ಯಾದಗಿರಿ(ಮಾ.01): ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಫೆ.25ರಂದು ಜ್ಯೂಸ್ ಕುಡಿದು ಎಳೆಯ ಮಕ್ಕಳಿಬ್ಬರ ಸಾವು ಅನುಮಾನಾಸ್ಪದ ಪ್ರಕರಣದ ತನಿಖೆಗೆ ಮುಂದಾಗಿರುವ ಪೊಲೀಸರು, ದೂರು ದಾಖಲಾದ ನಂತರ ಶನಿವಾರ ಹೂತಿಟ್ಟ ಶವ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. 

ಈ ಮಧ್ಯೆ, ಪ್ರಕರಣದ ಬಗ್ಗೆ ಮಾಹಿತಿ ಅರಿತು, ಶನಿವಾರ ಖುದ್ದಾಗಿ ಗ್ರಾಮಕ್ಕೆ ಆಗಮಿಸಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಜಯಶ್ರೀ, ಎಳೆಯ ಮಕ್ಕಳ ಸಾವಿನ ಪ್ರಕರಣದ ಬಗ್ಗೆ ಆಘಾತ ವ್ಯಕ್ತಪಡಿಸಿ, ಪಾಲಕರು ಹಾಗೂ ಪೋಷಕರಿಗೆ ಸಾಂತ್ವನ ಹೇಳಿ, ಚರ್ಚಿಸಿದ್ದಾರೆ. 

ಸಹಾಯುಕ ಆಯುಕ್ತ ಶಂಕರಗೌಡ ಸೋಮನಾಳ್ ಉಪಸ್ಥಿತಿಯಲ್ಲಿ, ವೈದ್ಯರು ಹಾಗೂ ಪೊಲೀಸ್ ಸಮ್ಮುಖದಲ್ಲಿ ಶವಗಳ ಹೊರತೆಗೆದು ವಿಧಿ ವಿಜ್ಞಾನ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ದೂರಿನಂತೆ, ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಸಲ್ಲಿಸಲಾಗುವುದು ಎಂದು ಶಂಕರಗೌಡ ಹೇಳಿದ್ದಾರೆ. 

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಜಯಶ್ರೀ ಕೂಡ ಗ್ರಾಮಕ್ಕೆ ಭೇಟಿ ನೀಡಿ, ಪೋಷಕರು ಹಾಗೂ ಸಂಬಂಧಿಕರೊಡನೆ ಮಾತುಕತೆ ನಡೆಸಿ, ಘಟನೆ ಬಗ್ಗೆ ಅನುಮಾನ ಹಾಗೂ ಆಘಾತ ವ್ಯಕ್ತಪಡಿಸಿದರು. ಎಳೆಯ ಮಕ್ಕಳ, ಅದೂ ಹೆಣ್ಣು ಮಕ್ಕಳಿಬ್ಬರ ಸಾವಿನ ಘಟನೆ ಹಿಂದೆ ಅನುಮಾನಗಳು ಮೂಡಿಬಂದಿದ್ದವು. ‘ಕನ್ನಡಪ್ರಭ’ದ ವರದಿ ಗಮನಕ್ಕೆ ಬಂದ ನಂತರ, ಯಾದಗಿರಿಗೆ ಬಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜೊತೆ ಚರ್ಚಿಸಿದ್ದೆ. ಮಕ್ಕಳು ರಾಷ್ಟ್ರದ ಆಸ್ತಿ, ಹುಟ್ಟಿದ ಮೇಲೆ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿರುವುದಾಗಿ ಡಾ. ಜಯಶ್ರೀ ತಮ್ಮನ್ನು ಭೇಟಿಯಾದ ಕನ್ನಡಪ್ರಭ’ಹಾಗೂ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. 

ಘಟನೆ ಹಿನ್ನೆಲೆ: 

ವಡಗೇರಾ ತಾಲೂಕಿನ ಕೋಡಾಲ ಗ್ರಾಮದ ಗೋರೇಸಾಬ್ ಹಾಗೂ ಶೈನಾಜ್ ಬೇಗಂಳ ಮಕ್ಕಳಾದ 2 ತಿಂಗಳ ಹಸುಳೆ ಅಫ್ಸಾನಾ ಹಾಗೂ ಎರಡೂವರೆ ವರ್ಷದ ಮಗು ಖೈರೂನ್ ಆಟವಾಡುತ್ತಿದ್ದ ಸಂದರ್ಭದಲ್ಲಿ, ಜ್ಯೂಸ್ ಎಂದು ಗ್ರಹಿಸಿ ಕ್ರಿಮಿನಾಶಕ ಸೇವಿಸಿದ್ದರಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಮಕ್ಕಳು ವಿಷ ಸೇವಿಸಿದ್ದರಿಂದ ಆತಂಕಗೊಂಡ ತಾಯಿ ತಾನೂ ಕ್ರಿಮಿನಾಶಕ ಸೇವಿಸಿದ್ದಾಳೆ ಎಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಒಂದು ಮಗು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, ಇನ್ನೊಂದು ಮಗು ರಾಯಚೂರು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿತ್ತು. ತಾಯಿ ಚೇತರಿಸಿಕೊಂಡಿದ್ದಳು. ನಂತರ, ಮಕ್ಕಳ ಶವಗಳನ್ನ ನೇರವಾಗಿ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಗಿತ್ತು.

ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ ಈ ಪ್ರಕರಣದಲ್ಲಿ ಜಿಲ್ಲಾಸ್ಪತ್ರೆ ವೈದ್ಯರು ನಿಲ್ ಎಂಎಲ್‌ಸಿ ಮಾಡಿ ಕಳುಹಿಸಿದ್ದು, ದೂರುದಾರರು ಇಲ್ಲವೆಂದು ಪ್ರಕರಣದ ದಾಖಲಿಸದೇ ಇದ್ದ ಪೊಲೀಸ್ ಇಲಾಖೆ ಕಾರ್ಯವೈಖರಿ ಹಲವಾರು ಅನುಮಾನಗಳಿಗೆ ಕಾರಣವಾಗಿತ್ತು. ಮೂವರು ಹೆಣ್ಣು ಮಕ್ಕಳು ಹುಟ್ಟಿದ್ದರಿಂದ ಪತಿ ಹಾಗೂ ಪತ್ನಿ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನುವ ಮಾತುಗಳು ಕೇಳಿಬಂದಿದ್ದವು. ಸತ್ತಿರುವುದು ಇಬ್ಬರು ಅಮಾಯಕ ಹೆಣ್ಣು ಮಕ್ಕಳು. ಈ ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತವೇ ಬೆಳೆದಿದೆ, ಎರಡು ವರ್ಷದ ಮಗು ಅದ್ಹೇಗೆ ವಿಷ ಸೇವಿಸುತ್ತೆ? ಏನೂ ತಿಳಿಯದ ಕಂದಮ್ಮ ವಿಷ ಸೇವಿಸಿದ್ದು ನಿಜವಾ? ಮಕ್ಕಳ ಸಾವಿನ ಹಿಂದಿರುವ ರಹಸ್ಯೆ ಏನು ಅನ್ನೋ ನೂರಾರು ಪ್ರಶ್ನೆಗಳು ಕಾಡಿದ್ದವು. ಈ ಅನುಮಾನಾಸ್ಪದ ಸಾವಿನ ಬಗ್ಗೆ ಕನ್ನಡಪ್ರಭ ವರದಿ ಮಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೆ ತಂದಿತ್ತು. ನಂತರ, ಶುಕ್ರವಾರ ಸಂಜೆ ಮೃತಪಟ್ಟ ಮಕ್ಕಳ ತಂದೆ ಗೋರೇಸಾಬ್ ಈ ಪ್ರಕರಣದ ಬಗ್ಗೆ ದೂರು ನೀಡಿದ ನಂತರ ಪೊಲೀಸ್ ತನಿಖೆ ಆರಂಭಗೊಂಡಿದೆ.

ಎಳೆಯ ಮಕ್ಕಳ ಸಾವಿನ ಘಟನೆ ಆಘಾತ ಮೂಡಿಸಿತ್ತು. ‘ಕನ್ನಡ ಪ್ರಭ’ದ ವರದಿ ನೋಡಿದೆ. ಈ ಬಗ್ಗೆ ಅರಿಯಲು ಇಲ್ಲಿಗೆ ಬಂದಿರುವೆ, ಹಲವು ಅನುಮಾನಗಳು ಮೂಡಿವೆ. ಎಳೆಯ ಹೆಣ್ಣು ಮಕ್ಕಳ ಅನುಮಾನಸ್ಪದ ಸಾವಿನ ಘಟನೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಜಯಶ್ರೀ ಅವರು ಹೇಳಿದ್ದಾರೆ. 

ಎಳೆಯ ಮಕ್ಕಳ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ದಾಖಲಾ ಗಿದೆ. ಈ ಬಗ್ಗೆ ಹೂತಿಟ್ಟ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ವೈದ್ಯರು ವರದಿ ನೀಡಲಿದ್ದಾರೆ ಎಂದು ಯಾದಗಿರಿಯ ಸಹಾಯಕ ಆಯುಕ್ತ   ಶಂಕರಗೌಡ ಸೋಮನಾಳ್ ತಿಳಿಸಿದ್ದಾರೆ.