ಮೈಸೂರು ದಸರಾದಲ್ಲಿ ವಜ್ರಮುಷ್ಠಿ ಕಾಳಗ ರದ್ದಾದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದು, ಮುಹೂರ್ತ ಮೀರಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ದಸರಾ ಪುಷ್ಪಾರ್ಚನೆ ವೇಳೆ ಶಿಷ್ಟಾಚಾರ ಪಾಲನೆಯಾಗಬೇಕು ಎಂದು ಸಂಸದ ಯದುವೀರ್ ಆಗ್ರಹಿಸಿದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮೈಸೂರು: ವಿಜಯದಶಮಿ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ ಬೆನ್ನಲ್ಲೇ, ದಸರಾದಲ್ಲಿ ಎದುರಾದ ಅಪಸ್ವರಗಳು, ವಜ್ರಮುಷ್ಠಿ ಕಾಳಗ ರದ್ದು ಹಾಗೂ ಕಾರ್ಯಕ್ರಮದ ಶಿಷ್ಟಾಚಾರಗಳ ಕುರಿತು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟದಲ್ಲಿ ಕಂಠೀರವ ನರಸರಾಜ ಒಡೆಯರ್ ರಥೋತ್ಸವವು ಭಕ್ತಿ-ಸಂಭ್ರಮಗಳಿಂದ ಜರುಗಿತು.
ಜಟ್ಟಿ ಕಾಳಗ ರದ್ದಿನಿಂದ ಯಾವುದೇ ಕೇಡು ಸಂಭವಿಸುವುದಿಲ್ಲ: ರಾಜಮಾತೆ
ಅರಮನೆಯಲ್ಲಿ ವಜ್ರಮುಷ್ಠಿ (ಜಟ್ಟಿ) ಕಾಳಗ ರದ್ದಾಗಿರುವ ಕುರಿತು ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆದ ಪ್ರಮೋದಾದೇವಿ ಒಡೆಯರ್, ಇದರಿಂದ ನಾಡಿಗ ಕೆಡಕು ಆಗುವುದಿಲ್ಲ. ಯಾರು ಈ ವಿಚಾರದಲ್ಲಿ ಆತಂಕ ಪಡಬೇಡಿ. ನಾವು ದೇವರನ್ನ ನಂಬಿದ್ದೇವೆ. ನಾವು ಜ್ಯೋತಿಷ್ಯವನ್ನ ನಂಬಿಲ್ಲ. ನಾವು ಜ್ಯೋತಿಷ್ಯ ನಂಬಿ ಪೂಜೆ ಮಾಡುವುದಿಲ್ಲ. ದೇವರನ್ನ ಮಾತ್ರ ನಂಬುತ್ತೇವೆ. ಏನೇನೊ ಅರ್ಥಗಳನ್ನ ಇದಕ್ಕೆ ಕಲ್ಪಿಸಬೇಡಿ. ಎಲ್ಲಿ ಏನೇನಾಯ್ತು ಎಂಬುದು ನನಗೆ ಗೊತ್ತಾಗಿದೆ. ಎಲ್ಲದರ ವರದಿಯನ್ನ ನಾನು ತರಿಸಿಕೊಳ್ಳುತ್ತಿದ್ದೇನೆ. ಈ ವಿಚಾರದ ಬಗ್ಗೆ ಒಂದರೆಡು ದಿನದಲ್ಲಿ ನಾನೇ ವಿವರಣೆ ಕೊಡುತ್ತೇನೆ ಎಂದರು.
ಕಾಳಗ ರದ್ದಾದ ಬಗ್ಗೆ ಮಾತನಾಡಿ, ಅರಮನೆಯ ಪ್ರತಿಯೊಂದು ಧಾರ್ಮಿಕ ವಿಧಿವಿಧಾನಗಳು ಆಯಾ ಪವಿತ್ರ ಮುಹೂರ್ತದಲ್ಲೇ ನಡೆಯಬೇಕು. ಮುಹೂರ್ತವನ್ನು ಮೀರಿ ನಾವು ಯಾವುದೇ ಆಚರಣೆ ಮಾಡುವುದಿಲ್ಲ. ನಮ್ಮ ಮನೆಯ ವಿಧಿವಿಧಾನಗಳು ಆಯಾ ಮೂಹರ್ತಕ್ಕೆ ನಡೆಯಬೇಕು. ಮೂಹರ್ತ ಮೀರಿ ನಾವು ನಡೆಸುವುದಿಲ್ಲ. ಹೀಗಾಗಿ ಜೆಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆ. ನಾನು ಈ ವಿಚಾರದಲ್ಲಿ ಯಾವ ಜ್ಯೋತಿಷ್ಯವನ್ನ ಕೇಳಿಲ್ಲ. ಎಲ್ಲ ದೇವರ ಮೇಲೆ ಭಾರ ಹಾಕಿದ್ದೇವೆ. ಹೀಗಾಗಿ ನಾನು ಆತಂಕಕ್ಕೆ ಒಳಗಾಗಿಲ್ಲ. ಹೀಗಾಗಿ ಸಮಯ ಮೀರಿದ ಕಾರಣಕ್ಕಾಗಿ ಕಾಳಗ ನಡೆಸದೆ ವಿಜಯಯಾತ್ರೆ ನಡೆಸಲಾಯಿತು. ಎಲ್ಲಿ ಏನೇನು ಲೋಪವಾಗಿದೆ ಎಂಬ ಮಾಹಿತಿ ಬಂದಿದೆಯಾದರೂ, ಒಂದೆರಡು ದಿನಗಳಲ್ಲಿ ಸಂಪೂರ್ಣ ವರದಿ ತರಿಸಿಕೊಂಡು ನಾನೇ ಅಧಿಕೃತವಾಗಿ ವಿವರಣೆ ನೀಡಲಿದ್ದೇನೆ ಎಂದರು.
ಇನ್ನು ಅಂಬಾರಿ ಆನೆ ಪ್ರಶಾಂತನ ಕುರಿತು ಹರ್ಷ ವ್ಯಕ್ತಪಡಿಸಿದ ಅವರು, ಈ ಬಾರಿ ಪ್ರಶಾಂತ ಅಂಬಾರಿ ಹೊರಬಲ್ಲನೇ, ಹೇಗೆ ಸಾಗುತ್ತಾನೋ ಎಂಬ ಸಣ್ಣ ಆತಂಕ ನನ್ನಲ್ಲಿತ್ತು. ಹಿಂದೆ ನನಗೆ ಈ ರೀತಿ ಯಾವ ಆತಂಕ ಇರಲಿಲ್ಲ. ಈ ಬಾರಿಯೇ ನನಗೆ ಅಷ್ಟು ಆತಂಕ ಇತ್ತು. ಆದರೆ ಎಲ್ಲ ಆತಂಕಗಳನ್ನು ಮೀರಿ ಪ್ರಶಾಂತ ಅತ್ಯಂತ ಗಂಭೀರವಾಗಿ, ಯಶಸ್ವಿಯಾಗಿ ಅಂಬಾರಿಯನ್ನು ಹೊತ್ತು ಸಾಗಿದ್ದಾನೆ. ಚಾಮುಂಡೇಶ್ವರಿ ತಾಯಿ ಎಲ್ಲರಿಗೂ ಶುಭ ಹಾರೈಸಿದ್ದಾಳೆ ಎಂದು ಸಂತಸ ಹಂಚಿಕೊಂಡರು.
ದಸರಾ ನಂದಿಧ್ವಜ ಹಾಗೂ ಪುಷ್ಪಾರ್ಚನೆಗೆ ಶಿಷ್ಟಾಚಾರ ಅಗತ್ಯ: ಯದುವೀರ್
ಇದೇ ವೇಳೆ ದಸರಾ ವೇದಿಕೆಗಳಲ್ಲಿ ಕಂಡುಬರುತ್ತಿರುವ ಅನಗತ್ಯ ಜನಸಂದಣಿಯ ಕುರಿತು ಮಾತನಾಡಿದ ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಒಡೆಯರ್, ಮೊದಲು ಸರ್ಕಾರ ದಸರಾದಲ್ಲಿ ಶಿಷ್ಟಾಚಾರ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಲಿ. ನಂದಿಧ್ವಜ ಪೂಜೆ ಹಾಗೂ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಎಷ್ಟು ಕಡಿಮೆ ಜನರಿದ್ದರೆ ಅಷ್ಟು ಒಳ್ಳೆಯದು. ಮುಖ್ಯಮಂತ್ರಿಗಳ ಜೊತೆಗೆ ಒಂದಿಬ್ಬರು ಪ್ರಮುಖರಿದ್ದರೆ ಸಾಕು. ಎಲ್ಲರೂ ಆ ಸೂಕ್ಷ್ಮ ಸ್ಥಳಕ್ಕೆ ಹೋಗುವ ಅಗತ್ಯವೇನಿದೆ? ಈ ಕುರಿತು ಸರ್ಕಾರ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ನೆರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿರುವುದನ್ನು ಸಮರ್ಥಿಸಿಕೊಂಡ ಅವರು, ಪಕ್ಕದ ರಾಜ್ಯದ ಸಿಎಂಗಳನ್ನು ಅತಿಥಿಗಳಾಗಿ ಕರೆದ ಮೇಲೆ ಪುಷ್ಪಾರ್ಚನೆಗೆ ಆಹ್ವಾನಿಸುವುದು ಸೌಜನ್ಯ. ಆದರೆ ಅವರೊಂದಿಗೆ ಇತರ ಅನಗತ್ಯ ವ್ಯಕ್ತಿಗಳು ಬಂದಿರುವುದಕ್ಕೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ನಾವೇನೇ ಮಾತನಾಡಿದರೂ ಅದನ್ನು ರಾಜಕೀಯವಾಗಿ ಬಿಂಬಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟದಲ್ಲಿ ವೈಭವದ ಚಾಮುಂಡೇಶ್ವರಿ ರಥೋತ್ಸವ
ಮೈಸೂರು ದಸರಾ ಜಂಬೂಸವಾರಿ ವೈಭವದಿಂದ ಮುಕ್ತಾಯಗೊಂಡ ಮರುದಿನ, ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳ ನಂತರ ದೇವಿಯ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ರಾಜವಂಶಸ್ಥ ಯದುವೀರ್ ಒಡೆಯರ್ ಅವರು ರಥದ ಹಗ್ಗವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಪೊಲೀಸ್ ವಾದ್ಯವೃಂದದ ಮಂಗಳವಾದ್ಯಗಳ ನಾದ ಹಾಗೂ ಕುಶಾಲತೋಪುಗಳ ಗೌರವ ವಂದನೆಯೊಂದಿಗೆ ರಥವು ಬೆಟ್ಟದ ಬೀದಿಗಳಲ್ಲಿ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಥಕ್ಕೆ ಹಣ್ಣು, ಜವನ ಅರ್ಪಿಸಿ, ಜಯಘೋಷ ಕೂಗಿ ದೇವಿಯ ಕೃಪೆಗೆ ಪಾತ್ರರಾದರು.







