ಬೆಂಗಳೂರು [ಅ.07]:  ಕಳವು ಮಾಡಿದ್ದ ವಸ್ತುಗಳನ್ನು ಬಚ್ಚಿಟ್ಟಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ಮೇಲೆ ಜಾಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ.

ರೌಡಿಶೀಟರ್‌ಗಳಾದ ನಂದಿನಿ ಲೇಔಟ್‌ ನಿವಾಸಿ ವಿಜಯ್‌ ಅಲಿಯಾಸ್‌ ದಡಿಯಾ (24) ಮತ್ತು ಹನುಮಂತ ಅಲಿಯಾಸ್‌ ಮೋರಿ ಹನಿ (25) ಬಂಧಿತರು. ಘಟನೆಯಲ್ಲಿ ಹೆಡ್‌ ಕಾನ್ಸ್‌ಟೇಬಲ್‌ಗಳಾದ ಶ್ರೀನಿವಾಸ್‌ ಮತ್ತು ನರೇಶ್‌ ಎಂಬುವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯ್‌ ನಂದಿನಿ ಲೇಔಟ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದು, ಹನುಮಂತ ಇದೇ ಠಾಣೆಯ ಹಳೆಯ ಆರೋಪಿಯಾಗಿದ್ದಾನೆ. ಇಬ್ಬರ ವಿರುದ್ಧ ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ, ಸರಗಳ್ಳತನ, ಕಳವು ಮತ್ತು ದ್ವಿಚಕ್ರ ವಾಹನ ಕಳ್ಳತನ ಸೇರಿದಂತೆ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಆರೋಪಿಗಳಿಬ್ಬರು ಇತ್ತೀಚೆಗೆ ರಾಜ್‌ಕುಮಾರ್‌ ರಸ್ತೆಯಲ್ಲಿ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ಉತ್ತರ ವಿಭಾಗದ ಜಾಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದವು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಕದ್ದ ವಸ್ತುಗಳನ್ನು ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಇಡುತ್ತಿದ್ದಾಗಿ ಬಾಯ್ಬಿಟ್ಟಿದ್ದರು.

ಭಾನುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಬಂಧಿತ ಆರೋಪಿಗಳನ್ನು ಪೊಲೀಸರು ಸ್ಥಳ ಮಹಜರ ಮಾಡಲು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಬೆಂಗಾವಲಿನಲ್ಲಿದ್ದ ಹೆಡ್‌ಕಾನ್ಸ್‌ಟೇಬಲ್‌ಗಳಾದ ನರೇಶ್‌ ಮತ್ತು ಶ್ರೀನಿವಾಸ್‌ ಅವರನ್ನು ತಳ್ಳಿ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಕೂಡಲೇ ಜಾಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ಯಶವಂತ್‌ ಮತ್ತು ಸಬ್‌ ಇನ್ಸ್‌ಪೆಕ್ಟರ್‌ ಲೇಪಾಕ್ಷಿಮೂರ್ತಿ ತಲಾ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂವಿಸಿದ್ದರು. ಆರೋಪಿಗಳು ಪುನಃ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಬಂಧಿತರು ಕೊಲೆ, ಕೊಲೆ ಯತ್ನ, ಸುಲಿಗೆ, ಬೆದರಿಕೆ ಸೇರಿ ಸುಮಾರು 20 ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ರೌಡಿಶೀಟರ್‌ ಅಶೋಕ್‌ ಅಲಿಯಾಸ್‌ ಮತ್ತಿ ಸಹಚರರಾಗಿದ್ದಾರೆ. ಆತನ ಸೂಚನೆ ಮೇರೆಗೆ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಇದೆ. ಇತ್ತೀಚೆಗೆ ಮೊಬೈಲ್‌ ವಿಚಾರವಾಗಿ ಜೈಲಿನಲ್ಲಿ ಜಗಳ ಮಾಡಿದ್ದ ರೌಡಿಶೀಟರ್‌ ಪ್ರಮೋದ್‌ ಕುಟುಂಬದ ಸದಸ್ಯರಿಗೆ ಅಶೋಕ್‌ನ ಮತ್ತೊಂದು ತಂಡ ಪ್ರಾಣ ಬೆದರಿಕೆ ಹಾಕಿದ್ದು, ಈ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸರು ರೌಡಿಶೀಟರ್‌ ಅಶೋಕ್‌ ಐವರು ಸಹಚರರನ್ನು ಬಂಧಿಸಿದ್ದರು.