ಮಂಗಳೂರು(ಜು.19): ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಹಿನ್ನೆಲೆಯಲ್ಲಿ ಮಂಗಳೂರಿನ 13 ಅಂಚೆ ಕಚೇರಿಗಳನ್ನು ಸೋಮವಾರ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್‌ ಬೈಲ್‌, ಫಳ್ನೀರ್‌, ಫಿಶರಿಸ್‌ ಕಾಲೇಜ್, ಮಂಗಳೂರು ಕಲೆಕ್ಟರ್‌ಗೇಟ್‌, ಎಸ್‌ಒ ಅಂಚೆ ಕಚೇರಿಗಳು ಸೋಮವಾರ ಸಾರ್ವಜನಿಕ ಸೇವೆಗೆ ದೊರೆಯುವುದಿಲ್ಲ ಎಂದು ತಿಳಿದು ಬಂದಿದೆ.

ಹಡಗು ಕಂಟೈನರ್‌ಗಳಲ್ಲಿ ಕೋವಿಡ್‌ ಐಸಿಯು: ಇದು ದೇಶದಲ್ಲೇ ಪ್ರಥಮ!

ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಶನಿವಾರ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಈ ಇಬ್ಬರು ಅಂಚೆ ಇಲಾಖೆಯ ಕ್ಯಾಶ್‌ ಓವರ್‌ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ವಿವಿಧ ಅಂಚೆ ಇಲಾಖೆಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು.

ಇದರಿಂದ ಇವರು ಕರ್ತವ್ಯಕ್ಕೆ ತೆರಳಿದ 13 ಅಂಚೆ ಕಚೇರಿಗಳಿಗೆ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಂಚೆ ಇಲಾಖೆಯಿಂದ ಎಲ್ಲ 13 ಕಚೇರಿಗಳಿಗೆ ಸ್ಯಾನಿಟೈಸೇಶನ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.