Asianet Suvarna News Asianet Suvarna News

ಬೆಸ್ಕಾಂನಿಂದ ಕಳಪೆ ಟಿಸಿ ಸರಬರಾಜು : ರೈತರ ಆಕ್ರೋಶ

ಇಲ್ಲಿಯ ಬೆಸ್ಕಾಂ ವತಿಯಿಂದ ರೈತರಿಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಾಲೂಕು ಕಿಸಾನ್ ಸಂಘದ ಕಾರ್ಯದರ್ಶಿ ಅಜ್ಜೇನಹಳ್ಳಿ ತೋಂಟರಾಜು ಆರೋಪಿಸಿದ್ದಾರೆ.

Poor TC supply by BESCOM: Farmers  outrage snr
Author
First Published Dec 29, 2023, 9:01 AM IST

 ತುರುವೇಕೆರೆ : ಇಲ್ಲಿಯ ಬೆಸ್ಕಾಂ ವತಿಯಿಂದ ರೈತರಿಗೆ ಸರಬರಾಜು ಮಾಡುತ್ತಿರುವ ವಿದ್ಯುತ್ ಪರಿವರ್ತಕಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಾಲೂಕು ಕಿಸಾನ್ ಸಂಘದ ಕಾರ್ಯದರ್ಶಿ ಅಜ್ಜೇನಹಳ್ಳಿ ತೋಂಟರಾಜು ಆರೋಪಿಸಿದ್ದಾರೆ.

ಬೆಸ್ಕಾಂ ವತಿಯಿಂದ ನೀಡಲಾಗುತ್ತಿರುವ ಟಿಸಿಗಳು ಗುಣಾತ್ಮಕವಾಗಿಲ್ಲ. ಹಲವಾರು ಬಾರಿ ದುರಸ್ತಿ ಮಾಡಲಾಗಿದೆ. ಆ ದುರಸ್ತಿಯೂ ಸರಿಯಾಗಿ ಮಾಡದ ಕಾರಣ ಟಿಸಿಗಳೇ ಕೆಲವೇ ದಿನಗಳಲ್ಲಿ ಸುಟ್ಟು ಹೋಗುತ್ತಿವೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಬರಗಾಲದಿಂದ ರೈತರು ಮಳೆಯಿಲ್ಲದೆ ಕಂಗೆಟ್ಟಿ ಹೋಗಿದ್ದಾರೆ. ತೆಂಗು, ಅಡಿಕೆ ಬೆಳೆ ಉಳಿಸಿಕೊಳ್ಳಲು ಶತಾಯ ಗತಾಯ ಹೋರಾಡುತ್ತಿದ್ದಾರೆ.

ಟಿ.ಸಿ.ಸುಟ್ಟ 72 ಗಂಟೆಯೊಳಗೆ ಬದಲಾಯಿಸಿಕೊಡಬೇಕು ಎಂಬ ನಿಯಮವಿದ್ದರೂ ಟಿ.ಸಿ.ಗೆ ತಿಂಗಳಾನುಗಟ್ಟಲೆ ಕಾಯಬೇಕಾಗಿದೆ. ಮಾಚೇನಹಳ್ಳಿ ಗೊಲ್ಲರಹಟ್ಟಿಗೆ ನೀಡಿದ ೧೦೦ ಕೆವಿ. ಟಿ.ಸಿ. 3 ತಿಂಗಳಲ್ಲಿ 4 ಬಾರಿ ಸುಟ್ಟು ಹೋಗಿದೆ. ಟಿಸಿಗೆ ಹೆಚ್ಚು ಸಂಪರ್ಕ ನೀಡಿದಿದ್ದರೂ ಸುಟ್ಟು ಹೋಗುತ್ತಿದೆ. ಇದಕ್ಕೆ ಕಳಪೆ ಗುಣಮಟ್ಟವೇ ಕಾರಣವಾಗಿದೆ ಎಂದು ಅಜ್ಜೇನಹಳ್ಳಿಯ ತೋಂಟರಾಜು ದೂರಿದರು.

ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಟಿ.ಸಿ. ಬದಲಾಯಿಸಿಕೊಡಬೇಕು ಹಾಗೂ ಗುಣಮಟ್ಟದ ಟಿ.ಸಿ. ನೀಡಬೇಕು. ಇಲ್ಲದಿದ್ದಲ್ಲಿ ಬೆಸ್ಕಾಂ ಕಛೇರಿ ಮುಂದೆ ರೈತರು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ರೈತರು ಬೆಸ್ಕಾಂ ಜೆಟಿಎ ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಮಾಚೇನಹಳ್ಳಿ ಸತೀಶ್, ಮಲ್ಲಿಕಾರ್ಜುನ್, ಶಿವಣ್ಣ, ಮಾವಿನಹಳ್ಳಿ ಕಂಚೀರಾಯಪ್ಪ, ಶಿವಶಂಕರಪ್ಪ, ರವೀಶ್, ನಟರಾಜು, ತೀರ್ಥಕುಮಾರ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

Follow Us:
Download App:
  • android
  • ios