ದೇವಾಲಯಗಳ ನಾಡಿನಲ್ಲಿ ರಣ ರಾಜಕಾರಣ

ರಾಜಕೀಯ ಜಿದ್ದಾಜಿದ್ದಿಯಲ್ಲಿ ರಾಜ್ಯದ ಗಮನಸೆಳೆಯುವ ನಾಗಮಂಗಲದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡರಿಗೆ 2023ರ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.

politics War heated Up  in  Nagamangala snr

ಕರಡಹಳ್ಳಿ ಸೀತಾರಾಮು

 ನಾಗಮಂಗಲ (ಅ.28):ರಾಜಕೀಯ ಜಿದ್ದಾಜಿದ್ದಿಯಲ್ಲಿ ರಾಜ್ಯದ ಗಮನಸೆಳೆಯುವ ನಾಗಮಂಗಲದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಶಾಸಕ ಸುರೇಶ್‌ಗೌಡ, ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಮಾಜಿ ಸಂಸದ ಎಲ್‌.ಆರ್‌. ಶಿವರಾಮೇಗೌಡರಿಗೆ 2023ರ ಚುನಾವಣೆ ಅಗ್ನಿಪರೀಕ್ಷೆಯಾಗಿದೆ.

ಈ ಮೂವರೂ ದಿಗ್ಗಜ ನಾಯಕರಿಗೆ ಸೆಡ್ಡು ಹೊಡೆಯಲು ಕ್ಷೇತ್ರಕ್ಕೆ ಹೊಸ ಮುಖಗಳಾಗಿ ಪರಿಚಿತರಾಗಿರುವ ಸಮಾಜ ಸೇವಕ ಫೈಟರ್‌ ರವಿ ಮತ್ತು ಅನಿಕೇತನ್‌ಗೌಡ ಚುನಾವಣೆಗೆ (Election) ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಚಲುವರಾಯ ಸ್ವಾಮಿಗೆ ಹೆಚ್ಚಿದ ವರ್ಚಸ್ಸು: ಕಳೆದ ವಿಧಾನಸಭಾ ಚುನಾವಣೆಯಲ್ಲಿ 47 ಸಾವಿರಕ್ಕೂ ಹೆಚ್ಚು ಮತಗಳ (Vote)  ಅಂತರದಿಂದ ಸೋಲನುಭವಿಸಿದ್ದ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ನಂತರದಲ್ಲಿ ನಡೆದ ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್‌ ಪಕ್ಷದ ನಾಯಕರಿಗೆ ತೀವ್ರ ಮುಖಭಂಗ ಉಂಟುಮಾಡಿ ಜಿಲ್ಲೆ ಮತ್ತು ಕ್ಷೇತ್ರದೊಳಗೆ ತಮ್ಮ ವರ್ಚಸ್ಸು ಏನೆಂಬುದನ್ನು ವಿರೋಧಿಗಳಿಗೆ ತೋರಿಸಿಕೊಟ್ಟಿದ್ದಾರೆ.

ಇದಲ್ಲದೆ ವಿಧಾನಪರಿಷತ್‌ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ದಿನೇಶ್‌ಗೂಳೀಗೌಡ ಮತ್ತು ದಕ್ಷಿಣ ಪದÜವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಧು ಜಿ.ಮಾದೇಗೌಡರನ್ನು ತಮ್ಮ ರಾಜಕೀಯ ಚಾಣಕ್ಯ ತಂತ್ರ ಉಪಯೋಗಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಎಂಬ ಮಾತನ್ನು ಹುಸಿಗೊಳಿಸಿದ್ದಾರೆ.

ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ: 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಎನ್‌.ಚಲುವರಾಯಸ್ವಾಮಿ, ಜೆಡಿಎಸ್‌ನಿಂದ ಹಾಲಿ ಶಾಸಕ ಸುರೇಶ್‌ಗೌಡ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಇಬ್ಬರೂ ಈಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಜೊತೆಗೆ ಮತದಾರರ ಓಲೈಕೆ ಮಾಡುತ್ತಿದ್ದಾರೆ. ಇವರೊಂದಿಗೆ ಕಳೆದ 25ವರ್ಷಗಳಿಂದ ರಾಜಕೀಯ ಅಧಿಕಾರವಿಲ್ಲದೆ ಕೈಕಟ್ಟಿಕುಳಿತಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ತನ್ನಿಬ್ಬರು ವಿರೋಧಿಗಳನ್ನು ಶತಾಯಗತಾಯ ಸೋಲಿಸಿ ವಿಧಾನಸೌಧ ಪ್ರವೇಶಿಸುತ್ತೇನೆಂದು ಪಣತೊಟ್ಟು ತಮ್ಮ ರಾಜಕೀಯ ಜೀವನದ ಕೊನೆಯ ಹೋರಾಟಕ್ಕಿಳಿದಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಲಗ್ಗೆಯಿಟ್ಟು ಹಳೆಯ ಬೆಂಬಲಿಗರನ್ನು ಹುರಿದುಂಬಿಸುವ ಜೊತೆಗೆ ಹೊಸ ಕಾರ್ಯಕರ್ತರನ್ನು ಹುಟ್ಟುಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸುರೇಶ್‌ಗೌಡರಿಗೆ ಹೆಚ್ಚಿದ ವಿರೋಧಿಗಳು: ಶಾಸಕ ಸುರೇಶ್‌ಗೌಡರು ಮೂಲ ಜೆಡಿಎಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ತಮ್ಮ ಹಿಂಬಾಲಕರಿಗಷ್ಟೇ ಸೀಮಿತರಾಗಿದ್ದಾರೆ ಎಂದು ಸ್ವಪಕ್ಷದ ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಮನ್‌ಮುಲ್‌ ನಿರ್ದೇಶಕ ನೆಲ್ಲೀಗೆರೆ ಬಾಲು ಸೇರಿದಂತೆ ಹಲವು ಮುಖಂಡರಿಂದ ಸುರೇಶ್‌ಗೌಡರ ವಿರುದ್ಧ ಅಪಸ್ವರದ ಮಾತುಗಳು ಕೇಳಿಬರುತ್ತಿವೆ. ಮುಂದಿನ ಚುನಾವಣೆಯಲ್ಲಿ ಸುರೇಶ್‌ಗೌಡರಿಗೆ ಜೆಡಿಎಸ್‌ ಟಿಕೆಟ್‌ ತಪ್ಪಿಸಲು ಸಮಾಜ ಸೇವಕ ಫೈಟರ್‌ರವಿ, ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ, ಮನ್‌ಮುಲ್‌ನಿರ್ದೇಶಕ ನೆಲ್ಲೀಗೆರೆ ಬಾಲು ಸೇರಿದಂತೆ ಹಲವು ನಾಯಕರು ಈಗಾಗಲೇ ತಂತ್ರಗಾರಿಕೆ ನಡೆಸುತ್ತಿದ್ದಾರೆಂಬ ಮಾತುಗಳೂ ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಹಾಗಾಗಿ 2023 ಚುನಾವಣೆ ಶಾಸಕ ಸುರೇಶ್‌ಗೌಡರ ಪಾಲಿಗೆ ಕಬ್ಬಿಣದ ಕಡಲೆಯಾಗಬಹುದು.

ಎಲ್‌ಆರ್‌ಎಸ್‌ಗೆ ಕೊನೆಯ ಹೋರಾಟ: 2023ರ ಚುನಾವಣೆಯು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡರ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕ್ಷೇತ್ರದಲ್ಲಿ ತಮ್ಮದೇ ಆದ 40 ಸಾವಿರ ಮತಗಳಿದ್ದು, ಈ ಚುನಾವಣೆಯಲ್ಲಿ ಜನರು ನನ್ನ ಕೈಬಿಡುವುದಿಲ್ಲವೆಂಬ ಭರವಸೆಯೊಂದಿಗೆ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ತೆರಳಿ ಮತದಾರರನ್ನು ಭೇಟಿಯಾಗುತ್ತಿದ್ದಾರೆ. ಗೆಲುವಿನ ಭರವಸೆಯೊಂದಿಗೆ ಮಿಂಚಿನ ಕ್ಷೇತ್ರದೊಳಗೆ ಪ್ರವಾಸ ನಡೆಸುತ್ತಿರುವ ಎಲ್‌ಆರ್‌ಎಸ್‌ಗೆ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ನಾಗಮಂಗಲದ ಟಿ.ಬಿ.ಬಡಾವಣೆಯ ಕೋಟೆ ಬೆಟ್ಟರಸ್ತೆಯಲ್ಲಿರುವ ಮನೆಯ ವಾಸ್ತು ಸರಿಯಾಗಿಲ್ಲ. ಆ ಮನೆಗೆ ಹೋದ ಬಳಿಕ ರಾಜಕೀಯ ಏಳಿಗೆ ಕಾಣಲಾಗಲಿಲ್ಲ ಎಂಬ ಕಾರಣಕ್ಕೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೂತನವಾಗಿ ಹೊಸ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಚುನಾವಣಾ ಉದ್ದೇಶಕ್ಕಾಗಿಯೇ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ತಮ್ಮ ರಾಜಕೀಯ ಕಾರ್ಯಸ್ಥಾನವನ್ನಾಗಿಯೂ ಮಾಡಿಕೊಂಡಿದ್ದಾರೆ.

ಜನರ ವಿಶ್ವಾಸ ಗಳಿಸಲು ಕಸರತ್ತು: ಕಳೆದ ಮೂರು ಚುನಾವಣೆ ಸಂದರ್ಭದಲ್ಲಿ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಶಾಸಕ ಸುರೇಶ್‌ಗೌಡ ನನಗೆ ಮೋಸ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸುರೇಶ್‌ಗೌಡರನ್ನು ಸೋಲಿಸದೆ ನಾನು ವಿರಮಿಸುವುದಿಲ್ಲ ಎಂಬ ಹಠಕ್ಕೆ ಸಮಾಜಸೇವಕ ಫೈಟರ್‌ ರವಿ ಬಿದ್ದಿದ್ದಾರೆ. ಆರು ತಿಂಗಳ ಹಿಂದಷ್ಟೇ ಆಕಸ್ಮಿಕವಾಗಿ ಕ್ಷೇತ್ರಕ್ಕೆ ಬಂದಿರುವ ಮಲ್ಲಿಕಾರ್ಜುನ್‌ (ಫೈಟರ್‌ರವಿ) ಸಮಾಜ ಸೇವೆ ಆರಂಭಿಸಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮತ್ತು ಬೇಡಿಕೆಯಿರುವ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯವಾದ ಪರಿಕರಗಳನ್ನು ಕಲ್ಪಿಸುವ ಜೊತೆಗೆ ಹಳ್ಳಿಗಳ ದೇವಸ್ಥಾನ ಅಭಿವೃದ್ಧಿಗೆ ಮತ್ತು ಕಷ್ಟಎಂದು ಬರುವ ಬಡಜನರಿಗೆ ಆರ್ಥಿಕ ನೆರವು, ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲ ಹಳ್ಳಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ತಾಲೂಕಿನಾದ್ಯಂತ ಜನಮೆಚ್ಚುಗೆ ಗಳಿಸಲು ಪ್ರಯತ್ನ ನಡೆಸಿದ್ದಾರೆ.

ಸ್ವಚ್ಛ ನಾಗಮಂಗಲ ನಿರ್ಮಾಣಕ್ಕಾಗಿ ರಾಜಕೀಯಕ್ಷೇತ್ರ ಪ್ರವೇಶಿಸಿ 2023ರ ಚುನಾವಣೆಗೆ ಯಾವುದೇ ಪಕ್ಷ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಘೋಷಣೆ ಮಾಡುವ ಮೂಲಕ ವಿರೋಧಿ ರಾಜಕೀಯ ನಾಯಕರಿಗೆ ನಿದ್ದೆಗೆಡಿಸಿದ್ದಾರೆ.

ಕಳೆದ 2020ರ ಕೊರೋನಾ ಸಂದರ್ಭದಲ್ಲಿ ಕೊರೋನಾ ವಾರಿಯ​ರ್‍ಸ್ಗಳಿಗೆ ಉಚಿತವಾಗಿ ಆರೋಗ್ಯ ಸುರಕ್ಷತಾ ಮತ್ತು ಔಷಧ ಕಿಟ್‌ಗಳನ್ನು ನೀಡುವ ಮೂಲಕ ಸಮಾಜ ಸೇವೆ ಮಾಡುತ್ತೇನೆಂದು ಬಂದಿದ್ದ ತಾಲೂಕಿನ ದೇವರಮಲ್ಲನಾಯ್ಕನಹಳ್ಳಿ ಗ್ರಾಮದ ದಿವಂಗತ ವಿ.ಎನ್‌.ಗೌಡರ ಮೊಮ್ಮಗ ಅನಿಕೇತನ್‌ಗೌಡ ಎಂಬ ಯುವಕ ಜಿದ್ದಾಜಿದ್ದಿನ ಚುನಾವಣಾ ಅಖಾಡದಲ್ಲಿ ಸೆಣಸಾಡುವುದು ಬಹಳ ಕಷ್ಟಎಂಬುದು ಗೊತ್ತಿದ್ದರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾನೂ ಸಹ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಪಟ್ಟಣದಲ್ಲಿ ಜನಸ್ಪಂದನ ಕೇಂದ್ರದ ಹೆಸರಿನಲ್ಲಿ ಕಚೇರಿ ತೆರೆದಿದ್ದಾರೆ.

ಊಹೆಗೆ ಸಿಗುತ್ತಿಲ್ಲ: ತಾಲೂಕಿನಲ್ಲಿ ಈವರೆಗೂ ತ್ರಿಕೋನ ಸ್ಪರ್ಧೆಯಲ್ಲಿ ನಡೆಯುತ್ತಿದ್ದ ಸಾರ್ವತ್ರಿಕ ಚುನಾವಣೆ 2023ರಲ್ಲಿ ಯಾವ ಮಟ್ಟದಲ್ಲಿ ನಡೆಯಬಹುದೆಂಬುದನ್ನು ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ಸುರೇಶ್‌ಗೌಡ ಹಾಗೂ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಈ ಮೂವರೂ ನಾಯಕರಿಗೆ ಪ್ರತಿಷ್ಟೆಯ ಪ್ರಶ್ನೆಯಾದರೆ, ದೀಪಾವಳಿ ಮುನ್ನಾ ದಿನವಷ್ಟೇ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಿಸಿರುವ ಸಮಾಜ ಸೇವಕ ಫೈಟರ್‌ರವಿ ಮಾತ್ರ ನಾನು ನೇರವಾದಿ, ನನ್ನ ನಾಯಕತ್ವ ಮತ್ತು ಸರಳ ವ್ಯಕ್ತಿತ್ವವನ್ನು ಕ್ಷೇತ್ರದ ಮತದಾರರು ಬೆಂಬಲಿಸುವರೆಂಬ ವಿಶ್ವಾಸವಿದೆ. ಸೋಲು-ಗೆಲುವು ಎರಡಕ್ಕೂ ಸಿದ್ಧನಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಹೇಳುತ್ತಿದ್ದಾರೆ. ಚುನಾವಣೆಗೆ ಇನ್ನೂ ಆರೇಳು ತಿಂಗಳಿರುವಾಗಲೇ ನಾಗಮಂಗಲ ಕ್ಷೇತ್ರದಲ್ಲಿ ಚುನಾವಣೆಯ ರಂಗು ಕಾವೇರುತ್ತಿದ್ದು, ಜನರಲ್ಲಿಯೂ ಸಹ ತೀವ್ರ ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios