ಬ್ಯಾಡಗಿ(ಏ.22): ಕೋವಿಡ್‌ನ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಇಂದಿಗೂ ಸಜ್ಜಾಗಿಲ್ಲ. ರಾತ್ರಿ ಕರ್ಫ್ಯೂ, ಲಾಕ್‌ಡೌನ್‌, ವೀಕೆಂಡ್‌ ಕರ್ಫ್ಯೂ ಇನ್ನಿತರ ಪರಿಸ್ಥಿತಿ ಲಾಭಗಳನ್ನು ಪಡೆದುಕೊಳ್ಳುವ ಹುನ್ನಾರ ನಡೆಸಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿರುವುದೇ ಇದಕ್ಕೆ ಪ್ರಮುಖ ಸಾಕ್ಷಿ ಎಂದು ಕಾಂಗ್ರೆಸ್‌ ಮುಖಂಡ, ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ ಆರೋಪಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ ಕಳೆದೆರಡು ವರ್ಷಗಳಿಂದ ಸಾರ್ವಜನಿಕ ಜೀವನಕ್ಕೆ ಮರ್ಮಾಘಾತ ನೀಡಿದೆ. ರೈತರು, ಕೂಲಿ ಕಾರ್ಮಿಕರು ಬದುಕು ನಿರ್ವಹಣೆ ಕಷ್ಟವಾಗಿದೆ. ಹೀಗಾದ್ದಾಗ್ಯೂ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳು ಎದ್ದು ಕಾಣುತ್ತಿವೆ ಎಂದು ಆರೋಪಿಸಿದರು.

ಕೆಎಂಸಿಯೇ ಗತಿ:

ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಳೆದ ವರ್ಷ 50 ಹಾಸಿಗೆಗಳನ್ನು ಕೋವಿಡ್‌ ಮೀಸಲಿಟ್ಟಿತ್ತು. ಆದರೆ ಪ್ರಸಕ್ತ ವರ್ಷ ಕೇವಲ 20 ಹಾಸಿಗೆ ಮೀಸಲಿಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹುಬ್ಬಳ್ಳಿಯ ಕೆಎಂಸಿ ಇನ್ನಿತರ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತಿದೆ. ದೂರದಲ್ಲಿರುವ ಆಸ್ಪತ್ರೆಗಳಿಗೆ ಹೋಗಲು ಬಡವರಿಂದ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕನಿಷ್ಠ 20 ಹಾಸಿಗೆಗಳಿಗಾದರೂ ವೆಂಟಿಲೇಟರ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.

ಕೊರೋನಾ ಅಟ್ಟಹಾಸ: ಸ್ಮಶಾನದ ಮುಂದೆ ಸಾಲು ಸಾಲು ಆ್ಯಂಬುಲೆನ್ಸ್‌ಗಳು

ವೈದ್ಯರ ಕೊರತೆ:

ಕಳೆದ 5 ವರ್ಷಗಳಿಂದ ತಜ್ಞ ವೈದ್ಯರು ಸೇರಿದಂತೆ ಜನರಲ್‌ ಫಿಸಿಶಿಯನ್‌ ಡಾಕ್ಟರ್‌ಗಳಿಲ್ಲದೇ ಸ್ಥಳೀಯ ಆಸ್ಪತ್ರೆ ವೈದ್ಯರ ಕೊರತೆ ಎದುರಿಸುತ್ತಿದೆ. ರಕ್ತದೊತ್ತಡ(ಬಿಪಿ) ಹಾಗೂ ಮಧುಮೇಹ(ಶುಗರ್‌) ಪರೀಕ್ಷಿಸಲು ವೈದ್ಯರಿಲ್ಲ. ಮಹಿಳಾ ವೈದ್ಯರಿಲ್ಲದೇ ಗರ್ಭಿಣಿಯರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳುವಂತಿಲ್ಲ ಎಂದರು.

ಜಿಲ್ಲಾಡಳಿತ ನಿಷ್ಕ್ರೀಯ:

ಆಕ್ಸಿಜನ್‌, ಪ್ರತ್ಯೇಕ ಬೆಡ್‌ ಸೇರಿದಂತೆ ಕ್ವಾರಂಟೈನ್‌ ಕೇಂದ್ರಗಳನ್ನು ಇಂದಿಗೂ ಆರಂಭಿಸಿಲ್ಲ. ಕೆಲ ರೋಗಿಗಳಿಗೆ ಹೋಮ್‌ ಕ್ವಾರಂಟೈನಲ್ಲಿ ಇರುವಂತೆ ತಿಳಿಸಿ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ಅಥವಾ ಜಿಲ್ಲಾಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ ಮುಂಜಾಗ್ರತಾ ಕ್ರಮ ವಹಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ರಮೇಶ ಮೋಟೆಬೆನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.