Asianet Suvarna News Asianet Suvarna News

ಬೆಂಗಳೂರು: ಹೊಸ ವರ್ಷ ಸ್ವಾಗತಕ್ಕೆ ಪೊಲೀಸ್‌ ಬಿಗಿ ಭದ್ರತೆ

ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್‌ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.

Police Security to Welcome New Year 2024 in Bengaluru grg
Author
First Published Dec 31, 2023, 6:51 AM IST

ಬೆಂಗಳೂರು(ಡಿ.31): ನೂತನ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಂ.ಜಿ ರಸ್ತೆ ಸೇರಿದಂತೆ ರಾಜಧಾನಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್‌ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.

ನಗರದಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಬಿಂದು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಂದೋಬಸ್ತ್ ಬಗ್ಗೆ ಶನಿವಾರ ರಾತ್ರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಗರ ವ್ಯಾಪ್ತಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್‌ಸ್ಪೆಕ್ಟರ್‌, 600 ಪಿಎಸ್‌ಐ, 600 ಎಎಸ್‌ಐ, 1800 ಎಚ್‌ಸಿ, 5200 ಕಾನ್‌ಸ್ಟೇಬಲ್‌ಗಳು ಸೇರಿ ಒಟ್ಟು 8500 ಪೊಲೀಸರು ನಿಯೋಜಿತರಾಗಿದ್ದಾರೆ. ಇವರಲ್ಲದೆ ನಗರ ಸಶಸ್ತ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಸಹ ಪಾಲ್ಗೊಳ್ಳಲಿದ್ದಾರೆ.

ವರ್ಷಾಚರಣೆ: ಬೆಂಗ್ಳೂರಲ್ಲಿ ಮಧ್ಯರಾತ್ರಿ 1.30ರವರೆಗೂ ಮೆಟ್ರೋ ರೈಲು

ರಾತ್ರಿ 1 ಗಂಟೆ ಬಳಿಕ ಸಂಭ್ರಮಾಚರಣೆ ನಡೆಯುವ ಎಲ್ಲ ಹೋಟೆಲ್, ಪಬ್, ಹೋಟೆಲ್‌ಗಳ ಬಾಗಿಲು ಬಂದ್ ಮಾಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಇನ್ನು ವರ್ಷಾಚರಣೆಗೆ ಹೆಚ್ಚಿನ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್‌ ರಸ್ತೆ, ಕಬ್ಬನ್ ಪಾರ್ಕ್‌, ಟ್ರಿನಿಟಿ ಸರ್ಕಲ್‌, ಫೀನಿಕ್ಸ್‌ ಮಾಲ್‌, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್‌ ಹೋಟೆಲ್‌ಗಳು, ಪಬ್‌ಗಳು ಹಾಗೂ ಕ್ಲಬ್‌ಗಳು ಸೇರಿದಂತೆ ಇತರೆಡೆ ಜನರನ್ನು ನಿಯಂತ್ರಿಸಲು ಬಂದೋಬಸ್ತ್ ಪಿಕೆಟಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದ್ದಾರೆ.

ಎಂ.ಜಿ -ಬ್ರಿಗೇಡ್ ರಸ್ತೆಗೆ 3 ಸಾವಿರ ಪೊಲೀಸರು

ಬ್ರಿಗೇಡ್-ಎಂ.ಜಿ.ರಸ್ತೆಗಳ ವ್ಯಾಪ್ತಿಯಲ್ಲಿ 4 ಡಿಸಿಪಿಗಳು, 10 ಎಸಿಪಿಗಳು, 30 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜಿತರಾಗಿದ್ದಾರೆ. ಇವರಲ್ಲದೆ 250 ಸಿಸಿಟಿವಿ ಕ್ಯಾಮೆರಾಗಳು ಹಾಗೂ 16 ವೀಕ್ಷಣಾ ಗೋಪುರಗಳ ಮೂಲಕ ಕೂಡಾ ಖಾಕಿ ಹದ್ದಿನ ಕಣ್ಣಿಡಲಿದೆ. ಹಾಗೆಯೇ 18 ಮಹಿಳಾ ಸುರಕ್ಷತಾ ತಾಣ ತೆರೆಯಲಾಗಿದೆ.

ಮಹಿಳೆ, ಮಕ್ಕಳಸುರಕ್ಷತಾ ತಾಣ

ನೂತನ ವರ್ಷ ಸ್ವಾಗತಿಸುವ ಸಂಭ್ರಮದ ವೇಳೆ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ನಗರದ ಪ್ರಮುಖ ಸುಮಾರು 60 ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಸಾರಥ್ಯದಲ್ಲಿ ಸುರಕ್ಷತಾ ಸ್ಥಳಗಳು (ಹ್ಯೂಮೆನ್‌ ಸೆಫ್ಟಿ ಐಲ್ಯಾಂಡ್‌) ಹಾಗೂ ಮಕ್ಕಳ ಸುರಕ್ಷತೆಗೆ ಪೊಲೀಸ್ ಕಿಯೋಸ್ಕ್‌ಗಳನ್ನು ತೆರೆಯಲಾಗುತ್ತದೆ. ಮಕ್ಕಳು ನಾಪತ್ತೆ ಅಥವಾ ತುರ್ತು ಸೇವೆಗಳಿಗೆ ಈ ತಾಣಗಳು ಸ್ಪಂದಿಸುತ್ತವೆ.

ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ಬಂದ್

ಜನರ ನೂಕುನುಗ್ಗಲು ತಪ್ಪಿಸಲು ಭಾನುವಾರ ರಾತ್ರಿ 11ರಿಂದ 2 ಗಂಟೆವರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಈ ನಿಲ್ದಾಣದ ಬದಲಾಗಿ ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್‌ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಸಬಹುದು.

40 ಚೆಕ್‌ಪೋಸ್ಟ್‌, ವಿಶೇಷ ತಂಡಗಳು

ಹೊಸ ವರ್ಷಾಚರಣೆ ವೇಳೆ ವೀಲ್ಹಿಂಗ್‌ ಮಾಡುವವರು, ಪಾನಮತ್ತರಾಗಿ ಚಾಲಕರು ಮತ್ತು ಸವಾರರು ಹಾಗೂ ಡ್ರಗ್ಸ್ ವ್ಯಸನಿಗಳ ಮೇಲೆ ನಿಗಾವಹಿಸಲು ನಗರದ 40 ಕಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ವಾಹನವನ್ನು ತಪಾಸಣೆಗೊಳಪಡಲಿವೆ. ಅಲ್ಲದೆ ಸಂಚಾರ ವಿಭಾಗದ ಎಲ್ಲ ಠಾಣೆಗಳಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಿದ ಸರ್ಕಾರ: ನಂದಿಬೆಟ್ಟ, ದೇವರಾಯನದುರ್ಗಕ್ಕೆ ಪ್ರವೇಶ ನಿಷೇಧ

ಎಲ್ಲ ಮೇಲ್ಸೇತುವೆಗಳು ಬಂದ್‌

ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ಮೇಲ್ಸೇತುವೆ ಹೊರತುಪಡಿಸಿ ಡಿ.31ರಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಗರದ ಇನ್ನುಳಿದ ಎಲ್ಲ ಮೇಲ್ಸೇತುವೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ವಾಹನ ನಿಲುಗಡೆ ನಿಷೇಧ

ಡಿ.31ರಂದು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರಿಗೆ ನಡಿಗೆಯ ಮೂಲಕ ಏಕ ಮುಖ ಪ್ರವೇಶಕ್ಕೆ ಮಾತ್ರ ಅ‍ವಕಾಶವಿದ್ದು, ಎಂ.ಜಿ. ರಸ್ತೆಗೆ ಪ್ರವೇಶಿಸುವವರಿಗೆ ಅನಿಲ್ ಕುಂಬ್ಳೆ ಸರ್ಕಲ್ ಹಾಗೂ ಮೇಯೋ ಹಾಲ್‌ ಜಂಕ್ಷನ್ ಮೂಲಕ ಪ್ರವೇಶಿಸಬಹುದು. ಎಂ.ಜಿ.ರಸ್ತೆ, ಕಸ್ತೂರಿ ಬಾ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Follow Us:
Download App:
  • android
  • ios