ನಿಷೇಧವಿದ್ದರೂ ಬೆಂಗ್ಳೂರಲ್ಲಿ ಪಿಒಪಿ ಗಣೇಶನ ಭರಾಟೆ..!
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಮೇರೆಗೆ 2016ರಲ್ಲಿ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆದೇಶವಾಗಿ ಏಳು ವರ್ಷ ಪೂರ್ಣಗೊಂಡಿದೆ. ಆದರೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆ ನಿಂತಿಲ್ಲ.

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.15): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪರಿಸರ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಹಲವು ವರ್ಷದಿಂದ ನಿಷೇಧಿಸಲಾಗಿದೆ. ಆದರೂ, ಗಣೇಶ ಚತುರ್ಥಿ ವೇಳೆ ಕೋಟ್ಯಾಂತರ ರು. ಮೌಲ್ಯದ ಮೂರ್ತಿಗಳ ವಹಿವಾಟು ರಾಜಾರೋಷವಾಗಿ ನಡೆಯಲಿದೆ. ಈ ವೈಫಲ್ಯಕ್ಕೆ ನಿಯಂತ್ರಿಸುವ ಹೊಣೆ ಹೊತ್ತ ಸಂಸ್ಥೆಯ ಅಧಿಕಾರಿಗಳೇ ಕಾರಣ.
ಬೆಂಗಳೂರಿನದಲ್ಲಿ ಪಿಒಪಿ ಮೂರ್ತಿ ಮಾರಾಟ ಮತ್ತು ತಯಾರಿಗೆ ನಿಯಂತ್ರಿಸಬೇಕಾದ ಬಿಬಿಎಂಪಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಚತುರ್ಥಿಯ ವೇಳೆಗೆ ಪಿಒಪಿ ಮಾಫಿಯಾಗೆ ಮಣಿದು ಮುಕ್ತ ಮಾರಾಟ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಹಲವೆಡೆ ದಾಳಿ: 12 ಪಿಒಪಿ ಗಣೇಶ ಮೂರ್ತಿ ವಶ
ಈಗಾಗಲೇ ಬಿಬಿಎಂಪಿ ಮತ್ತು ಕೆಎಸ್‌ಪಿಸಿಬಿ ಪಿಒಪಿ ಮೂರ್ತಿ ಮಾರಾಟ ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯು ಕಾಗದಕ್ಕೆ ಸೀಮಿತವಾಗಿದ್ದು, ನಗರದಲ್ಲಿ ಪಿಒಪಿ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
2016ರಲ್ಲಿಯೇ ನಿಷೇಧ
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಮೇರೆಗೆ 2016ರಲ್ಲಿ ರಾಜ್ಯದಲ್ಲಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆದೇಶವಾಗಿ ಏಳು ವರ್ಷ ಪೂರ್ಣಗೊಂಡಿದೆ. ಆದರೂ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮತ್ತು ತಯಾರಿಕೆ ನಿಂತಿಲ್ಲ.
ಮುಚ್ಚಳಿಕೆ ಪತ್ರಕ್ಕೆ ಸೀಮಿತ: ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯುವ ವೇಳೆ ಆಯೋಜಕರಿಂದ ಪಿಒಪಿ ಮೂರ್ತಿ ಪ್ರತಿಷ್ಠಾಪಿಸುವುಲ್ಲ್ಲಎಂದು ಮುಚ್ಚಳಿಕೆ ಪತ್ರವನ್ನು ಪಡೆಯುವುದಕ್ಕೆ ಮಾತ್ರ ಬಿಬಿಎಂಪಿ ಅಧಿಕಾರಿಗಳು ಸೀಮಿತವಾಗಿದ್ದಾರೆ. ನಿಯಮಿ ಮೀರಿ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ಧಾರ್ಮಿಕ ವಿಚಾರವಾದ್ದರಿಂದ ಸಾರ್ವಜನಿಕರ ಮೇಲೆ ನಾವು ಇಂತಹದ್ದೇ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು, ಪೂಜಿಸಬೇಕು ಎಂದು ಷರತ್ತು ವಿಧಿಸಲಾಗುವುದಿಲ್ಲ. ಬಹಳ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಬದ್ಧತೆ ಇಲ್ಲದ ಅಧಿಕಾರಿಗಳು: ನಗರದಲ್ಲಿ ಪಿಒಪಿ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಕೆ ನಿಷೇಧ ಅನುಷ್ಠಾನದಲ್ಲಿ ಅಧಿಕಾರಿಗಳಿಗೆ ಬದ್ಧತೆ ಕಾಣುತ್ತಿಲ್ಲ. ಕಳೆದ ಹತ್ತಾರು ವರ್ಷದಿಂದ ಪಿಒಪಿ ನಿಷೇಧಿಸಬೇಕೆಂಬ ಕೂಗು ಕೇಳಿ ಬಂದರೂ 2016 ರಲ್ಲಿ ಸರ್ಕಾರ ಪಿಒಪಿ ಬಳಕೆ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಲಾಯಿತು. ಅದಾಗಿಯೂ ನಗರದಲ್ಲಿ ರಾಜಾರೋಷವಾಗಿ ಪಿಒಪಿ ಮಾರಾಟ, ತಯಾರಿಕೆ ನಡೆಯುತ್ತಿದೆ. ನಿಯಂತ್ರಿಸುವಲ್ಲಿ ಬಿಬಿಎಂಪಿ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಂಫೂರ್ಣವಾಗಿ ವಿಫಲವಾಗಿದ್ದಾರೆ. ಕೇವಲ ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ಒಂದೆರೆಡು ಪಿಒಪಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿ ಬೆರಳೆಣಿಕೆ ಸಂಖ್ಯೆ ಪಿಒಪಿ ವಶಕ್ಕೆ ಪಡೆದಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪಗಳಿವೆ.
ಬೀದರ್: ಪರಿಸರ ಸಚಿವರ ಜಿಲ್ಲೆಯಲ್ಲಿ ಪಿಒಪಿ ಗಣೇಶಗೆ ಬೀಳುತ್ತಾ ಬ್ರೇಕ್?
ಜಾಥಕ್ಕೆ ಸೀಮಿತ ಆಡಳಿತ ವ್ಯವಸ್ಥೆ
ಕಳೆದ ಮೂರು ವರ್ಷದಿಂದ ಬಿಬಿಎಂಪಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ಹಬ್ಬಕ್ಕೂ ಮುನ್ನ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಶಾಲಾ ಮಕ್ಕಳ ನೇತೃತ್ವದಲ್ಲಿ ಜಾಥಾ ನಡೆಸಿ, ಸಾಂಕೇತವಾಗಿ ಉಚಿತ ಮಣ್ಣಿನ ಮೂರ್ತಿಗಳನ್ನು ವಿತರಣೆಗೆ ಸೀಮಿತವಾಗಿದೆ. ಅದನ್ನು ಬಿಟ್ಟರೆ ವಿನೂತ ಮತ್ತು ಪರಿಣಾಮಕಾರಿ ಕ್ರಮಕ್ಕೆ ಮುಂದಾಗುತ್ತಿಲ್ಲ.
ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಕ್ಕೆ ಹೋಲಿಕೆ ಮಾಡಿದರೆ, ನಗರದಲ್ಲಿ ಪಿಒಪಿಯ ಕೆಟ್ಟ ಪರಿಣಾಮಗಳ ಕುರಿತು ಸಾಕಷ್ಟು ಜಾಗೃತಿ ಆಗಿದ್ದು, ಶೇ.80 ರಷ್ಟು ಪಿಒಪಿ ಗಣೇಶ ಮೂರ್ತಿಗಳ ಪೂಜೆಸುವವರ ಸಂಖ್ಯೆ ಕಡಿಮೆ ಆಗಿದೆ. ಶುದ್ಧ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅಂದಾಗಿಯೂ ನಗರದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ತಿಳಿಸಿದ್ದಾರೆ.