ಸೇಡಂ(ಮಾ.01): ಹಿಂದು ರಾಷ್ಟ್ರವನ್ನು ಒಡೆದಾಳಲು ಅನೇಕ ದೇಶದ್ರೋಹಿ ಶಕ್ತಿಗಳು ಷಡ್ಯಂತ್ರ ರೂಪಿಸುತ್ತಿದ್ದರಿಂದ ಹಿಂದುಪರ ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸ ಜನ ಮಾಡಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಸೇಡಂ ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಸೇನೆ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಿಂದು ಸಂಘಟನೆಗಳ ಮೇಲೆ ನೂರಾರು ಪ್ರಕರಣ ದಾಖಲಿಸುವ ಮೂಲಕ ನಮ್ಮ ಶಕ್ತಿ ಕುಗ್ಗಿಸುವ ಯತ್ನ ನಡೆದಿದೆ. ಭಾರತದ ದಲಿತರು ಜಾಗೃತರಾಗುವ ಅವಶ್ಯಕತೆ ಇದೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂಬೇಡ್ಕರ್‌ಗೆ ಭಾರತ ರತ್ನ ನೀಡಿದ್ದರು. ಆರ್‌ಎಸ್‌ಎಸ್ ದಲಿತ ವಿರೋಧಿಯಲ್ಲ. ಇಂದಿನ ರಾಷ್ಟ್ರಪತಿ ಸಹ ದಲಿತರಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

108 ಪ್ರಕರಣ ದಾಖಲಿಸಿ ನನ್ನ ಮತ್ತು ಆಂದೋಲಾ ಶ್ರೀಗಳ ಶಕ್ತಿ ಕುಗ್ಗಿಸುವ ಯತ್ನ ನಡೆದಿದೆ. ನಮ್ಮ ಮುಂದಿನ ಪೀಳಿಗೆ ಹಿಂದುವಾಗಿಯೇ ಉಳಿಯಬೇಕಾದರೆ ಹಿಂದುಪರ ಸಂಘಟನೆಗಳ ಕೈ ಬಲಪಡಿಸಬೇಕು ಎಂದು ಹೇಳಿದರು. 

ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಬಿಜೆಪಿ ಹಿಂದುಪರವಾಗಿದ್ದರೆ ಮಾತ್ರ ನಾವು ಬೆಂಬಲಿಸುತ್ತೇವೆ. ಹಿಂದುತ್ವದ ಅಪಚಾರಕ್ಕೆ ಬರುವ ಯಾವುದೇ ರಾಜಕೀಯ ಪಕ್ಷಕ್ಕೆ ನಮ್ಮ ಬೆಂಬಲವಿಲ್ಲ. ಪ್ರಧಾನಿ ಮೋದಿ ಬಂದಾಗಿನಿಂದ ದೇಶ ಪ್ರೇಮಿಗಳಿಗೆ ಶುಕ್ರದೆಸೆ ಹಾಗೂ ದೇಶದ್ರೋಹಿಗಳಿಗೆ ಶನಿಕಾಟ ಶುರುವಾಗಿದೆ. ಜೆಎನ್‌ಯು ವಿಷ ಜಂತುಗಳನ್ನು ತಯಾರಿಸುತ್ತಿದೆ. ಸದಾಕಾಲ ದೇಶದ್ರೋಹಿಗಳನ್ನು ಬೆಂಬ ಲಿಸುವ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ ಮತ್ತು ಪ್ರಿಯಾಂಕ್ ಖರ್ಗೆ ತಮ್ಮನ್ನು ತಾವು ಪಾಕಿಸ್ತಾನಕ್ಕೆ ಮಾರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. 

ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್ (ಜಿಕೆ) ಮಾತನಾಡಿದರು. ರಾಜಶೇಖರ ನಿಲಂಗಿ, ಚಂದ್ರಶೇಖರ ಸ್ವಾಮೀಜಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ತಾಲೂಕು ಅಧ್ಯಕ್ಷ ಮೌನೇಶ ಬಡಿಗೇರ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಿಲಾ, ಜೇವರ್ಗಿ ಅಧ್ಯಕ್ಷ ಈಶ್ವರ ಹಿಪ್ಪರಗಿ, ವೇಣುಗೋಪಾಲ ಬಜಾಜ್, ಡಾ. ರಮೇಶ್ ಐನಾಪುರ, ವೀರಶೆಟ್ಟಿ ವೇದಿಕೆಯಲ್ಲಿದ್ದರು.

ಶೀಘ್ರವೇ ಮೋದಿ ಸರ್ಕಾರದಿಂದ ಗೋಹತ್ಯೆ ನಿಷೇಧ

ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಗೋಹತ್ಯೆ ಮತ್ತು ಸಾಗಾಟಕ್ಕೆ ಬ್ರೇಕ್ ಬೀಳಲಿದ್ದು, ಕಠಿಣ ಕಾನೂನು ಜಾರಿಯಾಗಲಿದೆ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಎ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧವೇ ಇಲ್ಲ. ಬೆಂಗಳೂರಿನಲ್ಲಿ ಅಂಬೇಡ್ಕರ್ ಮತ್ತು ಭಗತಸಿಂಗ್ ಭಾವಚಿತ್ರದ ಎದುರು ದೇಶದ್ರೋಹಿ ಕೂಗು ಕೇಳಿ ಬರುತ್ತಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ನಿಂತಿದೆ. ದೆಹಲಿ ಗಲಭೆ ಹಿಂದೆ ಇರುವ ಶಕ್ತಿ ಮಟ್ಟ ಹಾಕುವ ಬದಲು ಬಿಜೆಪಿಗರ ತಲೆ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ ಎಂದರು. 

ದೆಹಲಿ ಶಾಹಿನ್‌ಬಾಗ್ ಪ್ರತಿಭಟನೆಯಿಂದ ವಿಶ್ವ ಮಟ್ಟದಲ್ಲಿ ಗಮನಸೆಳೆಯುವ ಪ್ರಯತ್ನ ನಡೆದಿದೆ. ಬಿಜೆಪಿಗರ ಮೇಲೆ ಪ್ರಕರಣ ದಾಖಲಿಸುವ ದುರುದ್ದೇಶದ ಹಿಂದೆ ನ್ಯಾಯಮೂರ್ತಿಗಳ ವರ್ಗಾವಣೆಯಾಗಿದ್ದರೆ ಅದು ತಪ್ಪು ಎಂದು ಹೇಳಿದ ಅವರು, ಬ್ರಿಟಿಷರ ಕಾಲದಲ್ಲಿ ಭಾರತ ಮಾತೆಗೆ ಜೈ ಎಂದವರಿಗೆ ನೀಡುವ ಶಿಕ್ಷೆಯನ್ನೇ ಇಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ವರಿಗೆ ನೀಡಬೇಕು. ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದರು.