ಧಾರವಾಡ(ಫೆ.06): ವಾಹನ ನೋಂದಣಿ ಮಾಡಿಸದೆ ಹಲವು ವರ್ಷಗಳಿಂದ ಚಾಲನೆ ಮಾಡುತ್ತಿದ್ದ  ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಶ್ರೀಕಾಂತ ಜಮನಾಳ ವಾಹನವನ್ನ ಧಾರವಾಡ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಹನ ನೋಂದಣಿ ಕಾಯ್ದೆ ಉಲ್ಲಂಘನೆಯ ಆರೋಪದಡಿ ವಾಹನವನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ವಾಹನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಪೋಸ್ಟರ್ ಹಚ್ಚಿಕೊಂಡು ವಾಹನ ಓಡಿಸುತ್ತಿದ್ದರು. 
ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಅಯುಕ್ತರಿಗೆ ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸುವ ಮೂಲಕ ಶ್ರೀಕಾಂತ ಜಮನಾಳ ಅವರ ವಾಹನವನ್ನ ವಶ ಪಡಿಸಿಕೊಳ್ಳಲಾಗಿದೆ. 

ಶ್ರೀಕಾಂತ ಜಮನಾಳ ಅವರು ತಮ್ಮ ವಾಹನಕ್ಕೆ 2015 ರಿಂದ 2020 ರವರೆಗೆ ನೋಂದಣಿ ಮಾಡಿಸದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟು ವರ್ಷಗಳ ಕಾಲ ಜಾಣ ಕುರುಡುತನ ತೋರಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಆರ್ ಟಿ ಒ ಅಧಿಕಾರಿಗಳ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ವಾಹನ ವಶಕ್ಕೆ ಪಡೆಯುವಂತೆ ಪೊಲೀಸ್ ಆಯುಕ್ತರು ಸೂಚಿಸಿಯೇ ಹಲವು ದಿನಗಳು ಕಳೆದಿದ್ದವು. ಆದರೆ ಪೊಲೀಸರು ನಿರಾಸಕ್ತಿ ತೋರಿದ್ದರು. ಇದರಿಂದಾಗಿ ಪೊಲೀಸ್ ಆಯುಕ್ತರು ಧಾರವಾಡ ಪೊಲೀಸ್ ಅಧಿಕಾರಿ ವರ್ಗದವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡು ಅಸಮಾಧಾನ ಹೊರ ಹಾಕಿದ್ದರು.

ಇದರಿಂದಾಗಿ ಕೊನೆಗೂ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ವಾಹನ ವಶಕ್ಕೆ ತೆಗೆದುಕೊಂಡು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಶ್ರೀಕಾಂತ ಜಮನಾಳ ವಿರುದ್ಧ ಮೊಕದ್ದಮೆ ಹೂಡಬೇಕೋ ಅಥವಾ ದಂಡವಿಧಿಸಿ ಪ್ರಕರಣ ಕೈ ಬಿಡಬೇಕೋ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಶ್ರೀಕಾಂತ್ ಜಮನಾಳ KA25 MB1617  ನಂಬರ್‌ನ ಟಾಟಾ ಸಫಾರಿ ಕಾರಿನಲ್ಲಿ ಓಡಾಡುತ್ತಿದ್ದರು. ಆದರೆ KA25 MB 1617 ನಂಬರ್ ಟಾಟಾ ಸಫಾರಿ ಕಾರಿನದ್ದಾಗಿರಲಿಲ್ಲ, ಬದಲಾಗಿ ಅದೊಂದು ಹುಂಡೈ ವೆರ್ನಾ ಕಾರಿನ ನಂಬರ್ ಆಗಿತ್ತು. ಹೀಗಾಗಿ ಪೊಲೀಸರು ಈ ವಾಹವನ್ನ ವಶ ಪಡಿಸಿಕೊಂಡಿದ್ದಾರೆ.

ಆದರೆ ಶ್ರೀಕಾಂತ್ ಜಮನಾಳ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ.‌ ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಆತನ ಪ್ರಭಾವಕ್ಕೆ ‌ಮಣಿದು ಪೊಲೀಸರು ಮೌನವಾಗಿದ್ದಾರಾ ಎಂಬ ಸಂಶಯ ಹುಟ್ಟಿಕೊಂಡಿದೆ. ಇಷ್ಟೊಂದು ರಾಜಾರೋಷವಾಗಿ ಫೋರ್ಜರಿ ‌ನಂಬರ್‌ನ ಕಾರಿನಲ್ಲಿ ಓಡಾಡಿದ್ರು ಈತನ ವಿರುದ್ಧ ಯಾಕೆ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್ ದಿಲೀಪ್ ಉತ್ತರಿಸಬೇಕಿದೆ.