ದುಗ್ಗಮ್ಮನ ಜಾತ್ರೆಗಷ್ಟೇ ಏಕೆ ಪ್ರಾಣಿ ಬಲಿ ತಡೆಯೋದು? : ಮುತಾಲಿಕ್
ಹಿಂದುಗಳ ಜಾತ್ರೆ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳಿಗಷ್ಟೇ ಕಡಿವಾಣ ಹಾಕುವುದಲ್ಲ, ಬಕ್ರೀದ್ ಸೇರಿದಂತೆ ಎಲ್ಲಾ ಧರ್ಮೀಯರ ಹಬ್ಬ-ಆಚರಣೆಗಳಲ್ಲೂ ಪ್ರಾಣಿ ಬಲಿ ತಡೆಯುವ ಕೆಲಸವಾಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.
ದಾವಣಗೆರೆ (ಮಾ.12): ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ವೇಳೆ ಪ್ರಾಣಿ ಬಲಿ ತಡೆಗೆ ಮುಂದಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕ್ರಮ ಸ್ವಾಗತಾರ್ಹ. ಆದರೆ, ಕೇವಲ ಹಿಂದುಗಳ ಜಾತ್ರೆ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳಿಗಷ್ಟೇ ಕಡಿವಾಣ ಹಾಕುವುದಲ್ಲ, ಬಕ್ರೀದ್ ಸೇರಿದಂತೆ ಎಲ್ಲಾ ಧರ್ಮೀಯರ ಹಬ್ಬ-ಆಚರಣೆಗಳಲ್ಲೂ ಪ್ರಾಣಿ ಬಲಿ ತಡೆಯುವ ಕೆಲಸವಾಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಗಾಂಬಿಕಾ ದೇವಿ ಜಾತ್ರೆ ವೇಳೆ ಇಡೀ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಪ್ರಾಣಿ ಬಲಿ ತಡೆಗೆ ಮುಂದಾಗಿದ್ದು ಸ್ವಾಗತಾರ್ಹ ಕ್ರಮ ಸರಿ. ಹಾಗೆಯೇ ಬಕ್ರೀದ್ ಹಬ್ಬದಲ್ಲೂ ಪ್ರಾಣಿ ಬಲಿ ನಡೆಯದಂತೆ ತಡೆಯುವ ಕೆಲಸವಾಗಲಿ.
ನಗರದಲ್ಲಿ ನೂರಾರು ಕಸಾಯಿಖಾನೆಗಳು ಅಕ್ರಮವಾಗಿ ನಡೆಯುತ್ತಿದ್ದು, ಮೊದಲು ಅವುಗಳನ್ನು ತೆರವುಗೊಳಿಸುವ ಕೆಲಸವಾಗಲಿ. ಗೋವುಗಳ ಕಳ್ಳತನ, ಗೋಹತ್ಯೆನಿರಂತರವಾಗಿ ಸಾಗಿದ್ದು, ಅದನ್ನು ಮೊದಲು ತಡೆಗಟ್ಟಲಿ. ಹಿಂದುಗಳಿಗೆ ಒಂದು ನೀತಿ, ಮತ್ತೊಂದು ಧರ್ಮಯರಿಗೆ ಇನ್ನೊಂದು ರೀತಿ ಎಂಬ ಧೋರಣೆ ಸರಿಯಲ್ಲ ಎಂದು ಮುತಾಲಿಕ್ ಅಭಿಪ್ರಾಯಿಸಿದರು.
ಕೋಣ ಬಲಿ ತಡೆಯಲು ದೇವಸ್ಥಾನದಲ್ಲಿ ಕಾವಲು ಕುಳಿತ ಡಿಸಿ, ಎಸ್ಪಿ..
ಹಿಂದು ಪರಂಪರೆ, ಸಂಸ್ಕೃತಿ ವಿಚಾರದಲ್ಲಿ ಆಡಳಿತ ಯಂತ್ರ, ಸರ್ಕಾರ ತಾರತಮ್ಯ ಮಾಡಬಾರದು. ಕಾನೂನು ರೀತಿ ಬಕ್ರೀದ್ ಹಬ್ಬದಲ್ಲೂ ಪ್ರಾಣಿ ಬಲಿ ನಡೆಯದಂತೆ ತಡೆಯುವ ಕೆಲಸ ಆಗಬೇಕು. ಇಲ್ಲವಾದರೆ ಜಿಲ್ಲಾ ಆಡಳಿತವೇ ಕೋಮು ಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಕಾನೂನು ಎರಡು ರೀತಿ ಇರುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು ಪಾಲನೆಯಾಗಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವವರೆಗೂ ಶ್ರೀರಾಮ ಸೇನೆ ಹೋರಾಟ ಮುಂದುವರಿಯಲಿದೆ ಎಂದು ಮುತಾಲಿಕ್ ಎಚ್ಚರಿಸಿದರು.