ಕಲಬುರಗಿ(ಆ.30): ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಪೊಲೀಸರಿಂದ ಅಂತಾರಾಜ್ಯ ರೌಡಿಶೀಟರ್‌ ಮಿರ್ಜಾ ಮೊಹ್ಮದ್‌ ಅಬ್ದುಲ್‌ ಬೇಗ್‌ ಅಲಿಯಾಸ್‌ ಫಯೀಮ್‌ ಮಿರ್ಜಾ (39) ಮೇಲೆ ಗುಂಡಿನ ದಾಳಿ ನಡೆದಿದೆ. ಸದರಿ ಗುಂಡಿನ ದಾಳಿಯಲ್ಲಿ ರೌಡಿಯ ಬಲ ಕಾಲಿಗೆ ಗುಂಡೇಟು ತಗುಲಿದ್ದು ಗಾಯಗೊಂಡ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ಜೂನ್‌ 29ರಂದು ಜೇವರ್ಗಿ ರಸ್ತೆ ರೇಲ್ವೆ ಅಂಡರ್‌ ಪಾಸ್‌ ಬಳಿ ರಾಮನಗರ ನಿವಾಸಿ ಸಾಗರ್‌ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಯತ್ನ ಮಾಡಿದ್ದ ಆರೋಪ ಎದುರಿಸುತ್ತಿದ್ದ ಫಯೀಮ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಗುರಿ ಪಡಿಸಿದ್ದರು. ಇದೇ ಪ್ರಕರಣದಲ್ಲಿ ಶನಿವಾರ ಬೆಳಿಗ್ಗೆಯೇ ಆತ ಬಳಸಿ ಬಚ್ಚಿಟ್ಟಿದ್ದ ಆಯುಧಗಳ ಪಂಚನಾಮೆ, ಜಪ್ತಿಗೆಂದು ಪೊಲೀಸರು ಕರೆದೊಯ್ಯುತ್ತಿದ್ದರು.

ಬರ್ಬರ ಹತ್ಯೆಗೆ ಬೆಚ್ಚಿಬಿದ್ದ ಕಲಬುರಗಿ ಮಂದಿ..!

ಈ ವೇಳೆ ಕಲಬುರಗಿ- ನಾಗನಹಳ್ಳಿ- ಶಹಾಬಾದ್‌ ರಸ್ತೆಯ ಕೆಸರಟಗಿ ಗಾರ್ಡನ್‌ ಹತ್ತಿರ ರೌಡಿ ಫಯೀಮ್‌ ಜೊತೆಗಿದ್ದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದು ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಹಾಗೂ ಆತನನ್ನು ವಶಕ್ಕೆ ಪಡೆಯಲು ಫೈರಿಂಗ್‌ ಮಾಡಿದ್ದಾರೆ. ಸ್ಟೇಷನ್‌ ಬಜಾರ್‌ ಠಾಣೆ ಸಿಪಿಐ ಲಾಲ್‌ಸಾಬ್‌ ಗೌಂಡಿ ಫೈರಿಂಗ್‌ ಮಾಡಿದ್ದಾರೆ. ಆರೋಪಿ ಫಯೀಂ ಅಲಿ ಮಿರ್ಜಾ ಕಾಲಿಗೆ 2 ಗುಂಡು ತಗುಲಿವೆ. ಈ ಘಟನೆಯಲ್ಲಿ ಸ್ಟೇಷನ್‌ ಬಜಾರ್‌ ಠಾಣೆಯ ಪೇದೆಗಳಾದ ಅಂಬಾದಾಸ್‌ ಹಾಗೂ ರಫೀಕ್‌ ಗಾಯಗೊಂಡು ಯುನೈಟೆಡ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಆರೋಪಿ ಮಿರ್ಜಾ ಮೊಹ್ಮದ್‌ ಅಬ್ದುಲ್‌ ಬೇಗ್‌ ಅಲಿಯಾಸ್‌ ಫಯೀಮ್‌ ಮಿರ್ಜಾ (39) ವಿರುದ್ಧ ಕೊಲೆ ಯತ್ನ, ಸುಲಿಗೆ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಏಳು ಪ್ರಕರಣಗಳು ದಾಖಲಾಗಿವೆ. ಹೈದರಾಬಾದ್‌ನಲ್ಲೂ ಕೊಲೆ ಯತ್ನ ಸಂಬಂಧ ಕೇಸ್‌ ದಾಖಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌ ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಫಯೀಮ್‌ ವಿರುದ್ಧದ ಪ್ರಕರಣಗಳು

1) ಸ್ಟೇಷನ್‌ ಬಜಾರ್‌ ಠಾಣೆ ವ್ಯಾಪ್ತಿಯಲ್ಲಿ 1997ರಲ್ಲಿ ದಾಖಲಾದ ಐಪಿಸಿ ಕಲಂ 392 ಪ್ರಕರಣ
2) ಇದೇ ಠಾಣೆಯಲ್ಲಿ 2020 ಜೂನ್‌ರಲ್ಲಿ ದಾಖಲಾದ 307 ಕೊಲೆ ಯತ್ನ ಘಟನೆಯ ಪ್ರಕರಣ
3) ಅಶೋಕ ನಗರ ಠಾಣೆಯಲ್ಲಿ 1998ರಲ್ಲಿ, 2017ರಲ್ಲಿ ದಾಖಲಾದ 2 ಪ್ರಕರಣ
4) ರಾಘವೇಂದ್ರ ನಗರ ಠಾಣೆಯಲ್ಲಿ 2017ರಲ್ಲಿ ದಾಖಲಾದ ಐಪಿಸಿ ಕಲಂ 307 ಅಡಿ ಪ್ರಕರಣ
5) ರೋಜಾ ಠಾಣೆಯಲ್ಲಿ 2019 ರಲ್ಲಿ ದಾಖಲಾದ ಐಪಿಸಿ 307 ಪ್ರಕರಣ
6) ಫರತಾಬಾದ್‌ ಠಾಣೆಯಲ್ಲಿ ಐಪಿಸಿ ಕಲಂ 302 ಅಡಿ ದಾಖಲಾದ ಎಸ್ಸಿ, ಎಸ್ಟಿಅಟ್ರಾಸಿಟಿ ತಡೆ ಕಾಯ್ದೆಯಡಿಯಲ್ಲಿನ ಪ್ರಕರಣ