ಬೆಳಗಾವಿ: ರಸ್ತೆಯಲ್ಲಿ ಗುಂಡಿಯೋ? ಗುಂಡಿಯಲ್ಲಿ ರಸ್ತೆಯೋ?, ವಾಹನ ಸವಾರರ ಆಕ್ರೋಶ
ಗೋಟೂರದಿಂದ ಕಮತನೂರ ಗ್ರಾಮದವರೆಗಿನ ರಸ್ತೆಯಲ್ಲಿ ಗುಂಡಿಯ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ. ರಸ್ತೆ ನಿರ್ವಹಣೆ ಮಾಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕುರಿತು ಜಾಣ ಮೌನವಹಿಸಿದೆ.
ಆನಂದ ಭಮನ್ನವರ
ಸಂಕೇಶ್ವರ(ಆ.03): ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಕೇಂದ್ರ ಸಚಿವರೇ ಬಂದು ಭೂಮಿಪೂಜೆ ನೆರವೇರಿಸಿ 3 ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಆರಂಭವಾಗದೇ ರಸ್ತೆಯಲ್ಲಿ ಗುಂಡಿಯೋ? ಗುಂಡಿಯಲ್ಲಿ ರಸ್ತೆಯೋ ಎಂಬ ಅನುಮಾನ ವಾಹನ ಸಂಚಾರರನ್ನು ಕಾಡುತ್ತಿದೆ.
ಕಳೆದ 4 ವರ್ಷಗಳ ಹಿಂದೆ ಈ ರಸ್ತೆಯನ್ನು ಗೋಟೂರ-ವಿಜಯಪುರ ರಸ್ತೆಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ 3 ವರ್ಷಗಳ ಹಿಂದೆ ಕಾಗವಾಡ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ಇಲ್ಲಿಯವರೆಗೆ ಈ ರಸ್ತೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಗೋಟೂರದಿಂದ ಕಮತನೂರ ಗ್ರಾಮದವರೆಗಿನ ರಸ್ತೆಯಲ್ಲಿ ಗುಂಡಿಯ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ. ರಸ್ತೆ ನಿರ್ವಹಣೆ ಮಾಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕುರಿತು ಜಾಣ ಮೌನವಹಿಸಿದೆ.
ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು ರಾಜ್ಯದಲ್ಲಿ ಇದೇ ಮೊದಲು: ಬಿಜೆಪಿ ಇತಿಹಾಸ ಬರೆದಿದೆ: ಸವದಿ ಟಾಂಗ್
ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಕೈಗನ್ನಡಿ:
ಕಳೆದೊಂದು ವರ್ಷದ ಹಿಂದೆಯೇ ಈ ರಸ್ತೆ ಸುಧಾರಣೆಗಾಗಿ ಡಾಂಬರೀಕರಣ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳಪೆ ಕಾಮಗಾರಿಗೆ ಸ್ಪಷ್ಟನಿದರ್ಶನವಾಗಿದೆ. ಕೇವಲ ಹೆಸರಿಗೆ ಮಾತ್ರ ಇದು ರಾಷ್ಟ್ರೀಯ ಹೆದ್ದಾರಿ ಎಂಬಂತಾಗಿದೆ ಎಂದು ಈ ಭಾಗದ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೇಲ್ದರ್ಜೆಗೆರಿಸಿರುವ ಈ ರಸ್ತೆಯ ನಿರ್ವಹಣೆ ಮಾಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ರಸ್ತೆಯಲ್ಲಿ ಅಪಾರ ಪ್ರಮಾಣದ ತಗ್ಗು-ಗುಂಡಿ ಬಾಯಿ ತೆರೆದುಕೊಂಡಿದ್ದರು, ಕನಿಷ್ಠ ಗುಂಡಿ ಮುಚ್ಚುವ ಕಾರ್ಯಕ್ಕೂ ಪ್ರಾಧಿಕಾರ ಮುಂದಾಗಿಲ್ಲ.
ಈ ರಸ್ತೆ ನಿರ್ಮಾಣದ ಬಗ್ಗೆ ಜಿಲ್ಲೆಯ ಅದರಲ್ಲೂ ಚಿಕ್ಕೋಡಿ ಭಾಗದ ಜನಪ್ರತಿನಿಧಿಗಳು ಹಲವು ಬಾರಿ ಕೇಂದ್ರದ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಜಿಲ್ಲೆಯ ಜನಪ್ರತಿನಿಧಿಗಳ ಮನವಿಗೆ ಸ್ಪಂದನೆ ನೀಡಿಲ್ಲ.
ವಿಜಯಪುರ-ಮುರುಗುಂಡಿಗೆ ಸಂಪರ್ಕ ಕಲ್ಪಿಸುವ 80 ಕಿಮೀ ಕಾಮಗಾರಿ: ಆರಂಭಿಕ 2 ಹಂತಗಳಿಗೆ 766 ಕೋಟಿ ಬಿಡುಗಡೆ
ಅಂತರ ಜಿಲ್ಲಾ ರಸ್ತೆ ಸಂಪರ್ಕ ಹೆಚ್ಚಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಂಕೇಶ್ವರ-ವಿಜಯಪುರ ರಾಜ್ಯ ಹೆದ್ದಾರಿಯನ್ನು 4 ವಿವಿಧ ಹಂತಗಳಲ್ಲಿ 4 ಪಥಗಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ವಿಜಯಪುರದಿಂದ ಮುರುಗುಂಡಿಗೆ ಸಂಪರ್ಕ ಕಲ್ಪಿಸುವ 80 ಕಿಮೀ ಉದ್ದದ ಕಾಮಗಾರಿಯ ಆರಂಭಿಕ 2 ಹಂತಗಳಿಗೆ ಅಂದಾಜು .766 ಕೋಟಿಗಳನ್ನು ಸಚಿವಾಲಯದಿಂದ ಬಿಡುಗಡೆ ಮಾಡಲಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ 40 ಕಿಮೀ ಹಾಗೂ ವಿಜಯಪುರ ಜಿಲ್ಲೆಯ 40 ಕಿಮೀ ರಸ್ತೆ ಬರುತ್ತಿದ್ದು, ಕೇಂದ್ರ ಅಧಿಕಾರಿಗಳು ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕಾಗಿದೆ.
2021ರ ಏಪ್ರಿಲ್‌ನಲ್ಲಿ ಮುರಗುಂಡಿ-ಸಂಕೇಶ್ವರ ಮಾರ್ಗದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಈ ನಿರ್ದಿಷ್ಟರಸ್ತೆಯನ್ನು ಚತುಷ್ಪಥಕ್ಕೆ ವಿಸ್ತರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿತ್ ಗಡ್ಕರಿ ಅವರಿಗೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮನವಿ ಮಾಡಿದ್ದರು. ರಸ್ತೆ ವಿಸ್ತರಣೆಯಾಗುವವರೆಗೆ ಕೇಂದ್ರದಿಂದ .21.88 ಕೋಟಿಗಳನ್ನು ಈ ಭಾಗದ ಅಭಿವೃದ್ಧಿಗೆ ಮಂಜೂರು ಮಾಡಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಕೂಡ ಕರೆಯಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಚಿಕ್ಕೋಡಿ ಭಾಗದಿಂದ ವಿಜಯಪುರ ಜಿಲ್ಲೆಗೆ ತೆರಳುವ ಎಲ್ಲ ಮಾರ್ಗಗಳಲ್ಲಿ ಸುತ್ತ-ಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ; ಮಾಜಿ ಸಿಎಂ ಬೊಮ್ಮಾಯಿ ಟೀಕೆ
4 ಹಂತದಲ್ಲಿ ಚತುಷ್ಪಥ ರಸ್ತೆ ನವೀಕರಣ
ಗೋಟೂರ-ವಿಜಯಪುರ ರಾಜ್ಯ ಹೆದ್ದಾರಿಯೂ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಮಳೆಗಾಲದಿಂದಾಗಿ ಅಲ್ಲಲ್ಲಿ ತಗ್ಗು-ಗುಂಡಿ ಬಿದ್ದಿವೆ. ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಗಳು ಕೂಡಲೇ ರಸ್ತೆ ಸುಧಾರಣೆ ಕಾಮಗಾರಿ ಕೈಗೆತ್ತಿಕೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಂಸದ ರಮೇಶ ಕತ್ತಿ ಹೇಳಿದ್ದಾರೆ.
ಗೋಟೂರ ವಿಜಯಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಹಂತ, ಹಂತವಾಗಿ ನಡೆಯುತ್ತಿದ್ದು, ಚಿಕ್ಕೋಡಿ ಬೈಪಾಸ್‌ವರೆಗಿನ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಚಿಕ್ಕೋಡಿಯಿಂದ ಗೋಟೂರವರೆಗಿನ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರದಲ್ಲಿ ತಗ್ಗು-ಗುಂಡಿ ಮುಚ್ಚಲಾಗುವುದು ಎಂದು ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು ವಿಜಯ ಪಾಟೀಲ ತಿಳಿಸಿದ್ದಾರೆ.