ರಾಸಲೀಲೆ ಕೇಸ್ : ದಿನೇಶ್ ಮನೆಗೆ ಪೊಲೀಸ್ ಭದ್ರತೆ
ಇತ್ತ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಗಳು ಒಂದರ ಹಿಂದೆ ಒಂದು ಬಿಡುಗಡೆಯಾದವು. ಇದೇ ಬೆನ್ನಲ್ಲೇ ಹಲವು ರಾಜಕೀಯ ಮುಖಂಡರ ಮುಖವಾಡವೂ ಕಳಚುವ ಎಚ್ಚರಿಕೆ ನೀಡಿದ್ದು ಈ ನಿಟ್ಟಿನಲ್ಲಿ ದಿನೇಶ್ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ರಾಮನಗರ (ಮಾ.04): ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ನಿವಾಸಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಕನಕಪುರ ತಾಲೂಕಿನ ಕಲ್ಲಹಳ್ಳಿಯಲ್ಲಿ ದಿನೇಶ್ ಅವರಿಗೆ ಸೇರಿದ ಮೂರಂತಸ್ತಿನ ಮನೆಗೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಬಂದೋಬಸ್ತಿಗೆ ನಿಯೋಜಿಸಲಾಗಿದೆ. ಅಪರಿಚಿತರಿಂದ ಪ್ರಾಣ ಬೆದರಿಕೆ ಕರೆಗಳು, ಅನುಮಾನಾಸ್ಪದ ವ್ಯಕ್ತಿಗಳು ಮನೆ ಬಳಿ ತಿರುಗಾಡುತ್ತಿರುವ ಬಗ್ಗೆ ದಿನೇಶ್ ಅವರು ಎಸ್ಪಿ ಗಿರೀಶ್ ಅವರಿಗೆ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಿದ್ದರು.
ಸೀಡಿ ಹರಿಬಿಟ್ಟವರ ವಿರುದ್ಧ 100 ಕೋಟಿ ಕೇಸ್!
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಗಿರೀಶ್ ರವರು, ದಿನೇಶ್ ಕಲ್ಲಹಳ್ಳಿಯವರು ತಮಗೆ ಪ್ರಾಣ ಬೆದರಿಕೆಯಿದ್ದು, ರಕ್ಷಣೆ ಒದಗಿಸುವಂತೆ ಕೋರಿ ಮೆಸೇಜ್ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದೇನೆ. ಅವರು ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಹೇಳಿದರು.