ಯಾದಗಿರಿ: ಕಳ್ಳಭಟ್ಟಿಗೆ ಯುವಕ ಬಲಿ ?
ಕಳ್ಳಭಟ್ಟಿ ತಯಾರಿಕೆ ಸ್ಥಳದ ಮೇಲೆ ದಾಳಿ ನಡೆಸಿದ ಪೊಲೀಸರು| ಯಾದಗಿರಿ ಸಮೀಪದ ಯರಗೋಳ ಗ್ರಾಮದ ರಾಮಲಿಂಗೇಶ್ವರ ಬೆಟ್ಟದ ಪ್ರದೇಶದಲ್ಲಿರುವ ಕಳ್ಳಭಟ್ಟಿ ತಯಾರಿಕೆ ಸ್ಥಳ| ದಾಳಿ ವೇಳೆ ಬೆಲ್ಲದ ಕೊಳೆ ಹಾಗೂ ಸಾರಾಯಿ ನಾಶ|
ಯಾದಗಿರಿ(ಏ.23): ಜಿಲ್ಲೆಯಲ್ಲೀಗ ಕಳ್ಳಭಟ್ಟಿ ದಂಧೆಯದ್ದೇ ಹಾವಳಿ. ವಿವಿಧ ರೀತಿಯ ಮದ್ಯ ಮಾರಾಟಕ್ಕೆ ನಿಷೇಧದ ನಂತರ, ಕಳ್ಳಭಟ್ಟಿ ದಂಧೆ ಭಾರಿ ಪ್ರಮಾಣದಲ್ಲಿ ತಲೆಯೆತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಮಧ್ಯೆ, ಎರಡು ದಿನಗಳ ಹಿಂದೆ ಯಾದಗಿರಿ ಸಮೀಪದ ಯರಗೋಳ ಗ್ರಾಮದಲ್ಲಿ ಕಳ್ಳಭಟ್ಟಿ ಕುಡಿದು ಯುವಕನೊಬ್ಬ ಬಲಿಯಾಗಿದ್ದಾನೆಂಬ ಹರಡಿದ ಸುದ್ದಿಗಳು ಮತ್ತಷ್ಟೂ ಆತಂಕ ಮೂಡಿಸಿದೆ. ಯರಗೋಳ ಸಮೀಪದ ತಾಂಡಾಗಳ ಬೆಟ್ಟಗುಡ್ಡಗಳಲ್ಲಿ ಕಳ್ಳಭಟ್ಟಿ ತಯಾರು ಜೋರಾಗಿಯೇ ನಡೆದಿದೆ. ಯುವಕನ ಸಾವಿಗೆ ಕಳ್ಳಭಟ್ಟಿ ಪ್ರಕರಣ ಎಂದು ಗೊತ್ತಾದರೆ ಮತ್ತೇನು ಕಾದಿದೆಯೋ ಆತಂಕ ಎಂಬ ಕಾರಣಕ್ಕಾಗಿ ಇದನ್ನು ಗೌಪ್ಯವಾಗಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ಮಾತುಗಳು ಯರಗೋಳ ವಲಯದಲ್ಲಿ ಮೂಡಿಬಂದಿವೆ.
ಲಾಕ್‌ಡೌನ್ ಎಫೆಕ್ಟ್: ಚರಂಡಿಯಲ್ಲಿ ಬಚ್ಚಿಟ್ಟು ಸಾರಾಯಿ ಮಾರಾಟ..!
ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಈ ಯುವಕನನ್ನು ಅಸ್ವಸ್ಥಗೊಂಡ ಎನ್ನುವ ಕಾರಣಕ್ಕೆ ಚಿತ್ತಾಪೂರ ತಾಲೂಕಿನ ನಾಲ್ವಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ತೋರಿಸಲಾಗಿತ್ತಾದರೂ, ವಿಪರೀತ ಮದ್ಯ ಸೇವಿಸಿದ್ದ ಆತನನ್ನು ವೈದ್ಯರು ಊರಿಗೆ ವಾಪಸ್ ಕಳುಹಿಸಿದ್ದರು. ಕಳ್ಳಭಟ್ಟಿ ಸೇವನೆಯೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಕೊರೋನಾ ಸೋಂಕಿನ ಇಂತಹ ಸಂದರ್ಭದಲ್ಲಿ ಇದನ್ನೂ ನಿರ್ಲಕ್ಷಿಸುವಂತಿಲ್ಲ.
ಪೊಲೀಸ್ ಇಲಾಖೆಗೆ ಕಳ್ಳಭಟ್ಟಿಗೆ ಪ್ರಕರಣಗಳು ಸವಾಲಾಗಿಸಿದೆ. ಕಳೆದೊಂದು ವಾರದಿಂದ ಕೆಲವು ಕಡೆಗಳಲ್ಲಿ ದಾಳಿ ನಡೆಸಿ, ಕಳ್ಳಭಟ್ಟಿ ನಾಶಪಡಿಸಿ, ಪ್ರಕರಣಗಳನ್ನು ದಾಖಲಿಸಿದರೂ, ಇದು ನಿಯಂತ್ರಣಕ್ಕೆ ಬರುತ್ತಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿಯನ್ನೇ ಕಳ್ಳಭಟ್ಟಿ ದಂಧೆಕೋರರು ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಅಬಕಾರಿ ಕಾಯ್ದೆಯಡಿ ಜಿಲ್ಲೆಯಲ್ಲಿ 33 ಪ್ರಕರಣಗಳನ್ನು ದಾಖಲಿಸಲಾಗಿದ್ದು, 41 ಜನರನ್ನು ಬಂಧಿಸಲಾಗಿದೆ. 331 ಲೀಟರ್ ಮದ್ಯ ನಾಶ ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಋಷಿಕೇಶ್ ತಿಳಿಸಿದ್ದಾರೆ. ಕಳ್ಳಭಟ್ಟಿ ತಯಾರಿಕೆಗೆ ಉಪಯೋಗಿಸಲಾಗುವ ಬೆಲ್ಲದ ದಾಸ್ತಾನು ಮಾರಾಟ ಸಹ ಭರದಿಂದ ನಡೆದಿದೆ. ಸಿಎಚ್ ಪೌಡರ್ ಹಾಗೂ ನವಸಾಗರ ಬಳಸಿಯೂ ಸಾರಾಯಿ ತಯಾರಿಕೆ ಅನೇಕರ ಜೀವಕ್ಕೆ ಕುತ್ತಾಗಿದೆ.
ಬುಧವಾರ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ್ ಅವರು ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿ, ಸುಮಾರು ಒಂದು ಲಾರಿಯಷ್ಟು ಬೆಲ್ಲದ ಹೆಂಟೆಗಳನ್ನು ಜಪ್ತಿ ಮಾಡಿದ್ದಾರೆ.