ಶಿವಮೊಗ್ಗ: ಮಹಾಮಳೆ, ಸಿಂಹಧಾಮದಲ್ಲಿ ಹೊಸ ಕಳೆ..!
ಈ ಬಾರಿಯ ಮುಂಗಾರಿನ ಆರ್ಭಟಕ್ಕೆ ಇಡೀ ನಾಡು ನಲುಗಿತು. ಮಲೆನಾಡು ಜರ್ಝರಿತವಾಯಿತು. ಶಿವಮೊಗ್ಗ ನಗರ ಅಕ್ಷರಶಃ ಮುಳುಗಿ ಹೋಯಿತು. ನೀರು ಕಂಡರೆ ಜನ ಬೆಚ್ಚುವ ಸ್ಥಿತಿ ನಿರ್ಮಾಣವಾಯಿತು. ಆದರೆ ಇಲ್ಲಿನ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಮಾತ್ರ ಈ ಮಳೆ ವರವಾಗಿ ಪರಿಣಮಿಸಿದೆ. ಸೊಗಸು ಮನೆ ಮಾಡಿದೆ.
ಶಿವಮೊಗ್ಗ(ಆ.28): ಈ ಬಾರಿಯ ಮುಂಗಾರಿನ ಆರ್ಭಟಕ್ಕೆ ಇಡೀ ನಾಡು ನಲುಗಿತು. ಮಲೆನಾಡು ಜರ್ಝರಿತವಾಯಿತು. ಶಿವಮೊಗ್ಗ ನಗರ ಅಕ್ಷರಶಃ ಮುಳುಗಿ ಹೋಯಿತು. ನೀರು ಕಂಡರೆ ಜನ ಬೆಚ್ಚುವ ಸ್ಥಿತಿ ನಿರ್ಮಾಣವಾಯಿತು. ಆದರೆ ಇಲ್ಲಿನ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಮಾತ್ರ ಈ ಮಳೆ ವರವಾಗಿ ಪರಿಣಮಿಸಿದೆ. ಸೊಗಸು ಮನೆ ಮಾಡಿದೆ.
ಪ್ರತಿ ವರ್ಷವೂ ನೀರಿನ ಕೊರತೆಯಿಂದ ಹಾಹಾಕಾರ ಎದುರಿಸುತ್ತಿದ್ದ ತ್ಯಾವರೆಕೊಪ್ಪ ಸಿಂಹಧಾಮದಲ್ಲಿನ ಕೆರೆಕಟ್ಟೆಗಳು, ಸಣ್ಣ ಪುಟ್ಟಹೊಂಡಗಳು ಭರ್ತಿಯಾಗಿ ಇಡೀ ವರ್ಷಕ್ಕೆ ಬೇಕಾದಷ್ಟುನೀರು ಸಂಗ್ರಹವಾಗಿದೆ. ಹಲವು ವರ್ಷದ ನಂತರ ಇದೇ ಮೊದಲ ಬಾರಿಗೆ ಸಫಾರಿಯಲ್ಲಿ ನೀರಿನ ಚಿಲುಮೆ ಕಾಣಿಸಿದೆ.
ಚಿಕ್ಕಮಗಳೂರು: ಬೆಳೆ ಮಾತ್ರವಲ್ಲ, ಕೃಷಿಭೂಮಿಯೂ ನಾಶ 182 ಕೋಟಿಗೂ ಅಧಿಕ ನಷ್ಟ
ಕೆರೆ ತುಂಬುತ್ತಲೇ ಇರಲಿಲ್ಲ..!:
ತ್ಯಾವರೆಕೊಪ್ಪ ಸಿಂಹಧಾಮ ಆರಂಭಗೊಂಡಿದ್ದು 1984ರಲ್ಲಿ. ಆಗಿನ ಸ್ಥಿತಿ ಏನಿತ್ತೋ ಏನೋ, ಬರಡು ಜಾಗದಲ್ಲಿ ಈ ಸಿಂಹಧಾಮ ಆರಂಭಿಸಲಾಯಿತು. ಸುಮಾರು 250 ಹೆ. ಪ್ರದೇಶದ ವಿಸ್ತಾರವಾದ ಜಾಗದಲ್ಲಿ ಸಹಜ ನೀರಿನ ಹರಿವಾಗಲೀ, ದೊಡ್ಡ ದೊಡ್ಡ ಕೆರೆಗಳಾಗಲೀ ಇರಲಿಲ್ಲ. ಬಳಿಕ ನಿರ್ಮಿಸಿದ ಕೃತಕ ಕೆರೆಗಳಾಗಲೀ, ಹೊಂಡಗಳಾಗಲೀ ಎಂದೂ ತುಂಬಲೇ ಇಲ್ಲ. ಇಷ್ಟುದೊಡ್ಡ ಪ್ರದೇಶಕ್ಕೆ ಬೇಕಾಗುವಷ್ಟುಮಳೆ ನೀರು ಇಲ್ಲಿ ಸಂಗ್ರಹವಾಗುತ್ತಲೇ ಇರಲಿಲ್ಲ. ಪ್ರತಿ ವರ್ಷ ವಿಸ್ತಾರಗೊಳ್ಳುತ್ತಲೇ ಸಾಗಿರುವ ಸಿಂಹಧಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿ ಕಾಡುತ್ತಲೇ ಇದೆ. ಇರುವ ಏಕೈಕ ಕೊಳವೆ ಬಾವಿ ಸಹ ನೀರಿಲ್ಲದೆ ಬತ್ತಿ ಹೋಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಕೆಲ ತಿಂಗಳುಗಳ ಕಾಲ ಇಲ್ಲಿನ ಪ್ರಾಣಿ, ಪಕ್ಷಿಗಳ ನೀರಿನ ಅವಶ್ಯಕತೆಗಾಗಿ ಪಾಲಿಕೆಯಿಂದ ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ಅನಿವಾರ್ಯ ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿತ್ತು.
ಮೈತ್ರಿಕೂಟ ದೋಸ್ತಿ ಅಲ್ಲ, ದುಷ್ಟಕೂಟ: ಸಚಿವ ಸಿ.ಟಿ.ರವಿ
ಆಗಸ್ಟ್‌ನಲ್ಲಿ ದಾಖಲೆ ಎಂಬಂತೆ ಸುರಿದ ಮಳೆಯಿಂದಾಗಿ ಇಲ್ಲಿರುವ 22 ಕ್ಕೂ ಹೆಚ್ಚು ಹೊಂಡ ಹಾಗೂ ಸಣ್ಣ ಪ್ರಮಾಣದ ಕೆರೆಗಳು ಭರ್ತಿಯಾಗಿವೆ. ನೀರಿನ ಸೆಲೆ ಎಲ್ಲೆಲ್ಲೂ ಕಾಣುತ್ತಿದೆ. ಮರಗಿಡಗಳು ಹಸುರಿನಿಂದ ಕಂಗೊಳಿಸುತ್ತಿವೆ.
ಸಿಂಹಧಾಮದಲ್ಲಿ ಮಳೆ ಸೊಗಸು:
ಪ್ರಸ್ತುತ ಸಫಾರಿಯಲ್ಲಿ ಹುಲಿ, ಸಿಂಹ, ಚಿರತೆ, ಕರಡಿ, ಸಾಂಬಾರ್, ಮೊಸಳೆ ಸೇರಿದಂತೆ ವಿವಿಧ ಜಾತಿಯ 315 ಪ್ರಾಣಿ, ಪಕ್ಷಿಗಳು ಆಸರೆ ಪಡೆದಿವೆ. ಇವುಗಳಲ್ಲಿ ಹುಲಿ, ಜಿಂಕೆ ಮತ್ತು ಚಿರತೆ ಸೇರಿದಂತೆ ಬಹಳಷ್ಟುಪ್ರಾಣಿ ಹಾಗೂ ಪಕ್ಷಿಗಳಿಗೆ ನೀರೆಂದರೆ ಅಚ್ಚುಮೆಚ್ಚು. ಹಲವು ವರ್ಷಗಳಿಂದ ಸಹಜ ನೀರಿನ ಸಂಗ್ರಹವನ್ನೇ ಕಾಣದಿದ್ದ ಈ ಸಫಾರಿಯ ಪ್ರಾಣಿಗಳಿಗೆ ಈ ಬಾರಿ ನೀರು ಖುಷಿ ತರಲಿದೆ. ಇಲಾಖೆಯೂ ಖುಷಿಯಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಾಡದು ಎಂದು. ಒಟ್ಟಾರೆ ಇಡೀ ನಾಡಿಗೆ ಕಾಡಿದ ಮುಂಗಾರಿನ ಮುನಿಸು ಇಲ್ಲಿಗೆ ಮಾತ್ರ ಸೊಗಸಾಗಿ ಪರಿಣಮಿಸಿದೆ.
-ಗೋಪಾಲ್ ಯಡಗೆರೆ