ಸಿಂದಗಿ(ಫೆ.21): ಸಿಎಎ, ಎನ್‌ಆರ್‌ಸಿ ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾತಂತ್ರ್ಯ ಪೂರ್ವದಲ್ಲೇ ಅಂದಿನ ಸರ್ಕಾರ ಒಪ್ಪಿಕೊಂಡಿದ್ದವು. ಇದೇ ಮಮತಾ ಬ್ಯಾನರ್ಜಿ, ನೆಹರೂ, ಇಂದಿರಾ ಗಾಂಧಿ ಅಂತ​ಹವರೂ ಈ ಕಾಯ್ಕೆಯನ್ನು ಸ್ವಾಗತಿಸಿದವರು. ಈಗೇಕೆ ಒಪ್ಪುತ್ತಿಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಪ್ರಶ್ನಿಸಿದ್ದಾರೆ.

ಅವರು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಜ್ಯೋತಿ ನಗರದ ಲಕ್ಷ್ಮೇ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡ ಹಿಂದೂ ರಾಷ್ಟ್ರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

ಈ ದೇಶದ ಲಕ್ಷಾಂತರ ಹಿಂದೂಗಳಿಗೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಪೌರತ್ವ ನೀಡದಿರು​ವು​ದ​ರಿಂದ ಅವರೆಲ್ಲರಿಗೆ ಭಾರತದಲ್ಲಿ ಪೌರತ್ವ ನೀಡುವುದು ಈ ಕಾಯ್ದೆ ಉದ್ದೇಶವಾಗಿದೆ. ಸಿಎಎಯಲ್ಲಿ ಮುಸ್ಲಿಮರನ್ನು ಸೇರಿಸಬೇಕೆನ್ನುವ ವಾದವಾಗಿದೆ. ಈಗಾಗಲೇ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರಗಳಿವೆ. ​ಭಾ​ರ​ತ​ದ​ಲ್ಲಿದ್ದ ಮುಸ್ಲಿಮರಿಗೆ ಯಾವತ್ತೂ ದೇಶ ಬಿಟ್ಟು ತೊಲಗಿ ಎಂದು ಹೇಳಿಲ್ಲ. ಅವರೆಲ್ಲ ಭಾರತೀಯ ಮುಸ್ಲಿಮರು ಎಂದು ಹೇಳಿಕೊಳ್ಳಲಿ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸನಾತನ ಸಂಸ್ಥೆಯ ಯಮನೇಶ ಭಜಂತ್ರಿ ಮಾತನಾಡಿ, ಹಿಂದೂ ಧರ್ಮದ ಮೇಲೆ ಅನೇಕ ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಿವೆ. ಧರ್ಮ ಪರಂಪರೆಗಳ ಭಗ್ನ ಮಾಡುವುದು, ಹಿಂದೂ ದೇವತೆಗಳ, ಸಂತರ ಅಪಮಾನ ಮಾಡುವುದು ಸೇರಿದಂತೆ ಅನೇಕ ಪ್ರಕರಣಗಳು ಅವ್ಯಾಹತವಾಗಿ ನಡೆಸಲಾಗುತ್ತಿದ್ದು ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಧರ್ಮದಲ್ಲಿ ಬಹುದೊಡ್ಡ ಶ್ರೇಷ್ಠತೆಯಿದೆ. ಆದರೆ ಹಿಂದೂಗಳಲ್ಲಿ ಶಿಕ್ಷಣದ ಅಭಾವವಿದೆ. ಅದಕ್ಕೆ ಮೌಢ್ಯ ಆಚರಣೆಗಳಿಗೆ ಒಳಗಾಗಿ ಮತಾಂತರರಾಗುತ್ತಿದ್ದಾರೆ. ಅದನ್ನು ತಡೆಗಟ್ಟಬೇಕಾದರೆ ಹಿಂದೂಗಳಲ್ಲಿ ರಾಷ್ಟ್ರಜಾಗೃತಿ ಆಗುವುದು ಅವಶ್ಯವಿದ್ದು, ಪ್ರತಿಯೊಬ್ಬ ಭಾರತೀಯರು ಜಾಗೃತಿಗಾಗಿ ಪಣ ತೊಡಿ. ಯುವಕರು ಪರಿವರ್ತನೆಯಾಗಿ ಹಿಂದೂಗಳು ಒಂದಾಗಬೇಕಾಗಿದೆ ಎಂದರು.

ಜನಜಾಗೃತಿ ಸಮಿತಿ ಜಿಲ್ಲಾ ಸಂಚಾಲಕ ವೆಂಕಟರಮಣ ನಾಯ್ಕ ಮಾತನಾಡಿ, ಹಿಂದೂ ಸಂಘಟನೆಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ನಿಷೇಧಿಸುವ ಷಡ್ಯಂತ್ರಗಳು, ಲವ್‌ ಜಿಹಾದ್‌ ಮೂಲಕ ಹಿಂದೂ ಯುವತಿಯರ ಮತಾಂತರ, ಹಿಂದೂ ದೇವಸ್ಥಾನಗಳ ಸರ್ಕಾರಿ​ಕ​ರಣ, ಹಿಂದೂ ಕಾರ್ಯಕರ್ತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದು ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿವೆ. ಅದಕ್ಕಾಗಿ ಹಿಂದೂಗಳನ್ನು ಜಾಗೃತಗೊಳಿಸಿ ಧರ್ಮದ ಆಧಾರದ ಮೇಲೆ ಹಿಂದೂ ಸಮಾಜ ಸಂಘಟಿತಗೊಳಿಸಿ ಭಾರತವನ್ನು 2023ಕ್ಕೆ ಹಿಂದೂ ರಾಷ್ಟ್ರವೆಂದು ಘೋಷಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಸನಾತನ ಸಂಸ್ಥೆಯ ಬಾಗಲಕೋಟೆ ಸಂಚಾಲಕಿ ಸುಜಾತಾ ಹುಳಿಪಲ್ಲೆ, ಪ್ರತೀಕ ಪೀರಾಪುರ ಇ​ದ್ದರು. ನೀಲಕಂಠ ಬಡಚಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.