ಹಾಸನ (ಮಾ.17):  ಮೇಲಧಿಕಾರಿಗಳ ಗಮನಕ್ಕೆ ತಾರದೆ ವಾಹನ ಹಾಗೂ ಶ್ರೀಗಂಧ ಕಳ್ಳನನ್ನು ನಕಲಿ ಕೋಳ ಮೂಲಕ ಹೆದರಿಸಿ ಪ್ರತಿ ತಿಂಗಳು ಮಾಮೂಲಿ ನಿಗದಿ ಮಾಡಿಕೊಂಡಿದ್ದ ಆರೋಪದಲ್ಲಿ ಸೈಬರ್‌ ಅಪರಾಧ ಠಾಣೆಯ ಮುಖ್ಯ ಪೇದೆ ಧರ್ಮ ಎಂಬಾತನನ್ನು ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.

ಜಿಲ್ಲಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಆರ್‌.ಧರ್ಮ ಅಮಾನತಾಗಿರುವ ಮುಖ್ಯ ಪೇದೆ. ಹಾಸನ ನಗರದ ಪೆನ್ಷನ್‌ ಮೊಹಲ್ಲಾದಲ್ಲಿ ಫೆ.23ರಂದು ಫಾಚ್ರ್ಯೂನರ್‌ ಕಾರು ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಹಿಡಿಯಲು ಹೋದ ವೇಳೆ ನಗರದ ಕಾಟಿಹಳ್ಳಿ ನಿವಾಸಿ ಮಂಜುನಾಥ  ಎಂಬಾತನ ಮನೆಯಲ್ಲಿ 300 ಕೆ.ಜಿ ಶ್ರೀಗಂಧ ಪತ್ತೆಯಾಗಿತ್ತು.

ಎಸ್ಪಿ ಶ್ರೀನಿವಾಸಗೌಡರ ನಿರ್ದೇಶನದಂತೆ ಪ್ರಕರಣದ ತನಿಖೆ ಆರಂಭಿಸಿದ ಹಾಸನ ನಗರ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರ ತಂಡ ವಿಚಾರಣೆ ನಡೆಸುವ ವೇಳೆ ಪ್ರಮುಖ ಆರೋಪಿ ಮಂಜೇಗೌಡ ನೀಡಿದ ಹೇಳಿಕೆ ಆಧರಿಸಿ ಮುಖ್ಯ ಪೇದೆ ಧರ್ಮ ಎಂಬಾತನನ್ನು ಅಮಾನತು ಮಾಡಲಾಗಿದೆ.

ಭಟ್ಕಳ: ಭಿಕ್ಷಾಟನೆ ನೆಪದಲ್ಲಿ ಚಿನ್ನ, ನಗದು ದೋಚಿದ ಮಹಿಳೆ .

ನಕಲಿ ಕೋಳ ಬಳಕೆ:  ಈ ಹಿಂದೆಯೇ ಶ್ರೀಗಂಧ ಕಳ್ಳನ ಸಂಪರ್ಕ ಹೊಂದಿದ್ದ ಪೇದೆ ಧರ್ಮ ಇಲಾಖೆಯ ಬೇಡಿಗಳಲ್ಲದೆ ತನ್ನದೇ ಸ್ವಂತ ನಕಲಿ ಕೋಳ ಬಳಸಿ ಕಳ್ಳರನ್ನು ಹೆದರಿಸಿ ಪ್ರತಿ ತಿಂಗಳು ತನಗೆ ಇಂತಿಷ್ಟುಮಾಮೂಲಿ ನೀಡುವಂತೆ ನಿಗದಿ ಮಾಡಿಕೊಂಡಿದ್ದ ಆರೋಪದ ಮೇಲೆ ಆತನನ್ನು ಅಮಾನತು ಮಾಡಲಾಗಿದೆ.

ಶ್ರೀಗಂಧ ಹಾಗೂ ವಾಹನ ಕಳವು ಆರೋಪದ ಮೇಲೆ ಬಂಧಿತನಾದ ಮಂಜುನಾಥ ಹೇಳಿರುವ ಪ್ರಕಾರ ಇದೇ ಮುಖ್ಯ ಪೇದೆ ಧರ್ಮ ಯಾವ ಮೇಲಾಧಿಕಾರಿಗಳ ಗಮನಕ್ಕೂ ತಾರದೆ ಜತೆಯಲ್ಲಿ ಮೇಲಾಧಿಕಾರಿಗಳು ಇಲ್ಲದಿದ್ದರೂ ಈ ಹಿಂದೆ ತನ್ನನ್ನು ಬೇಡಿ ಹಾಕಿ ಬಂಧಿಸಿ, ಮೈಸೂರಿನ ಉದಯಗಿರಿಗೆ ಕರೆದೊಯ್ದು, ಕದ್ದು ಶ್ರೀಗಂಧ ಮಾರಾಟ ಮಾಡಿದ್ದ ವ್ಯಕ್ತಿಯನ್ನು ಸಂಪರ್ಕಿಸಿ ಆತನ ಜತೆ ಸಂಧಾನ ಮಾಡಿಕೊಂಡಿದ್ದ.

ಹಾಗೆಯೇ, ಮತ್ತೊಮ್ಮೆ ತುಮಕೂರಿನ ಶಿರಾಕ್ಕೆ ಕರೆದೊಯ್ದು ಅಲ್ಲಿಯೂ ತನ್ನಿಂದ ಶ್ರೀಗಂಧ ಖರೀದಿಸಿದ್ದ ವ್ಯಕ್ತಿಯನ್ನು ಸಂಪರ್ಕಿಸಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದ. ಆ ನಂತರದಲ್ಲಿ ನನ್ನನ್ನು ಬಿಟ್ಟು ಕಳುಹಿಸಿ ಪ್ರತಿ ತಿಂಗಳು ಹತ್ತು ಸಾವಿರ ಮಾಮೂಲಿ ನೀಡುವಂತೆ ನಿಗದಿ ಮಾಡಿಕೊಂಡಿದ್ದ ಎಂಬ ಹೇಳಿಕೆ ಮೇರೆಗೆ ಆತನನ್ನು ಅಮಾನತು ಮಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡರು ಆದೇಶ ಹೊರಡಿಸಿದ್ದಾರೆ.

ಪ್ರಕರಣ ಆರೋಪದ ಮೇಲೆ ಸೈಬರ ಪೊಲೀಸ್‌ ಠಾಣೆಯ ಪೇದೆ ಸೋಮಶೇಖರ್‌ ಎಂಬಾತನನ್ನು ಅಮಾನತು ಮಾಡಲಾಗಿತ್ತು. ಆದರೆ, ಇದೀಗ ಪೊಲೀಸ್‌ ಪೇದೆಯೇ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ನಕಲಿ ಕೋಳ ಬಳಸಿ ಕಳ್ಳರನ್ನು ಈ ಮಟ್ಟಕ್ಕೆ ಏಮಾರಿಸಿರುವುದು ನಿಜಕ್ಕೂ ದುರಂತ.