ಅಕ್ರಮದಲ್ಲಿ ಪಾಲ್ಗೊಂಡಿರುವ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟರೊಳಗೆ ಎ ಖಾತಾ ರದ್ದು ಮಾಡದಂತೆ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಂದ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.

ಬೆಂಗಳೂರು(ಜು.25): ಬಿಬಿಎಂಪಿ ವ್ಯಾಪ್ತಿಯಲ್ಲಿ 45 ಸಾವಿರ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತೆ ನೀಡಿರುವುದು ಪತ್ತೆಯಾಗಿದ್ದು, ಇದೀಗ ಆ ‘ಎ’ ಖಾತಾಗಳನ್ನು ರದ್ದು ಮಾಡುವ ಕುರಿತಂತೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಅಷ್ಟರೊಳಗೆ ಖಾತಾ ರದ್ದು ಪ್ರಕ್ರಿಯೆ ಕೈಬಿಡುವಂತೆ ಹಾಗೂ ಅಕ್ರಮದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.

ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವ 45,133 ಪ್ರಕರಣಗಳು ಪತ್ತೆಯಾಗಿವೆ. ಹೀಗೆ ಪತ್ತೆಯಾಗಿರುವ ಎ ಖಾತಾ ಆಸ್ತಿಗಳನ್ನು ಬಿ ಖಾತಾ ವಹಿಗೆ ಮರಳಿ ಸೇರ್ಪಡೆ ಮಾಡುವಂತೆ ಎಲ್ಲ ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಅದಾದ ನಂತರ ಅಕ್ರಮದಲ್ಲಿ ಪಾಲ್ಗೊಂಡಿರುವ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟರೊಳಗೆ ಎ ಖಾತಾ ರದ್ದು ಮಾಡದಂತೆ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಂದ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.

BBMP: ಬರೊಬ್ಬರಿ 45 ಸಾವಿರ ಆಸ್ತಿಗೆ ಅಕ್ರಮ ‘ಎ’ ಖಾತಾ!

ಈ ವರ್ಷಾಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈಗ ಅಕ್ರಮವಾಗಿ ಎ ಖಾತಾ ಪಡೆದಿರುವ ಆಸ್ತಿಗಳಿಗೆ ಮತ್ತೆ ಬಿ ಖಾತಾ ನೀಡುವುದರಿಂದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಎ ಖಾತಾ ರದ್ದು ಪ್ರಕ್ರಿಯೆ ನಡೆಸದಂತೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರು ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.