ಎಲಿವೇಟೆಡ್ ರಸ್ತೆ ಕೈ ಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಬೆಂಗಳೂರಿನಲ್ಲಿ ಎಲಿವೇಟೆಡ್ ಕಾರಿಡಾರ್ ಬಗ್ಗೆ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಬೆಂಗಳೂರು [ಜೂ.17] : ರಾಜ್ಯ ಸರ್ಕಾರ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಡದಿದ್ದರೆ ನೂರಾರು ಸಂಘಟನೆಗಳ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಂಗಕರ್ಮಿ ಪ್ರಕಾಶ್ ಬೆಳವಾಡಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಪ್ರಸ್ತಾಪಿಸಿದ್ದ 6.7 ಕಿ.ಮೀ. ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ತ್ರೀವ ವಿರೋಧ ಉಂಟಾಗಿದ್ದರಿಂದ ಹೈಕೋರ್ಟ್ ಈ ಯೋಜನೆ ತಡೆಹಿಡಿದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇಂದಿನ ಸಮ್ಮಿಶ್ರ ಸರ್ಕಾರ 25,500 ಕೋಟಿ ವೆಚ್ಚದಲ್ಲಿ 102 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ಮುಂದಾಗಿರುವುದು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಸಮ್ಮಿಶ್ರ ಸರ್ಕಾರ ಈ ಯೋಜನೆಯನ್ನು ಪ್ರಮೋಟ್ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಈ ಯೋಜನೆ ಕೈ ಬಿಡದಿದ್ದರೆ ನೂರಾರು ಸಂಘಟನೆಗಳೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು ಟೆಂಡರ್ ರದ್ದುಪಡಿಸಬೇಕೆಂದು ಮಾ.16 ರಂದು ಪ್ರತಿಭಟನೆ ನಡೆಸಿವೆ. ಅದಕ್ಕೆ ವ್ಯಾಪಕ ಸಾರ್ವಜನಿಕ ಬೆಂಬಲವೂ ದೊರಕಿತ್ತು. ಇದಕ್ಕೆ ಸ್ಪಂದಿಸಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂಘಟನೆಗಳ ಪ್ರತಿನಿಧಿಗಳು ಹಾಗೂ ತಜ್ಞರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಎಲಿವೇಟೆಡ್ ರಸ್ತೆಗಳ ನಿರ್ಮಾಣ ಕುರಿತಂತೆ ಸಾಧಕ- ಬಾಧಕಗಳ ವಿವರಗಳನ್ನು ಪಡೆದಿದ್ದರು. ಆದರೆ, ಈವರೆಗೆ ಸಿಎಂ ಕುಮಾರಸ್ವಾಮಿ ಅವರು ಈ ಯೋಜನೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಗರಿಕ ಸಂಘಟನೆಗಳು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಮುಂದೆ ಈ ಯೋಜನೆಗೆ ಅಕ್ರಮವಾಗಿ ನೀಡಿರುವ ಎನ್ವಿರಾನ್ಮೆಂಟಲ್ ಕ್ಲಿಯರೆನ್ಸ್ ರದ್ದುಪಡಿಸಬೇಕೆಂದು ಅರ್ಜಿ ಸಲ್ಲಿಸಿವೆ. ಇನ್ನೊಂದೆಡೆ ಸ್ವಯಂಸೇವಕರು ನಡೆಸಿದ ಸಮೀಕ್ಷೆಯಲ್ಲಿ ಶೇ.90ರಷ್ಟುನಾಗರಿಕರಿಗೆ ಈ ಯೋಜನೆಯ ಅರಿವಿಲ್ಲ. ಹಾಗಿದ್ದಾಗ ಯಾರ ಪರವಾಗಿ, ಯಾರ ಹಿತಕ್ಕಾಗಿ ಈ ಯೋಜನೆ? ಜನರಿಗೆ ಬೇಡವಾದ ದುಬಾರಿ ವೆಚ್ಚದ ಯೋಜನೆಯನ್ನು ಯಾರ ಅಭಿವೃದ್ಧಿಗಾಗಿ ಮಾಡಲು ಹೊರಟಿದೆ ಎಂದು ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಕೊಟ್ಟಮಾತಿಗೆ ತಪ್ಪಿ ನಡೆಯುತ್ತಿರುವಂತೆ ಕಾಣುತ್ತಿದೆ. ಈಗ ನಮ್ಮ ಪ್ರತಿಭಟನೆಯನ್ನು ಅನಿವಾರ್ಯವಾಗಿ ತೀವ್ರಗೊಳಿಸಬೇಕಾಗಿದೆ. ಎಲಿವೇಟೆಡ್ ರಸ್ತೆಗಳ ಬಗ್ಗೆ ನಮ್ಮ ನಾಗರಿಕ ಸಂಘಟನೆಗಳಲ್ಲಿ ಈಗಲೂ ಅನುಮಾನಗಳಿವೆ. ಸಿಎಂ ಸಭೆಯನ್ನು ಕರೆದು ಮುಂದಿನ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಈ ಯೋಜನೆಯನ್ನು ತಡೆಯಬೇಕು ಎಂದು ತಿಳಿಸಿದರು.