Asianet Suvarna News Asianet Suvarna News

ನಿಗೂಢವಾದ ಮಂಡ್ಯದ ಚಿನ್ನ ರಹಸ್ಯ !

ಮಂಡ್ಯದ ಚಿನ್ನದ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ.  ಏನದು ಚಿನ್ನದ ರಹಸ್ಯ ಇಲ್ಲಿದೆ ಮಾಹಿತಿ 

Police Investigates Mandya Gold Fraud Case snr
Author
Bengaluru, First Published Oct 20, 2020, 12:35 PM IST

ಮಂಡ್ಯ (ಅ.20): ಚಿನ್ನ ಗಿರವಿ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಾರ ಕಳೆದರೂ ಚಿನ್ನದ ರಹಸ್ಯ ಮಾತ್ರ ಇನ್ನೂ ಬಯಲಾಗಿಲ್ಲ. ಇದರೊಂದಿಗೆ ಚಿನ್ನಕ್ಕಾಗಿ ಪೊಲೀಸರು ನಡೆಸುತ್ತಿರುವ ಶೋಧವೂ ಪೂರ್ಣಗೊಳ್ಳದೆ ಎಲ್ಲವೂ ಗೊಂದಲಮಯವಾಗಿ ಉಳಿದಿದೆ. ಇದು ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ನಡೆಸುತ್ತಿರುವ ತಂತ್ರವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ವಂಚನೆ ಪ್ರಕರಣದಲ್ಲಿ ಎಷ್ಟುಮಂದಿ ಮಹಿಳೆಯರು ಚಿನ್ನ ಕಳೆದುಕೊಂಡಿದ್ದಾರೆ. ಅದರ ಒಟ್ಟು ಮೌಲ್ಯವೆಷ್ಟು?. ಪೊಲೀಸರೇ ಹೇಳಿರುವ ಪ್ರಕಾರ 36 ಮಹಿಳೆಯರ ವಿಚಾರಣೆ ನಡೆಸಿದ್ದು ಅವರು ಕಳೆದುಕೊಂಡಿರುವ ಚಿನ್ನ ಎಷ್ಟು?, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಒತ್ತೆ ಇಟ್ಟಿರುವ ಚಿನ್ನದ ಪ್ರಮಾಣ ಹಾಗೂ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈವರೆಗೆ ಎಷ್ಟುಚಿನ್ನದ ಬಗ್ಗೆ ಮಾಹಿತಿ ಸಿಕ್ಕಿದೆ. ಎಷ್ಟುಚಿನ್ನವನ್ನು ಮಾರಾಟ ಮಾಡಿದ್ದಾರೆ ಎಂಬೆಲ್ಲಲಾ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ.

ಮಂಡ್ಯದಲ್ಲೊಂದು ಮಹಾ ಮೋಸ - ಏನಿದು ಯುವ ಜೋಡಿ ಕಥೆ ..

ವಂಚನೆ ಪ್ರಕರಣದಲ್ಲಿ ಈವರೆಗೆ ಸೋನಾಲಿ ಎಂಬುವರನ್ನು ಹೊರತುಪಡಿಸಿದರೆ ಇನ್ಯಾರೂ ಇದುವರೆಗೆ ಪೊಲೀಸರಿಗೆ ದೂರು ಕೊಟ್ಟಿಲ್ಲ. ಪ್ರಕರಣದಲ್ಲಿ ಸೋಮಶೇಖರ್‌ ಬಿಟ್ಟರೆ ಇನ್ಯಾರನ್ನೂ ಪೊಲೀಸರು ಬಂಧಿಸಿಲ್ಲ. ಸೋಮಶೇಖರ್‌ ಜೊತೆ ಸಹಕರಿಸಿದರೆನ್ನಲಾದ ಪೂಜಾ ಎಂಬಾಕೆಯನ್ನು ಪೊಲೀಸರು ಕೇವಲ ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಆಕೆಯಿಂದ ತಿಳಿದುಬಂದ ಸಂಗತಿಗಳ ಗುಟ್ಟನ್ನು ಪೊಲೀಸರು ಇದುವರೆಗೂ ಬಿಟ್ಟುಕೊಟ್ಟಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರ ಈ ನಡೆ ಸಾರ್ವಜನಿಕರಲ್ಲಿ ಸಾಕಷ್ಟುಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೊಲೆ ಬೆದರಿಕೆ ಪತ್ರದ ಮಾಹಿತಿ ಇಲ್ಲ:  ಸೋಮಶೇಖರ್‌ ನಾಪತ್ತೆಯಾದ ಸಂದರ್ಭದಲ್ಲಿ ತನಗೆ ಕೊಲೆ ಬೆದರಿಕೆ ಇರುವುದಾಗಿ ಪೊಲೀಸ್‌ ಅಧೀಕ್ಷಕರಿಗೆ ಅಂಚೆ ಮೂಲಕ 17 ಮಂದಿ ಹೆಸರನ್ನು ಬರೆದು ಪತ್ರ ರವಾನಿಸಿದ್ದನು ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಅದರಲ್ಲಿ ಈವರೆಗೆ ಒಬ್ಬರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲವೆಂದು ತಿಳಿದುಬಂದಿದೆ. ಸೋಮಶೇಖರ್‌ ಪತ್ರ ಬರೆದಿರುವ ಬಗ್ಗೆ ಜಿಲ್ಲಾ ಪೊಲೀಸ್‌ ಅಧೀಕ್ಷಕರನ್ನು ಪ್ರಶ್ನಿಸಿದರೆ ಅದರ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಹೇಳುತ್ತಿದ್ದಾರೆ.

ಸೋಮಶೇಖರ್‌ನನ್ನು ಮುಂದಿಟ್ಟುಕೊಂಡು ಕೆಲವು ಮಹಿಳೆಯರು ಚಿನ್ನದ ವ್ಯವಹಾರ ನಡೆಸಿದ್ದರೂ ಅವರಾರ‍ಯರೂ ಬೆಳಕಿಗೆ ಬರುತ್ತಿಲ್ಲ. ಮೇಲ್ನೋಟಕ್ಕೆ ಅವರ ಕೈವಾಡವಿರುವಂತೆ ಕಂಡುಬರುತ್ತಿದ್ದರೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿಲ್ಲ. ಇದರ ಹಿಂದೆ ರಾಜಕೀಯ ಒತ್ತಡವಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವು ಮಹಿಳೆಯರು ಪ್ರಕರಣದಲ್ಲಿ ಸಿಲುಕುವ ಭಯದಿಂದ ಪ್ರಾಥಮಿಕ ಹಂತದಲ್ಲೇ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುಟುಂಬದವರ ಮನವೊಲಿಕೆ ಯತ್ನ:  ಸೋಮಶೇಖರ್‌ ತನಗೆ ಕೊಲೆ ಬೆದರಿಕೆ ಇರುವುದಾಗಿ ಪತ್ರ ಬರೆದಿರುವ 17 ಮಂದಿಯ ವಿರುದ್ಧ ಪೊಲೀಸರಿಗೆ ದೂರು ನೀಡಬಹುದೆಂಬ ಭಯದಿಂದ ಸೋಮಶೇಖರ್‌ ಚಿನ್ನ ವಹಿವಾಟು ನಡೆಸಲು ಸಹಕರಿಸಿದ್ದ ರಾಜಕೀಯ ಪಕ್ಷವೊಂದರ ಕೆಲವು ಮಹಿಳೆಯರು ಕುಟುಂಬದವರ ಮನವೊಲಿಸುವುದಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದಿಂದ ಆರೋಪಿ ಸೋಮಶೇಖರ್‌ನನ್ನು ಬಿಡಿಸಿಕೊಂಡು ಬರುವುದಾಗಿ ಭರವಸೆ ನೀಡಿ ಪ್ರಕರಣ ಇನ್ನಷ್ಟುದೊಡ್ಡದಾಗದಂತೆ ತಡೆಯಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಚಿನ್ನ ವಂಚನೆ ಪ್ರಕರಣದಲ್ಲಿ ಸೋಮಶೇಖರ್‌ ಸಿಲುಕಲು ಯಾವ ಯಾವ ಮಹಿಳೆಯರು ಕಾರಣಕರ್ತರು ಎಂಬ ಸತ್ಯ ಕುಟುಂಬದವರಿಗೆ ತಿಳಿದಿದ್ದರೂ ಅದನ್ನು ಬಯಲು ಮಾಡುತ್ತಿಲ್ಲ. ಒಮ್ಮೆ ಬಯಲು ಮಾಡಿದರೆ ರಾಜಕೀಯ ಷಡ್ಯಂತ್ರ ನಡೆಸಿ ಸೋಮಶೇಖರ್‌ನನ್ನೇ ಬಲಿಪಶು ಮಾಡುವರೆಂಬ ಭಯ ಕುಟುಂಬದವರನ್ನು ಕಾಡುತ್ತಿದೆ. ಇದೇ ಕಾರಣಕ್ಕಾಗಿ ಸೋಮಶೇಖರ್‌ ಜೈಲು ಸೇರಿದ್ದರೂ ಪ್ರಕರಣ ಸಂಬಂಧ ಕುಟುಂಬದವರು ಇದುವರೆಗೂ ಪೊಲೀಸರಿಗೆ ಯಾರ ಬಗ್ಗೆಯೂ ದೂರು ಕೊಡುವುದಕ್ಕೆ ಮುಂದಾಗಿಲ್ಲವೆಂದು ಹೇಳಲಾಗಿದೆ.

ಒಟ್ಟಿನಲ್ಲಿ ತಾವು ಪ್ರಕರಣದಲ್ಲಿ ಸಿಲುಕದಂತೆ ಪಾರಾಗುವುದಕ್ಕೆ ಏನೆಲ್ಲಾ ಕಸರತ್ತುಗಳನ್ನು ಮಾಡಬೇಕೋ ಅದೆಲ್ಲವನ್ನೂ ರಹಸ್ಯವಾಗಿಯೇ ರಾಜಕೀಯ ಪಕ್ಷದೊಳಗೆ ಗುರುತಿಸಿಕೊಂಡಿರುವ ಕೆಲವು ಮಹಿಳೆಯರು ಮಾಡುತ್ತಾ ತಮ್ಮ ಇಮೇಜಿಗೆ ಧಕ್ಕೆಯಾಗದಂತೆ ಜಾಗೃತಿ ವಹಿಸಿದ್ದಾರೆ.

ಸೋಮಶೇಖರ್‌ ಜೊತೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರು ಪ್ರಕರಣ ಬೆಳಕಿಗೆ ಬಂದ ಮೇಲೆ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಸೋಮಶೇಖರ್‌ ಬಳಿ ಚೆನ್ನಾಗಿ ತಿಂದಿರುವ ಕೆಲವು ಮಹಿಳೆಯರೂ ಇದ್ದಾರೆ. ಅವರೆಲ್ಲರೂ ಗುಂಪಿನಲ್ಲಿ ಗೋವಿಂದ ಎಂದು ಮಾಡಿಕೊಂಡು ಸುಮ್ಮನಾಗಿದ್ದಾರಷ್ಟೇ. ಕೆಲವೊಂದು ವಿಷಯಗಳನ್ನಷ್ಟೇ ಹೇಳುತ್ತಿದ್ದಾರೆಯೇ ವಿನಃ ಸತ್ಯವನ್ನು ಯಾರೂ ಬಾಯಿಬಿಡುತ್ತಿಲ್ಲ. ನಾನು ಎಲ್ಲ ಸಂಗತಿಗಳನ್ನು ದೂರಿನಲ್ಲಿ ತಿಳಿಸಿದ್ದೇನೆ ಎಂದು ಸೋನಾಲಿ ಹೇಳಿದರು.

ಚಿನ್ನ ಗಿರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದೆ. ಸೋಮವಾರಕ್ಕೆ ಸೋಮಶೇಖರ್‌ ಪೊಲೀಸ್‌ ಕಸ್ಟಡಿ ಪೂರ್ಣಗೊಳ್ಳಲಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಬಹುದು ಇಲ್ಲವೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಆದರೆ, ಪ್ರಕರಣದಲ್ಲಿ ಚಿನ್ನದ ರಹಸ್ಯ ನಿಗೂಢವಾಗಿಯೇ ಉಳಿದಿದೆ.

Follow Us:
Download App:
  • android
  • ios