ಬಿಜೆಪಿ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದೆ: ಕೇಂದ್ರದ ವಿರುದ್ಧ ಮುತಾಲಿಕ್ ಕಿಡಿ
ಪಾಲಿಸ್ಟರ್ ರಾಷ್ಟ್ರಧ್ವಜ ತಯಾರಿಕೆ ಕೂಡಲೇ ನಿಲ್ಲಿಸಿ, ಹರಿದ, ಅಳತೆಯೇ ಇಲ್ಲದ ರಾಷ್ಟ್ರಧ್ವಜಗಳು ಮಾರುಕಟ್ಟೆಗೆ ರಾಷ್ಟ್ರದ ಗೌರವ ಕಳೆಯುವ ಕೆಲಸ ಇದು: ಮುತಾಲಿಕ್
ಧಾರವಾಡ(ಆ.05): ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಕಾರಣ ದೇಶದ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂಬುದು ಸ್ವಾಗತಾರ್ಹ. ಆದರೆ, ಖಾದಿ ಬಟ್ಟೆಬಿಟ್ಟು ಪಾಲಿಸ್ಟರ್ ಬಟ್ಟೆಬಳಕೆ ಮಾಡುವುದಕ್ಕೆ ಅನುಮತಿ ನೀಡಿದ್ದು ತಪ್ಪು. ಪಾಲಿಸ್ಟರ್ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಕೆಯನ್ನು ಕೂಡಲೇ ನಿಲ್ಲಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಭಾರತ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೆ ಪಾಲಿಸ್ಟರ್ ಧ್ವಜ ಹಾರಿಸಲು ಅನುಮತಿ ನೀಡಿರುವುದು ಸರಿಯಲ್ಲ.ಇದರಿಂದ ರಾಷ್ಟ್ರ ಧ್ವಜದ ಘನತೆಗೆ ಧಕ್ಕೆ ಬರಲಿದೆ. ಈ ಧ್ವಜ ಹಾರಿಸುವುದು ಅಪರಾಧ. ರಾಷ್ಟ್ರಧ್ವಜ ತಯಾರಿಸುವುದಕ್ಕೆ ಖಾದಿ ಬಟ್ಟೆಯೇ ಸರಿ. ಅದಕ್ಕೊಂದು ಗೌರವ ಇದೆ. ಆದರೆ, ಕೇಂದ್ರ ಸರ್ಕಾರ ಧ್ವಜ ನಿಯಮದಲ್ಲಿ ತಿದ್ದುಪಡಿ ತಂದು ರಾಷ್ಟ್ರದ ಗೌರವ ಕಳೆಯುವ ಕೆಲಸ ಮಾಡಿದೆ. ಯಾವುದ್ಯಾವುದೇ ಬಟ್ಟೆಯಿಂದ ಧ್ವಜ ತಯಾರಿಸಲಾಗುತ್ತಿದ್ದು ಹರಿದ ಹಾಗೂ ಅಳತೆಯೇ ಇಲ್ಲದ ಧ್ವಜಗಳು ಮಾರುಕಟ್ಟೆಗೆ ಬರುತ್ತಿವೆ.ಅಶೋಕ ಚಕ್ರ ಮೊಟ್ಟೆಯಾಕಾರದಲ್ಲಿದೆ. ಇದೇ ಬಿಜೆಪಿಯ ದೇಶಭಕ್ತಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಗುರುವಾರ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣೇಶ ಉತ್ಸವಕ್ಕೆ ಸರ್ಕಾರ ಮುಕ್ತ ಅವಕಾಶ ನೀಡಲಿ ಮುತಾಲಿಕ್ ಆಗ್ರಹ
ಬಿಜೆಪಿ ಮುಖಂಡರು ಈ ಬಗ್ಗೆ ಗಮನಿಸಬೇಕು. ನಿಮಗೇನಾದರೂ ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ ಮುತಾಲಿಕ, ಇದು ಬಿಜೆಪಿ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಮಾಡುತ್ತಿರುವ ಅವಮಾನ. ಧ್ವಜ ನಿರ್ಮಾಣಕ್ಕೆ ತನ್ನದಾದ ಅಳತೆ, ಮಾನದಂಡ ಉಂಟು. ಆದರೆ, ಪಾಲಿಸ್ಟರ್ ಧ್ವಜ ತಯಾರಿಯಲ್ಲಿ ಮಾನದಂಡ ಗಾಳಿಗೆ ತೂರಿದೆ. ಅಲ್ಲದೇ, ರಾಷ್ಟ್ರಧ್ವಜ ದೇಶದ ಸ್ವಾಭಿಮಾನದ ಸಂಕೇತ. ಇದನ್ನು ಚೀನಾದಿಂದ ಆಮದಿಗೆ ಮುಂದಾದ ಸರ್ಕಾರದ ನಿರ್ಧಾರ ನಾಚಿಕೆಗೇಡು ಎಂದರು.
ದೇಶದ ರಾಷ್ಟ್ರಧ್ವಜ ನಿರ್ಮಾಣ ಮತ್ತೊಂದು ದೇಶಕ್ಕೆ ವಹಿಸುವುದು ದುರಂತ. ದೇಶದ ಬಿಜೆಪಿ ಸರ್ಕಾರ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲು ಹೊರಟಿದೆ. ಅಲ್ಲದೇ, ಪಾಲಿಸ್ಟರ್ ಧ್ವಜ ನಿರ್ಮಾಣದಿಂದ ಖಾದಿ ಧ್ವಜ ತಯಾರಿಸುವ ಲಕ್ಷಾಂತರ ಜನರ ಬದುಕು ಸಹ ಬೀದಿಗೆ ಬಂದಿದೆ ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಶಂಕರಪ್ಪ ಪಟ್ಟಣಶೆಟ್ಟಿ, ಮುಂಜುನಾಥ ಹಿರೇಮಠ ಇದ್ದರು.