ರಾಘು ನಾಯ್ಕ ಕಾಕರಮಠ

ಅಂಕೋಲಾ(ಸೆ.28): ತಾಲೂಕಿಗೆ ಸಬ್‌ಜೈಲ್‌ ಬೇಕೆಂಬ ಕೂಗು ಅರಣ್ಯರೋದನವಾಗಿಯೇ ಉಳಿದುಕೊಂಡಿದೆ. ಕಾರಣ ಇಲ್ಲಿ ಸಬ್‌ಜೈಲ್‌ ಇಲ್ಲದ ಪರಿಣಾಮ ಆರೋಪಿಗಳು, ಪೊಲೀಸರು ಪರದಾಡುವಂತಾಗಿದೆ.

ಅಪರಾಧ ಹಾಗೂ ಸಿವಿಲ್‌ ಪ್ರಕರಣಗಳು ದಾಖಲಾಗುವಲ್ಲಿ ಅಂಕೋಲಾ ಪೊಲೀಸ್‌ ಠಾಣೆ ಜಿಲ್ಲೆಯಲ್ಲೇ ದ್ವಿತೀಯ ಸ್ಥಾನದಲ್ಲಿದೆ. 2019ರ ಸಾಲಿನಲ್ಲಿ ಸುಮಾರು 550ಕ್ಕೂ ಹೆಚ್ಚಿನ ಪ್ರಕರಣಗಳು ಇಲ್ಲಿ ದಾಖಲಾಗಿದ್ದಿದೆ. ಅಪರಾಧ ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳನ್ನು ಇಲ್ಲಿನ ಪೊಲೀಸರು ನೆರೆಯ (35 ಕಿ.ಮೀ.) ಕಾರವಾರದ ಜೈಲಿಗೆ ಸಾಗಿಸುವಲ್ಲಿ ತೊಂದರೆಯಾಗಿ ಪರಿಣಮಿಸಿದೆ.

ಪೊಲೀಸರಿಗೆ ಹೆಚ್ಚು ತಲೆಬಿಸಿ:

ಒಂದು ವೇಳೆ ನ್ಯಾಯಾೕಧಿಶರು ಅಥವಾ ಸರ್ಕಾರಿ ಅಭಿಯೋಜಕರು ರಜೆಯ ಮೇಲಿದ್ದರೆ ಕುಮಟಾ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗುತ್ತದೆ. ಪೊಲೀಸರಿಗೆ ಕಾರವಾರದ ಸಬ್‌ಜೈಲಿನಿಂದ ಅಂಕೋಲಾ ಇಲ್ಲವೇ ಕುಮಟಾ ನ್ಯಾಯಾಲಯಕ್ಕೆ ಕರೆತರುವುದೇ ಸಾಹಸದ ಸಂಗತಿಯಾಗಿದೆ.

ಇಟಲಿಯ ಪಿಯಾ​ಸೆಂಜಾ ಮ್ಯೂಸಿಯಂನಲ್ಲಿ ಕನ್ನಡದ ಕವಿತೆ

ವಿಚಾರಣೆಯ ಆರೋಪಿಗೆ ಕೈಕೊಳ ತೊಡಿಸಬಾರದು ಎಂಬ ಮಾನವ ಹಕ್ಕುಗಳ ಆಯೋಗದ ಸ್ಪಷ್ಟಆದೇಶವಿದೆ. ಹಾಗಾಗಿ ಜಾಗರೂಕತೆಯಿಂದಲೇ ದೂರದ ಕಾರವಾರದಿಂದ ಆರೋಪಿಗಳನ್ನು ಭದ್ರತೆಯಿಂದಲೇ ಕರೆತರಬೇಕಾಗುತ್ತದೆ. ಆರೋಪಿ ಪರಾರಿಯಾದರೆ ಪೊಲೀಸರು ತಲೆದಂಡ ತೆರಬೇಕಾಗುತ್ತದೆ. ಇದು ಪೊಲೀಸರ ಗೋಳು ಹಾಗೆ ಆರೋಪಿಗಳನ್ನು ಕಾರವಾರಕ್ಕೆ ಸಾಗಿಸುವುದರಿಂದ ಆರೋಪಿಯನ್ನು ಭೇಟಿಯಾಗಲು ಬರುವವರಿಗೆ ತೊಡಕಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಒಂದೇ ದಿನಕ್ಕೆ ಆರೋಪಿಗೆ ಜಾಮೀನು ದೊರಕಿದರೂ ದೂರದ ಕಾರವಾರ ಜೈಲಿನಿಂದ ಬಿಡುಗಡೆಗೆ ವಿಳಂಬವಾಗುತ್ತದೆ. ಇನ್ನು ಜಾತ್ರೆ ಹಾಗೂ ಇನ್ನಿತರ ಬಂದೋಬಸ್‌್ತ ಸಂದರ್ಭಗಳಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವುದರಿಂದ ಆರೋಪಿಗಳನ್ನು ಈ ಸಮಯದಲ್ಲಿ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರಲು ಪರದಾಡಬೇಕಾಗುತ್ತದೆ.

ಹೆಚ್ಚಾದ ಸರ್ಕಾರಿ ವೆಚ್ಚ:

ನಿತ್ಯ ಕಾರವಾರದಿಂದ ಆರೋಪಿಗಳನ್ನು ಅಂಕೋಲಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿರುವುದರಿಂದ ಸರ್ಕಾರಿ ವೆಚ್ಚವೂ ಅಧಿಕವಾಗಿದೆ. ಇದರ ಭಾರ ಜನಸಾಮಾನ್ಯರಿಗೆ ಅರಿವಿಲ್ಲದಂತೆ ಬಿದ್ದಿದೆ. ಆದರೆ, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಗೊಂದಲಗಳಿಂದಾಗಿ ಇಲ್ಲಿ ಸಬ್‌ಜೈಲ್‌ ಆಗುವುದು ಮಾತ್ರ ಕನಸಾಗಿಯೆ ಉಳಿದಿದೆ. ಕಂದಾಯ ಇಲಾಖೆಯವರು ಸಬ್‌ಜೈಲ್‌ ನಿರ್ವಹಣೆ ನಮಗೆ ಬೇಡ. ಬಂಧಿಖಾನೆ ಇಲಾಖೆ ನೇರವಾಗಿ ಪೊಲೀಸರಿಗೆ ನಿರ್ವಹಣೆ ನೀಡಲಿ ಎನ್ನುವ ವಾದದ ಇಲಾಖೆಗಳ ಗೊಂದಲದಿಂದಾಗಿ ಉನ್ನತ ಮಟ್ಟದಲ್ಲಿ ಕಡತಗಳು ಕೂಡ ಧೂಳು ಹಿಡಿಯುತ್ತಲಿದೆ.

ಸಬ್‌ಜೈಲ್‌ ಕೆಡವಿ ತಹಸೀಲ್ದಾರ ಕಚೇರಿ:

ಅಂಕೋಲಾದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸಬ್‌ಜೈಲ್‌ ಇತ್ತು. ಇದನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 2009ರಲ್ಲಿ ಕೆಡವಿದ ಪರಿಣಾಮ ಅಂಕೋಲಾದಲ್ಲಿ ಸಬ್‌ಜೈಲ್‌ ಕಣ್ಮರೆಯಾಯಿತು.

ಹಿಚ್ಕಡದಲ್ಲಿ ವಿರೋಧ:

ಜಿಲ್ಲಾ ಕಾರಾಗೃಹವನ್ನು ಅಂಕೋಲಾದ ಶೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿರುವ ಹಿಚ್ಕಡದಲ್ಲಿ ನಿರ್ಮಿಸಲು ಕಳೆದ 2 ವರ್ಷದ ಹಿಂದೆ ತಿರ್ಮಾನಿಸಲಾಗಿತ್ತು. ಆದರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹದ ನಿರ್ಮಾಣವನ್ನು ಕೈಬಿಡಲಾಗಿತ್ತು.

ಅಂಕೋಲಾದಲ್ಲಿ ಸಬ್‌ಜೈಲು ಸ್ಥಾಪನೆಯಾಗಬೇಕಾಗಿರುವುದು ಅಗತ್ಯವಾಗಿದೆ. ಈ ಬಗ್ಗೆ ಸಾಕಷ್ಟುಬಾರಿ ಒತ್ತಾಯಿಸಿ ಮನವಿಗಳನ್ನು ನೀಡಿದ್ದೇವೆ. ಅದ್ಯಾವುದೂ ಕಾರ್ಯಗತವಾಗಿಲ್ಲ. 10 ವರ್ಷಗಳ ಹಿಂದೆ ಸಬ್‌ಜೈಲ ನಿರ್ಮಿಸಲು ಪರವಾನಿಗೆಯ ಆದೇಶ ಕೂಡ ಆಗಿತ್ತು. ಸ್ಥಳಾವಕಾಶ ಇಲ್ಲದ ಕಾರಣ ಮಂಜೂರಾದ ಸಬ್‌ಜೈಲ್‌ ವಾಪಸ್ಸು ಹೋಗಿದೆ. ಈ ಬಗ್ಗೆ ಪರಿಶೀಲಿಸಿ ಸಬ್‌ಜೈಲ್‌ ಸ್ಥಾಪನೆಯಾಗುವಂತಾಗಬೇಕು ಎಂದು ನ್ಯಾಯವಾದಿ ಉಮೇಶ ನಾಯ್ಕ ಅವರು ತಿಳಿಸಿದ್ದಾರೆ. 

ಅಂಕೋಲೆಯಲ್ಲಿ ಸಬ್‌ಜೈಲ ಸ್ಥಾಪನೆಯಾದರೆ ಶೀಘ್ರ ಸೇವೆ ಜೊತೆಗೆ ಆಡಳಿತ ವ್ಯವಸ್ಥೆಗೆ ಹೊಸ ಸ್ಪರ್ಷ ಸಿಗಲಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಕೃಷ್ಣಾನಂದ ನಾಯಕ ಅವರು ಹೇಳಿದ್ದಾರೆ.