ವರದಿ : ಜಿ.ಎಲ್‌. ಶಂಕರ್‌

 ಚಿಂತಾಮಣಿ (ಅ.15):  ಕಳೆದ ಎರಡು ಅವಧಿಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿರುವ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯೆಲ್ಲಿ ಮಾತ್ರ ಸಂಪೂರ್ಣ ವಿಫಲವಾಗುತ್ತಿದ್ದು, ಈ ಪರಂಪರೆ ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿಯೂ ಮುಂದುವರಿಯಲಿದೆಯೇ ಅಥವಾ ಮಾಜಿ ಶಾಸಕರ ವಿರುದ್ಧ ಗೆಲುವು ಸಾಧಿಸಲಿದ್ದಾರೆಯೇ ಎಂಬ ಲೆಕ್ಕಾಚಾರಗಳು ತಾಲೂಕಿನಾದ್ಯಂತ ತೀವ್ರ ಚರ್ಚೆ ನಡೆಯುತ್ತಿದೆ.

ಶೀಘ್ರದಲ್ಲಿಯೇ ತಾಪಂ ಮತ್ತು ಜಿಪಂ ಚುನಾವಣೆಗಳು ಎದುರಾಗಲಿದ್ದು, ಈ ಚುನಾವಣೆಗಳಿಗೆ ಮಾರ್ಗಸೂಚಿಯಂತೆ ಇಷ್ಟರಲ್ಲೇ ನಡೆಯಲಿರುವ ಗ್ರಾಪಂ ಚುನಾವಣೆಗಳತ್ತ ಪ್ರಸ್ತುತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲದೆ ಗ್ರಾಪಂ ಚುನಾವಣೆಗಳ ದಿನಾಂಕ ಇನ್ನೂ ಘೋಷಣೆಯಾಗದಿದ್ದರೂ ಗ್ರಾಪಂ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದ್ದು, ಪ್ರಸ್ತುತ ಪ್ರಕಟವಾಗಿರುವ ಮೀಸಲಾತಿಯಂತೆ ತಮ್ಮ ಪಕ್ಷ ಯಾವ ಅಭ್ಯರ್ಥಿಯನ್ನು ಬೆಂಬಲಿಸಿದರೆ ಎಂಬ ಲೆಕ್ಕಾಚಾರದಲ್ಲಿ ನಾಯಕರು ನಿರತರಾಗಿದ್ದಾರೆ.

ಜೆಡಿಎಸ್‌ನ 10 ಮುಖಂಡರು ಬಿಜೆಪಿಗೆ : ಬಿರುಸಾಯ್ತು ರಾಜಕೀಯ ...

ಹಳ್ಳಿಯಲ್ಲಿ ಬಿರುಸುಗೊಂಡ ರಾಜಕೀಯ:

ಗ್ರಾಪಂ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲವಾದರೂ ಮುಂದೆ ಎದುರಾಗಲಿರುವ ತಾಪಂ, ಜಿಪಂ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೆ ಗ್ರಾಮಮಟ್ಟದ ಅಧಿಕಾರ ಅತಿ ಮುಖ್ಯವಾಗಿದೆ. ಹಾಗಾಗಿ ಪಕ್ಷದ ಚಿಹ್ನೆ ಇಲ್ಲದಿದ್ದರೂ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ನಾಯಕರು ತೀವ್ರ ಕಸರತ್ತು ನಡೆಸುವುದು ಸಾಮಾನ್ಯವಾಗಿದೆ.

ಪ್ರಸ್ತುತ ಪರಿಸ್ಥಿತಿ ಏನು?:

ಈಗ ಮತ್ತೆ ಗ್ರಾಪಂ ಚುನಾವಣೆ ಎದುರಾಗಿದ್ದು, ಶೀಘ್ರದಲ್ಲಿಯೇ ಚುನಾವಣಾ ದಿನಾಂಕ ಘೋಷಣೆಯಾಗುವ ಎಲ್ಲ ಸೂಚನೆಗಳಿವೆ. ಹಾಗಾಗಿ ಶತಾಯಗತಾಯ ಹೆಚ್ಚಿನ ಸ್ಥಾನಗಳಲ್ಲಿಯ ಗೆಲ್ಲುವ ಮೂಲಕ ಮಾಜಿ ಶಾಸಕರಿಗೆ ಮುಖಭಂಗ ಮಾಡಬೇಕು ಎಂಬ ಉದ್ದೇಶದೊಂದಿಗೆ ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಈಗಾಗಲೇ ಗ್ರಾಮಮಟ್ಟದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಮಾಜಿ ಶಾಸಕ ಸುಧಾಕರ್‌ ಅವರಿಗೆ ಈಗಾಗಲೇ ಗ್ರಾಮಮಟ್ಟದಲ್ಲಿ ನಾಯಕರು ಸಿದ್ಧವಾಗಿದ್ದು, ಸ್ಥಳೀಯ ನಾಯಕರೇ ತಮ್ಮ ಗ್ರಾಮದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದು, ಕಳೆದ ಚುನಾವಣೆಯ ಫಲಿತಾಂಶ ಪುನರಾವರ್ತೆಯಾಗಲು ಶ್ರಮಿಸುವಂತೆ ಮಾಜಿಶಾಸಕರು ತಮ್ಮ ಬೆಂಬಲಿಗರಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಹಿರಿಯ ಮುಖಂಡಗೆ ಆಹ್ವಾನ ನೀಡಿದ ಡಿಕೆಶಿ : ಸದ್ಯಕ್ಕೆ ಬರಲ್ಲ ಎಂದ ನಾಯಕ .

ಕಳೆದ ಚುನಾವಣೆಯಲ್ಲಿ ಯಾರ ಬಲ ಎಷ್ಟು?:  ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 35 ಗ್ರಾಪಂಗಳಿದ್ದು, 281 ಗ್ರಾಪಂ ಕ್ಷೇತ್ರಗಳು ಮತ್ತು 572 ಗ್ರಾಪಂ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಆದರೆ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ 5 ಗ್ರಾಪಂಗಳು ಶಿಡ್ಲಘಟ್ಟವಿಧಾನಸಭಾ ಕ್ಷೇತ್ರಕ್ಕೆ ಸೇರಿವೆ. ಕಳೆದ ಚುನಾವಣೆಯಲ್ಲಿ ಒಟ್ಟು 35 ಗ್ರಾಪಂಗಳಲ್ಲಿ 28 ಗ್ರಾಪಂಗಳನ್ನು ಮಾಜಿ ಶಾಸಕ ಸುಧಾಕರ್‌ ಬಣ ಗೆದ್ದಿದ್ದರೆ, ಕೇವಲ 7 ಗ್ರಾಪಂಗಳನ್ನು ಮಾತ್ರ ವಶಕ್ಕೆ ಪಡೆಯುವ ಮೂಲಕ ಹಾಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತೀವ್ರ ಮುಖಭಂಗ ಅನುಭವಿಸಿದ್ದರು.

ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸುತ್ತಿರುವ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಅತ್ಯಲ್ಪ ಮತಗಳ ಅಂತರದಿಂದ ಪರಾಭವವಾಗುತ್ತಿದ್ದು, ಪ್ರಸ್ತುತ ಎದುರಾಗಲಿರುವ ಗ್ರಾಪಂ ಚುನಾವಣೆಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.