Chamarajanagar: ರೈತರಿಗೆ ಕಣ್ಣೀರು ತರಿಸಿದ ಸಣ್ಣೀರುಳ್ಳಿ ಕಳಪೆ ಬೀಜ: ಕಟಾವು ಅವಧಿ ಮುಗಿದರೂ ಬಾರದ ಬೆಳೆ
ಟ್ರಾಕ್ಟರ್ ತಂದು ಉಳುಮೆ ಮಾಡಿಸಿ ಬೆಳೆದ ಈರುಳ್ಳಿ ನಾಶ
ಕಳಪೆ ಬೀಜದಿಂದ ಸಣ್ಣೀರುಳ್ಳಿ ಬೆಳೆದ ರೈತರು ಕಂಗಾಲು
ಲಕ್ಷಾಂತರ ರೂ. ಸಾಲ ಮಾಡಿ ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ
ವರದಿ - ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಫೆ.02): ಈರುಳ್ಳಿ ಅಡುಗೆ ಮನೆಯಲ್ಲಿ ಕಣ್ಣೀರು ತರಿಸೋದು ಕಾಮನ್. ಆದ್ರೇ ಈರುಳ್ಳಿ ಇದೀಗಾ ಬೆಳೆದ ರೈತನ ಕಣ್ಣಲ್ಲೂ ನೀರು ತರಿಸುತ್ತಿದೆ. ಸೂಕ್ತ ಬೆಳೆ ಬರದೇ ಕಂಗಾಲಾಗಿರುವ ರೈತ ತಾನು ಬೆಳೆದ ಬೆಳೆಯನ್ನೇ ಟ್ರಾಕ್ಟರ್ ಮೂಲಕ ನಾಶಪಡಿಸುತ್ತಿದ್ದಾನೆ. ಯಾಕಪ್ಪ ಅಂತೀರಾ ಈ ಸ್ಟೋರಿ ನೋಡಿ..
ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ರೈತರು ಯಥೇಚ್ಛವಾಗಿ ಈರುಳ್ಳಿ ಬೆಳೆ ಬೆಳೆಯುತ್ತಾರೆ. ಆದರೆ ಈ ಬಾರಿ ಕೆಲವು ರೈತರು ಬೆಳೆದ ಈರುಳ್ಳಿ ಬೆಳೆ ನಿರೀಕ್ಷಿತ ಫಸಲು ಬಂದಿಲ್ಲ. ಇದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಚಾಮರಾಜನಗರದ ಸುತ್ತಮುತ್ತಲಿನ ರೈತರು ಸಾಕಷ್ಟು ಹಣ ನೀಡಿ ಉತ್ತಮವಾದ ಈರುಳ್ಳಿ ಬಿತ್ತನೆ ಬೀಜವನ್ನೇ ತಂದು ನಾಟಿ ಮಾಡಿದರು. ಆದರೆ ಕಟಾವಿನ ಸಮಯ ಮುಗಿದರೂ ಸಹ ಸೂಕ್ತವಾಗಿ ಈರುಳ್ಳಿ ಬೆಳೆ ಬಂದಿಲ್ಲ. ನೂರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿರುವ ರೈತರು ಈರುಳ್ಳಿ ಬೆಳೆ ಬಾರದೆ ನಷ್ಟ ಅನುಭವಿಸುತ್ತಿದ್ದಾರೆ.
ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು
ಮೂರು ಎಕರೆ ಈರುಳ್ಳಿ ಬೆಳೆ ನಾಶ: ಇನ್ನು ಈರುಳ್ಳಿ ಬೆಳೆಗೆ ಅತಿಯಾದ ತೇವಾಂಶ ಒಂದು ಕಡೆಯಾದರೆ ಕಳಪೆ ಗುಣಮಟ್ಟದ ಬಿತ್ತನೆ ಈರುಳ್ಳಿ ಬೀಜದಿಂದ ಕಂಗಾಲಾಗಿರುವ ರೈತರು ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಾನೆ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶ ಮಾಡುತ್ತಿದ್ದಾರೆ. ಇಂದು ಕಡುವಿನಕಟ್ಟೆ ಹುಂಡಿ ಗ್ರಾಮದ ರೈತ ನಾಗರಾಜು ಎಂಬುವವರು ಸುಮಾರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಸಾಮಾನ್ಯ ದರವಿದೆ. ಹೀಗಾಗಿ ಬೆಳೆ ಬಂದಿದ್ದರೆ ರೈತರಿಗೆ ಲಾಭವಾಗುವ ಸಂಭವವಿತ್ತು. ಆದರೆ ಉತ್ತಮ ಫಸಲು ಬರದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಸರ್ಕಾರ ನಮ್ಮ ನೆರವಿಗೆ ಆಗಮಿಸಬೇಕು: ಇನ್ನು ಜಿಲ್ಲೆಯಾದ್ಯಂತ ರೈತರು ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುತ್ತಾರೆ. ಪ್ರತಿ ವರ್ಷ ಬರುತ್ತಿದ್ದ ಲಾಭವನ್ನು ಗಮನದಲ್ಲಿಟ್ಟುಕೊಂಡು ರೈತರು ಈ ಬಾರಿಯೂ ಲಾಭದ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರಿಗೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಸೂಕ್ತ ಇಳುವರಿ ಬಾರದಿರುವುದರಿಂದ ರೈತ ಕಂಗಾಲಾಗಿದ್ದಾರೆ. ಇನ್ನಾದರೂ ಸರ್ಕಾರ ನಮ್ಮ ನೆರವಿಗೆ ಆಗಮಿಸಬೇಕು ಎಂದು ಅವಲತ್ತುಕೊಳ್ಳುತ್ತಿದ್ದಾರೆ.
Union Budget 2023: ಕೃಷಿಗೆ ಭರಪೂರ ಕೊಡುಗೆ; ನಿರ್ಮಲಾ ಬಜೆಟ್‌ನಿಂದ ರೈತರಿಗೆ ಸಿಗಲಿದೆ ಈ ಪ್ರಯೋಜನಗಳು..!
ಸಾಲ ಮಾಡಿ ಈರುಳ್ಳಿ ಬೆಳೆದವರಿಗೆ ಸಂಕಷ್ಟ: ಇಷ್ಟು ದಿನ ಮನೆಯಲ್ಲಿ ಮಹಿಳೆಯರ ಕಣ್ಣಿಂದ ನೀರು ತರಿಸುತ್ತಿದ್ದ ಈರುಳ್ಳಿ ಈಗ ಬೆಳೆದ ರೈತನ ಕಣ್ಣಿನಿಂದಲೂ ನೀರು ತರಿಸುತ್ತಿದೆ. ಈರುಳ್ಳಿ ಬೆಳೆಯಿಂದ ನಮ್ಮ ಕಷ್ಟ ದೂರ ಮಾಡಿಕೊಳ್ಳಬಹುದು ಎಂಬ ಆಸೆಯಿಂದ ಬಡ್ಡಿ ಸಾಲ ಮಾಡಿ ಈರುಳ್ಳಿ ಬೆಳೆದಿದ್ದ ರೈತರ ಪಾಡು ಹೇಳತೀರದಾಗಿದೆ. ಈ ಬಗ್ಗೆ ಸ್ವತಃ ಜಿಲ್ಲಾಡಳಿತವು ಕ್ರಮ ಕೈಗೊಂಡು ಈರುಳ್ಳಿ ಬೀಜ ಸರಬರಾಜು ಮಾಡಿದ ಕಂಪನಿಗಳ ಮೇಲೆ ಕ್ರಮ ಕೈಗೊಂಡು ರೈತರಿಗೆ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ರೈತರ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಸಮೀಕ್ಷೆ ಮಾಡಿ ಪರಿಹಾರವನ್ನಾದರೂ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ರೈತರು ಭಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ.