ಹಾಸನ (ನ.12) : ಕೇಂದ್ರ ಪುರಾತತ್ವ ಇಲಾಖೆ ಅಧಿ​ಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳೇಬೀಡಿನ ಐತಿಹಾಸಿಕ ಹೊಯ್ಸಳೇಶ್ವರ ದೇಗುಲವು ಹತ್ತು ದಿನಗಳಿಂದ ಕಗ್ಗತ್ತಿನಲ್ಲಿ ಇರುವಂತಾಗಿದೆ. 

ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಕಾರಣ ಸೆಸ್ಕ ಸಿಬ್ಬಂದಿ ಸಂಪರ್ಕ ಕಡಿತಗೊಳಿಸಿದ್ದು 6 ತಿಂಗಳ ಬಾಕಿ 45,000 ಅನ್ನು ಪುರಾತತ್ವ ವಿಭಾಗ ಪಾವತಿಸಬೇಕಿದೆ. 

ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಭಕ್ತರು ಅ​ಧಿಕಾರಿಗಳ ಉದಾಸೀನ ಮನೋಭಾವ ತಿಳಿದು ಬೇಸರ ವ್ಯಕ್ತಪಡಿಸುತ್ತಿದ್ದು, ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. 

ಮೂರು ತಿಂಗಳ ಹಿಂದೆ ಇದೇ ಕಾರಣಕ್ಕೆ ದೇಗುಲದ ವಿದ್ಯುತ್‌ ಸಂಪರ್ಕವನ್ನು ಸೆಸ್ಕ ಸಿಬ್ಬಂದಿ ಕಡಿತಗೊಳಿಸಿದ್ದರು. ಬಾಕಿ ಪಾವತಿಸುವುದಾಗಿ ಹೇಳಿದ್ದ ಪುರಾತತ್ವ ವಿಭಾಗದ ಅ​ಧಿಕಾರಿಗಳ ಭರವಸೆ ಮೇರೆಗೆ ಹಾಗೂ ಅರ್ಚಕರ ಮನವಿ ಆಲಿಸಿ ಪುನಃ ಸಂಪರ್ಕ ಕಲ್ಪಿಸಿದ್ದರು. ಆದರೆ, ಅಂದಿನಿಂದಲೂ ಬಿಲ್‌ ಬಾಕಿ ಇದ್ದು, ಈಗ ಮೊತ್ತವೂ ಹೆಚ್ಚಾಗಿರುವ ಕಾರಣ ನಿಯಮಾನುಸಾರ ಸಂಪರ್ಕ ಕಡಿತಗೊಳಿಸಲಾಗಿದೆ.