್ ಹೇಳಿದರು.
ಕರ್ನಾಟಕದ ಅಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ತನ್ನಿ: ಎಚ್.ಡಿ.ಕುಮಾರಸ್ವಾಮಿ
‘ದೇಶದಲ್ಲಿ 2014ರಿಂದ ಒಂದು ರಾಜ್ಯದ ನಂತರ ಮತ್ತೊಂದು ರಾಜ್ಯದ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ಜನರ ಆಶೀರ್ವಾದದಿಂದ ನೂರಕ್ಕೆ ನೂರರಷ್ಟುಈ ಜನೋತ್ಸವ ಸಮಾವೇಶದ ಮುಖಾಂತರ 2023ರ ರಾಜ್ಯ ಚುನಾವಣಾ ಫಲಿತಾಂಶದ ದಿಕ್ಸೂಚಿ ಆರಂಭವಾಗಲಿದೆ. ಎಲ್ಲಿ ನಮ್ಮ ಸಂಘಟನೆ ಇಲ್ಲ. ಶಕ್ತಿ ಕಡಿಮೆ ಎಂದು ಹೇಳುವ ಜನರಿಗೆ ಸಂದೇಶ ರವಾನೆಯಾಗಲಿದೆ’ ಎಂದು ಹೇಳಿದ್ದರು. ಈ ಸಮಾವೇಶದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನ ಮಧುಗಿರಿ, ಬೆಂಗಳೂರಿನ ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ ಕ್ಷೇತ್ರಗಳ ಸುಮಾರು 2 ಲಕ್ಷ ಜನರು ಭಾಗವಹಿಸಲಿದ್ದಾರೆ. ಸುಮಾರು 2500 ಬಸ್‌ಗಳಲ್ಲಿ ಜನ ಸಮಾವೇಶಕ್ಕೆ ಬರಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ವಿಶೇಷ ಸ್ವಾಗತ ಕೋರಲು ಬಿಜೆಪಿ ಮಹಿಳಾ ಮೋರ್ಚಾ ಸಿದ್ಧತೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.