ಬೆಂಗಳೂರು [ನ.28]:  ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳ ನಾಮಫಲಕದಲ್ಲಿ ಶೇಕಡ 60ರಷ್ಟುಕನ್ನಡ ಬಳಸುವಂತೆ ಬಿಬಿಎಂಪಿ 22 ಸಾವಿರ ವ್ಯಾಪಾರಿ, ಉದ್ದಿಮೆದಾರರಿಗೆ ನೀಡಿದ್ದ ನೋಟಿಸ್‌ ಪೈಕಿ ಎಂಟು ಸಾವಿರ ಮಂದಿ ನಾಮಫಲಕ ಅಳವಡಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಮಾಲ್‌, ಹೋಟೆಲ್‌, ಮಳಿಗೆಗಳು ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನವೆಂಬರ್‌ ಒಂದರ ಕನ್ನಡ ರಾಜ್ಯೋತ್ಸವದ ಒಳಗಾಗಿ ಶೇ.60ರಷ್ಟುಕನ್ನಡ ಭಾಷೆಯ ನಾಮಫಲಕ ಪ್ರದರ್ಶನ ಕಡ್ಡಾಯಗೊಳಿಸಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಕಳೆದ ಅಕ್ಟೋಬರ್‌ 19ರಂದು ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಉದ್ದಿಮೆ ಪರವಾನಿಗೆ ನೀಡಲಾದ 47,406 ಉದ್ದಿಮೆಗಳ ಪೈಕಿ ಈವರೆಗೆ 22,474 ಉದ್ದಿಮೆ ಮಳಿಗೆಗಳ ನಾಮಫಲಕಗಳನ್ನು ಪರಿಶೀಲನೆ ಮಾಡಲಾಗಿದ್ದು, 22 ಸಾವಿರ ಉದ್ದಿಮೆದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅದರಲ್ಲಿ 8,195 ಉದ್ದಿಮೆದಾರರು ತಮ್ಮ ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಭಾಷೆ ಬಳಕೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ನೋಟಿಸ್‌ ಜಾರಿ ಮಾಡಿದ ಉದ್ದಿಮೆದಾರರಿಗೆ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಕಾಲಾವಧಿ ಮುಗಿಯುವ ವೇಳೆಯೊಳಗೆ ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಭಾಷೆ ಬಳಕೆ ಮಾಡದಿದ್ದಲ್ಲಿ ಅವರಿಗೆ ಪಾಲಿಕೆಯಿಂದ ನೀಡಲಾದ ಉದ್ದಿಮೆ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಕಟ್ಟಿದವರು:ಐಟಿ ಮಂದಿಯನ್ನು ಸಾಹಿತ್ಯದೆಡೆಗೆ ಸೆಳೆಯುತ್ತಿರುವ 'ಕಹಳೆ'!..

ಮಾಲ್‌ ಒಳಭಾಗದ ಮಳಿಗೆಗೂ ಕಡ್ಡಾಯ : ನಗರದ ಶಾಪಿಂಗ್‌ ಮಾಲ್‌ ಹೊರ ಭಾಗದಲ್ಲಿ ಮಾತ್ರ ಕನ್ನಡ ನಾಮಫಲಕ ಅಳವಡಿಸಲಾಗಿರುತ್ತದೆ. ಆದರ ಒಳಭಾಗದಲ್ಲಿರುವ ಮಳಿಗೆಗಳ ನಾಮಫಲಕ ಸಂಪೂರ್ಣವಾಗಿ ಪರಭಾಷೆಯಲ್ಲಿ ಇರುತ್ತದೆ. ಅವರಿಗೂ ಈ ನಿಯಮ ಅನ್ವಯಿಸಲಿದೆ. ಮಾಲ್‌ ಒಳಭಾಗದ ಮಳಿಗೆಗಳನ್ನು ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.