ಸಂತೋಷ ದೈವಜ್ಞ

ಮುಂಡಗೋಡ [ಜ.21]:  ಗ್ರಾಮೀಣ ಅಂಚೆ ಸೇವಕನೋರ್ವ ಗ್ರಾಹಕರು ಜಮಾ ಮಾಡಿದ ಠೇವಣಿ ಹಾಗೂ ಫಲಾನುಭವಿಗಳಿಗೆ ವಿತರಿಸ ಬೇಕಾದ ಮಾಸಾಶನ ಸೇರಿ ಅಂದಾಜು 5 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು  ಲಪಟಾಯಿಸಿ ತಲೆಮರೆಸಿಕೊಂಡಿದ್ದು, ವಂಚನೆ ಗೊಳಗಾದವರು ನಿತ್ಯ ನ್ಯಾಯಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಬಳಿ ಅಲೆದಾಡುತ್ತಿದ್ದಾರೆ. ಬಹುತೇಕ ಪರಿಶಿಷ್ಟ ಜಾತಿ, ಜನಾಂಗವೇ ಹೆಚ್ಚಾಗಿರುವ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ಈ ಅಕ್ರಮ ನಡೆದಿದ್ದು, ನಾಗರಾಜ ಭೋವಿವಡ್ಡರ ಎಂಬ ಅಂಚೆ ಸೇವಕನೇ ಹಣ ಲಪಟಾಯಿಸಿರುವ ಆರೋಪಿ. 

5 ಲಕ್ಷಕ್ಕೂ ಅಧಿಕ ಅವ್ಯವಹಾರ: 2014 ರಿಂದ 2019 ರ ಜುಲೈ ಅಂತ್ಯದವರೆಗಿನ ಅವಧಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಲಾದ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಹಣದ ಅವ್ಯವಹಾರ ನಡೆಸಿದ್ದಲ್ಲದೆ ಬಡ ಹಾಗೂ ನಿರ್ಗತಿಕರಿಗೆ ಸರ್ಕಾರ ನೀಡುತ್ತಿದ್ದ ಮಾಸಾಶನವನ್ನು ಕೂಡ ಸರಿಯಾಗಿ ವಿತರಿಸದೇ ಸ್ವಂತಕ್ಕೆ ಬಳಸಿಕೊಂಡಿದ್ದಾನೆ. 

ಬಡವರ ಹಣ ನುಂಗಿ ಪೋಸ್ಟ್‌ ಮಾಸ್ಟರ್‌ ಪರಾರಿ: ಕಂಗಾಲಾದ ಜನತೆ

ಈ ಹಗರಣದಲ್ಲಿ ಅಂಚೆ ಸೇವಕನೊಂದಿಗೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರಬಹುದೆಂಬ ಸಂದೇಹ ಗ್ರಾಹಕರಿಂದ ವ್ಯಕ್ತಗೊಳ್ಳುತ್ತಿದೆ. ನಿಯಮಾವಳಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಅಂಚೆ ಇಲಾಖೆಯ ಅಧೀಕ್ಷಕರ ಕಚೇರಿಯ ಮೇಲ್ ಒವರ್‌ ಶೀಯರ್ ಹುದ್ದೆಯ ಅಧಿಕಾರಿ ಕಡತಗಳ ಪರಿಶೀಲನೆ ನಡೆಸಬೇಕಲ್ಲದೆ ತಪಾಸಣೆ ನಡೆಸಬೇಕೆಂಬ ನಿಯಮವಿದೆ. ಆದರೆ ಐದು ವರ್ಷಗಳಿಂದ ಅಕ್ರಮ ನಿರಂತರವಾಗಿ ನಡೆಯುತ್ತಿದ್ದರೂ ಅಧಿಕಾರಗಳ ಗಮನಕ್ಕೆ ಬಾರದಿರುವುದು ಹಲವು ಸಂಶಯ ಹುಟ್ಟು ಹಾಕಿದೆ.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ...

ನಕಲಿ ಸಹಿ: ಅಂಚೆ ಉಳಿತಾಯ ಖಾತೆ, ಅಂಚೆ ವಿಮೆ, ಮಾಸಾಶನ ವಿತರಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ನಾಗರಾಜ ಕೈಚಳಕ ತೋರಿದ್ದು, ಒಂದೊಂದಾಗಿ ಹಗರಣ ಗಳು ಬೆಳಕಿಗೆ ಬರುತ್ತಿವೆ. ಅಂಚೆ ಉಳಿತಾಯ ಖಾತೆಯ ಪಾಸ್‌ಬುಕ್‌ಗಳನ್ನು ಶಾಖಾ ಕಚೇರಿಯಿಂದ ವರ್ಷಕ್ಕೊಮ್ಮೆ ಬಡ್ಡಿ ನಮೂದಿಸಲು ಉಪಕಚೇರಿಗೆ ಕಳಿಸಿಕೊಡುವ ನಿಯಮವಿದೆ. ಆದರೆ ಈತ ಅವ್ಯವಹಾರವೆಸಗಿದ ಖಾತೆಗಳ ಪಾಸ್‌ಬುಕ್‌ಗಳನ್ನು ಕಚೇರಿಗೆ ಕಳಿಸದೆ ತನ್ನಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಅಲ್ಲದೆ ಶಾಖಾ ಕಚೇರಿಯಲ್ಲಿ 5 ಸಾವಿರದವರೆಗೆ ವಹಿವಾಟು ನಡೆಸಲು ಇರುವ ಅಧಿಕಾರವನ್ನೇ ಬಂಡವಾಳವಾಗಿಸಿಕೊಂಡು ಅಕ್ರಮವೆಸಗಿ ರಬಹುದೆಂದು ಹೇಳಲಾಗುತ್ತಿದೆ. ಅಲ್ಲದೆ ಕೆಲವು ಪ್ರಕರಣಗಳಲ್ಲಿ ಗ್ರಾಹಕರ ಸಹಿಯನ್ನೇ ನಕಲಿ ಮಾಡಿ ಯಾಮಾರಿಸಿದ್ದು ಕೂಡ ಕಂಡುಬಂದಿದೆ ಎನ್ನಲಾಗುತ್ತಿದೆ.

ತಾಪಂನಲ್ಲಿ ಠರಾವು: ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಚೆ ಸೇವಕನ ಅವ್ಯಹಾರ ಕುರಿತು ಚರ್ಚೆಯಾಗಿದೆ. ಈ ಬಗ್ಗೆ ತಹಸೀಲ್ದಾರ್ ಸಮರ್ಪಕವಾಗಿ ಪರಿಶೀಲನೆ ನಡೆಸಿ ಸಾರ್ವಜನಿಕರ ಲಕ್ಷಾಂತರ ರು. ಹಣ ವಂಚನೆ ಮಾಡಿ ಪರಾರಿಯಾಗಿರುವ ಅಂಚೆ ಸಹಾಯಕನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿ ಸಬೇಕು. ಅಲ್ಲದೇ, ಮೋಸಕ್ಕೊಳಗಾದವರ ಹಣವನ್ನು ಬಟವಡೆ ಮಾಡಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ಠರಾಯಿಸಲಾಗಿದ್ದು, ವಂಚನೆಗೊಳಗಾದವರು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ.