ಬೆಂಗಳೂರು [ಸೆ.15]:  ದೂರು ನೀಡಲು ಅಥವಾ ಪ್ರಕರಣವೊಂದರ ವಿಚಾರಣೆಗಾಗಿ ನಿಮ್ಮ ಪುಟ್ಟಮಕ್ಕಳೊಂದಿಗೆ ಠಾಣೆಗೆ ಹೋಗುತ್ತಿದ್ದೀರಾ...?

ಮಕ್ಕಳನ್ನು ಠಾಣೆಗೆ ಕರೆದೊಯ್ಯಲು ಇನ್ನುಮುಂದೆ ಆತಂಕ ಪಡುವ ಅಗತ್ಯವಿಲ್ಲ, ಯಾಕೆಂದರೆ ಠಾಣೆಯಲ್ಲೆ ಮಕ್ಕಳಿಗಾಗಿ ‘ಮಕ್ಕಳ ಆಟದ ಮನೆ’ (ಚಿಲ್ಡ್ರನ್ಸ್‌ ಪ್ಲೇ ಹೋಂ) ಇರಲಿದೆ. ಇಂತಹದೊಂದು ವಿನೂತನ ಸೌಲಭ್ಯ ಕಲ್ಪಿಸುವ ಮೂಲಕ ರಾಜಧಾನಿ ಪೊಲೀಸರು ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ಆಗ್ನೇಯ ವಿಭಾಗದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಮೊದಲ ಬಾರಿಗೆ ಈ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹೊಸ ಯೋಜನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್‌ ಅವರು ಮಕ್ಕಳೊಂದಿಗೆ ನೂತನ ಚಿಲ್ಡ್ರನ್ಸ್‌ ಪ್ಲೇ ಹೋಂಗೆ ಶನಿವಾರ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಆಗ್ನೇಯ ವಿಭಾಗದ ಎಲ್ಲ ಠಾಣೆಯಲ್ಲೂ ‘ಚಿಲ್ಡ್ರನ್ಸ್‌ ಪ್ಲೇ ಹೋಂ’ ತೆರೆಯಲಾಗುವುದು ಎಂದು ಇಶಾಪಂತ್‌ ಇದೇ ವೇಳೆ ತಿಳಿಸಿದರು.

ಮನೆಯಲ್ಲಿ ಏನಿದೆ!:

ಪ್ಲೇ ಹೋಂನಲ್ಲಿ ಮಕ್ಕಳನ್ನು ಆಕರ್ಷಿಸುವ ಪ್ರಾಣಿ, ಪಕ್ಷಿ, ಗಿಡ ಮರ ಸೇರಿದಂತೆ ಹಲವು ರೀತಿಯ ಗೋಡೆಯ ಮೇಲೆ ಚಿತ್ರ ಬಿಡಿಸಲಾಗಿದೆ. ಮಕ್ಕಳು ಆಟ ಆಡಲು ಅಗತ್ಯವಿರುವ ಎಲ್ಲ ರೀತಿಯ ಆಟದ ಸಾಮಾನು, ಗೊಂಬೆಗಳನ್ನು ಇಡಲಾಗಿದೆ. ಸಂಪೂರ್ಣವಾಗಿ ಖಾಸಗಿ ಪ್ಲೇಂ ಹೋಂನಂತೆ ಇಲ್ಲಿಯೂ ಸೌಲಭ್ಯ ಇದೆ. ಮಕ್ಕಳ ಸುರಕ್ಷತೆಗೂ ವ್ಯವಸ್ಥೆ ಮಾಡಲಾಗಿದೆ ಎಂದು ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಇನ್ಸ್‌ಪೆಕ್ಟರ್‌ ರಾಘವೇಂದ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ದೂರುದಾರರು ಹಾಗೂ ಇನ್ನಿತರ ಕಾರಣಗಳಿಗೆ ಠಾಣೆಗೆ ಬರುವ ಪೋಷಕರು ತಮ್ಮ ಜೊತೆ ಮಕ್ಕಳನ್ನು ಕೂಡ ಠಾಣೆಗೆ ಬರುವುದು ಸರ್ವೆ ಸಾಮಾನ್ಯ ಆಗಿದೆ. ಠಾಣೆಗಳಿಗೆ ಭೇಟಿ ನೀಡಿದಾಗ ಮಕ್ಕಳು ಠಾಣೆಗೆ ಬರುವುದನ್ನು ನೋಡಿದ್ದೆ. ‘ಪೊಲೀಸ್‌ ಠಾಣೆ ಭಯವಲ್ಲ, ಅದೊಂದು ಭರವಸೆ’ ಎಂಬ ಭಾವನೆಯನ್ನು ಮೂಡಿಸಿ, ಮನೆಯ ವಾತಾವರಣವನ್ನು ಕಲ್ಪಿಸುವ ಸಲುವಾಗಿ ಇಂತಹದೊಂದು ಜನ ಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಜಾರಿಗೆ ತರಲು ಯತ್ನಿಸಲಾಗಿದೆ ಎಂದು ಡಿಸಿಪಿ ಇಶಾಪಂತ್‌ ತಿಳಿಸಿದರು.

ಆಗ್ನೇಯ ವಿಭಾಗದ ಎಲ್ಲ ಠಾಣೆಗಳಲ್ಲೂ ‘ಮಕ್ಕಳ ಮನೆ’ ಯೋಜನೆ ಜಾರಿಗೆ ತರಲಾಗುವುದು. ಶೀಘ್ರದಲ್ಲೇ ಕೋರಮಂಗಲ ಠಾಣೆಯಲ್ಲಿ ಮಕ್ಕಳ ಮನೆ ಕೊಠಡಿ ಉದ್ಘಾಟನೆ ನೆರವೇರಲಿದೆ ಎಂದು ಇಶಾಪಂತ್‌ ಮಾಹಿತಿ ನೀಡಿದರು.

ಪ್ಲೇ ಹೋಂಗೆ ಅಗತ್ಯವಿರುವ ವಸ್ತುಗಳನ್ನು ಅದಕ್ಕೆ ಬೇಕಾದ ವೆಚ್ಚವನ್ನು ದಾನಿಗಳು ನೀಡಿದ್ದಾರೆ. ದಾನಿಗಳ ನೆರವಿನಿಂದ ಠಾಣೆಯಲ್ಲಿ ‘ಚಿಲ್ಡ್ರನ್ಸ್‌ ಪ್ಲೇ ಹೋಂ’ ನಿರ್ಮಿಸಲಾಗಿದೆ. ಸ್ಥಳೀಯ ನಿವಾಸಿಗಳು ತಮ್ಮ ಮಕ್ಕಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆ ತಂದ ಪೊಲೀಸರ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಶಾಲಾ ಮಕ್ಕಳು ಪಾಲ್ಗೊಳ್ಳುವ ಮೂಲಕ ಕೆಲ ಕಾಲ ಪ್ಲೇ ಹೋಂನಲ್ಲಿ ಆಟವಾಡಿದರು.

ಈ ಹಿಂದೆ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರು ದಕ್ಷಿಣ ವಿಭಾಗದಲ್ಲಿ ಪೊಲೀಸರ ಒತ್ತಡ ನಿವಾರಣೆ ಹಾಗೂ ಅವರ ಕೌಶಲ್ಯ ಹೆಚ್ಚಿಸುವ ಸಲುವಾಗಿ ಠಾಣೆಯಲ್ಲಿಯೇ ಗ್ರಂಥಾಲಯವನ್ನು ತೆರೆದಿದ್ದರು. ಠಾಣೆಯಲ್ಲಿ ಗ್ರಂಥಾಲಯ ತೆರೆದ ಅಂದಿನ ಡಿಸಿಪಿ ಕಾರ್ಯ ವೈಖರಿಗೆ ಮೆಚ್ಚುಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು.

ಠಾಣೆಯಲ್ಲಿ ಏಕೆ ಪ್ಲೇ ಹೋಂ?

ಕೌಟುಂಬಿಕ ಕಲಹ ಸೇರಿದಂತೆ ಬೇರೆ-ಬೇರೆ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಠಾಣೆಗೆ ಜೊತೆಯಲ್ಲಿ ಕರೆ ತರುತ್ತಾರೆ. ಪೋಷಕರ ಕೌನ್ಸೆಲಿಂಗ್‌ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಠಾಣಾಧಿಕಾರಿಗಳು ಪೋಷಕರ ವಿರುದ್ಧ ಏರು ಧ್ವನಿಯಿಂದ ಮಾತನಾಡುವ ಸಂದರ್ಭ ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಿಗಾಗಿ ಠಾಣೆಯಲ್ಲಿಯೇ ಪ್ರತ್ಯೇಕ ಪ್ಲೇಂ ಹೋಂ ಮಾಡಿದರೆ ಮಕ್ಕಳನ್ನು ಅಲ್ಲಿಯೇ ಆಟ ಆಡಲು ಬಿಡಬಹುದು. ಪೋಷಕರನ್ನು ವಿಚಾರಣೆಗೊಳಪಡಿಸಲು ಸಹಾಯಕವಾಗುತ್ತದೆ. ಹೀಗಾಗಿ ಇಂತಹೊಂದು ನೂತನ ಜನ ಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಮಕ್ಕಳಿಗೆ ಠಾಣೆಯಲ್ಲಿ ನಡೆಯುವ ಘಟನೆಗಳ ಪರಿಣಾಮ ಬೀರಬಾರದು. ಜನ ಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಚಿಂತನೆ ನಡೆಸುವಾಗ ಇಂತಹದೊಂದು ಯೋಜನೆಯನ್ನು ಬಂದಿದ್ದು, ಎಲ್ಲರೊಂದಿಗೆ ಚರ್ಚಿಸಿ ಜಾರಿಗೆ ತರಲಾಗಿದೆ. ಈ ನೂತನ ವ್ಯವಸ್ಥೆಗೆ ನಗರ ಪೊಲೀಸ್‌ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಗ್ನೇಯ ವಿಭಾಗದ ಎಲ್ಲ ಠಾಣೆಯಲ್ಲಿ ಚಿಲ್ಡ್ರನ್ಸ್‌ ಪ್ಲೇ ಹೋಂ ಇರಲಿದೆ.

- ಇಶಾಪಂತ್‌, ಆಗ್ನೇಯ ವಿಭಾಗದ ಡಿಸಿಪಿ