ಅಂಚೆ ಇಲಾಖೆಯಿಂದ ರಾಖಿ ಪೋಸ್ಟ್ ಆರಂಭ: ಸಹೋದರರಿಗೆ ‘ಚೆಂದದ ರಾಖಿ’ ಕಳುಹಿಸಿ
ಇಂಡಿಯಾ ಪೋಸ್ಟ್ ಅಂತರ್ಜಾಲ ಪುಟದಲ್ಲಿ ರಾಖಿ ಪೋಸ್ಟ್ ಆನ್‌ಲೈನ್ ಸೇವೆ ಶುರು| ಜು.31ರ ವರೆಗೂ ಈ ಸೇವೆ ಲಭ್ಯ| ಆ.3ರಂದು ರಾಖಿ ಹಬ್ಬ| ಸಹೋದರಿಯರು ಈ ಸೇವೆ ಹೊಂದಲು ಇನ್ನೂ ವಾರದ ಅವಕಾಶ ಇಂಡಿಯಾ ಪೋಸ್ಟ್ ಕಲ್ಪಿಸಿದೆ|
ಕಲಬುರಗಿ(ಜು.29): ಕೊರೋನಾ ಆತಂಕದ ಈ ಕಾಲದಲ್ಲಿ ಪ್ರೀತಿಯ ಸಹೋದರರಿಗೆ, ಗಡಿ ಕಾಯೋ ಯೋಧರಿಗೆ ಅರ್ಥಪೂರ್ಣ ಸಂದೇಶದ ಜೊತೆಗೆ ಆಕರ್ಷಕ ರಾಖಿ ಕಳುಹಿಸೋದು ಹೇಗೆಂಬ ಸಹೋದರಿಯರ ಚಿಂತೆ ದೂರ ಮಾಡಲು ಭಾರತೀಯ ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಆನ್‌ಲೈನ್ ಸೇವೆ ಆರಂಭಿಸಿದೆ.
ಸಹೋದರರಿಗೆ, ಸೈನಿಕರಿಗೆ ರಾಖಿ ಕಳುಹಿಸೋದು ಹೇಗೆಂಬ ಸಹೋದರಿಯರ ಚಿಂತೆ ನಾವು ದೂರ ಮಾಡುತ್ತೇವೆ ಎಂದು ಹೇಳುತ್ತ ಅತ್ಯಾಕರ್ಷಕ ವಿನ್ಯಾಸದ ಕವರ್‌ಗಳಲ್ಲಿ ಚೆಂದದ ರಾಖಿ ಇಟ್ಟು, ಸಹೋದರಿಯರ ಪ್ರೀತಿಯ ಸಂದೇಶ ಸಮೇತ ರಾಖಿಯನ್ನು ನಿಗದಿತ ವಿಳಾಸಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದೆ.
'ಸರ್ಕಾರದ ವೈಫಲ್ಯದಿಂದ ಕರ್ನಾಟಕ ಕೊರೋನಾ ಹಾಟ್‌ಸ್ಪಾಟ್ ಆಗುತ್ತಿದೆ'
ರಾಖಿ ಪೋಸ್ಟ್‌ಗೆ 100 ರು. ಶುಲ್ಕ ನಿಗದಿಪಡಿಸಲಾಗಿದ್ದು ಈ ಸೇವೆ ಬಳಸಲು ಆಸಕ್ತರು http://karnatakapost.gov.in/rakhi-post ಅಥವಾ ಕರ್ನಾಟಕ ಪೋಸ್ಟ್ ಹೋಮ್ ಪೇಜ್‌ಗೆ ಹೋಗಿ ಅಂತರ್ಜಾಲ ಪುಟ ತೆರೆದರೆ ಅದರಲ್ಲಿ ಹಂತಹಂತವಾಗಿ ರಾಖಿ ಪೋಸ್ಟ್ ಸೇವೆ ಪಡೆಯೋದು ಹೇಗೆಂಬ ಸ್ವ ವಿವರಣೆ ಪುಟಗಳಿವೆ. ಈ ಪುಟಗಳಲ್ಲಿನ ಸೂಚನೆಗಳಂತೆ ಆನ್‌ಲೈನ್ ರಾಖಿ ಪೋಸ್ಟ್ ಸೇವೆ ಹೊಂದಬಹುದಾಗಿದೆ.
ಈಗಾಗಲೇ ಇಂಡಿಯಾ ಪೋಸ್ಟ್ ಅಂತರ್ಜಾಲ ಪುಟದಲ್ಲಿ ರಾಖಿ ಪೋಸ್ಟ್ ಆನ್‌ಲೈನ್ ಸೇವೆ ಶುರುವಾಗಿದ್ದು ಜು.31ರ ವರೆಗೂ ಈ ಸೇವೆ ಲಭ್ಯವಿರಲಿದೆ. ಆ.3ರಂದು ರಾಖಿ ಹಬ್ಬ. ಹೀಗಾಗಿ ಸಹೋದರಿಯರು ಈ ಸೇವೆ ಹೊಂದಲು ಇನ್ನೂ ವಾರದ ಅವಕಾಶ ಇಂಡಿಯಾ ಪೋಸ್ಟ್ ಕಲ್ಪಿಸಿದೆ.
ಕೊರೋನಾ ಆತಂಕದಲ್ಲಿ, ಲಾಕ್‌ಡೌನ್, ಅನ್‌ಲಾಕ್‌ನಂತಹ ಕಟ್ಟುನಿಟ್ಟಿನ ಕ್ರಮ, ಗುಂಪು ಗೂಡೋದನ್ನೇ ನಿಷೇಧಿಸಿರುವ ಈ ಕಾಲದಲ್ಲಿಯೂ ಅಂಚೆ ಇಲಾಖೆ ಆನ್‌ಲೈನ್ ಸೇವೆ ಜನತೆಗೆ ತುಂಬ ಸೂಕ್ತವಾಗಿದೆ. ಜನ ಇಂತಹ ಸೇವೆ ಬಳಸುವ ಮೂಲಕ ಅಂಚೆ ಇಲಾಖೆಯೊಂದಿಗೆ ಕೈ ಜೋಡಿಸಬೇಕು, ಇದರಿಂದ ಕೊರೋನಾ ಹರಡದಂತೆ ತಡೆಯಬಹುದಾಗಿದೆ ಎಂದು ಕಲಬುರಗಿ ಅಂಚೆ ವಲಯ ವರಿಷ್ಠ ಅಂಚೆ ಪ್ರಬಂಧಕ ಬಿ.ಆರ್. ನನಜಗಿ, ಕಲಬುರಗಿ ಹೆಡ್‌ಪೋಸ್ಟ್ ಆಫೀಸ್ ಮಾರುಕಟ್ಟೆ ವ್ಯವಸ್ಥಾಪಕ ರಾಘವೇಂದ್ರ ರೆಡ್ಡಿ ಹೇಳಿದ್ದಾರೆ.